34 ವರ್ಷಗಳ ಬಳಿಕ ಬಯಲಾದ 'ದೃಶ್ಯಂ' ಶೈಲಿಯ ಕೊಲೆ ರಹಸ್ಯ; ಮನೆಯ ಅಡಿಯಲ್ಲಿ ಹೂಳಲಾಗಿತ್ತು ಮಹಿಳೆಯ ಮೃತದೇಹ!

ಸಾಂದರ್ಭಿಕ ಚಿತ್ರ
ಅಹ್ಮದಾಬಾದ್: 'ದೃಶ್ಯಂ' ಸಿನೆಮಾ ಶೈಲಿಯಲ್ಲಿ 1992ರಲ್ಲಿ ಮಹಿಳೆಯೊಬ್ಬರನ್ನು ಕೊಲೆ ಮಾಡಿ ಮನೆಯ ಅಡಿಯಲ್ಲಿ ಹೂತಿದ್ದ ಪ್ರಕರಣವು 34 ವರ್ಷಗಳ ಬಳಿಕ ಬೆಳಕಿಗೆ ಬಂದಿದೆ. ಈ ಸಂಬಂಧ ಅಹ್ಮದಾಬಾದ್ ನಗರ ಪೊಲೀಸರ ಅಪರಾಧ ವಿಭಾಗ (ಡಿಸಿಬಿ) ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದು, ಇಬ್ಬರು ಸಹೋದರರನ್ನು ಬಂಧಿಸಿದೆ. ಇನ್ನಿಬ್ಬರು ಆರೋಪಿಗಳು ಮೃತಪಟ್ಟಿದ್ದಾರೆ.
ಫರ್ಝಾನಾ ದೋಷು ರಾಧನ್ಪುರಿ ಅಲಿಯಾಸ್ ಶಬ್ನಮ್ ಎಂಬ ಮಹಿಳೆಯ ಅವಶೇಷಗಳನ್ನು ಎಪ್ರಿಲ್ 29, 2026ರಂದು ಅಹ್ಮದಾಬಾದ್ನ ವಟ್ವಾ ಪ್ರದೇಶದ ಕುತುಬ್ನಗರದಲ್ಲಿನ ಮನೆಯೊಂದರ ಅಡಿಯಲ್ಲಿ 14 ಅಡಿ ಆಳದ ಒಳಚರಂಡಿ ಗುಂಡಿಯಲ್ಲಿ ಪತ್ತೆ ಹಚ್ಚಲಾಗಿದೆ. ಮಹಿಳೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ಬಳಿಕ ಮೃತದೇಹ ಹೂಳಲಾಗಿತ್ತು ಎಂದು ಆರೋಪಿಸಲಾಗಿದೆ.
ಪ್ರಕರಣದಲ್ಲಿ ಶಂಸುದ್ದೀನ್ ಮೂಸಾಜಿ ಖೇಡಾವಾಲಾ ಮತ್ತು ಅವರ ಹಿರಿಯ ಸಹೋದರ ಇಕ್ಬಾಲ್ ಮೂಸಾಜಿ ಖೇಡಾವಾಲಾ ಬಂಧಿತರಾಗಿದ್ದಾರೆ. ಖೇಡಾವಾಲಾ ಸಹೋದರರ ಸ್ನೇಹಿತ ಅಬ್ದುಲ್ ಕರೀಮ್ ಯಾಕೂಬ್ಜಿ ಜವ್ರಾವಾಲಾ ಚಿಪಾ ಹಾಗೂ ಅವಶೇಷಗಳು ಪತ್ತೆಯಾದ ಮನೆಯ ಮಾಲಕಿಯಾಗಿದ್ದ ಸಲ್ಯಾಬೀಬಿ ಸಮತ್ಖಾನ್ ಪಠಾಣ್ ಮೃತಪಟ್ಟಿರುವ ಇನ್ನಿಬ್ಬರು ಆರೋಪಿಗಳು.
ಅಪರಾಧ ವಿಭಾಗದ ಇನ್ ಸ್ಪೆಕ್ಟರ್ ಎ.ಪಿ. ಜೆಬಾಲಿಯಾ ನೀಡಿದ ದೂರಿನ ಆಧಾರದ ಮೇಲೆ ಮೇ 8ರಂದು ಎಫ್ಐಆರ್ ದಾಖಲಾಗಿದ್ದು, ಮನೆಯ ಅಡಿಯಲ್ಲಿ ಮಹಿಳೆಯ ಮೃತದೇಹ ಹೂಳಲಾಗಿದೆ ಎಂಬ ಗೌಪ್ಯ ಮಾಹಿತಿಯ ಮೇರೆಗೆ ತನಿಖೆ ಆರಂಭಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
‘ಭೂತ ಅಥವಾ ಆತ್ಮವನ್ನು ತೊಲಗಿಸಲು’ ಕುಟುಂಬವೊಂದು ಕೆಲವು ಆಚರಣೆಗಳನ್ನು ನಡೆಸುತ್ತಿದೆ ಎಂಬ ಮಾಹಿತಿ ಅಪರಾಧ ವಿಭಾಗಕ್ಕೆ ಲಭಿಸಿತ್ತು. ಇದರಿಂದ ಹಿಂಸಾತ್ಮಕ ಸಾವಿನ ಅನುಮಾನ ಹೆಚ್ಚಿತ್ತು ಎಂದು ಮೂಲಗಳು ತಿಳಿಸಿವೆ.
ತನಿಖೆ ವೇಳೆ ಪೊಲೀಸರು ಕುತುಬ್ನಗರದ ಲೇನ್ ಸಂಖ್ಯೆ 3ರ ಮನೆ ಸಂಖ್ಯೆ 10ಕ್ಕೆ ತೆರಳಿದ್ದರು. ಮೃತಪಟ್ಟಿದ್ದ ಸಲ್ಯಾಬೀಬಿ ಸಮತ್ಖಾನ್ ಪಠಾಣ್ ಅವರು ಮನೆಯನ್ನು ಎರಡು ಭಾಗಗಳಾಗಿ ವಿಭಜಿಸಿ, ಒಂದು ಭಾಗವನ್ನು ಮಗನಿಗೆ ಹಾಗೂ ಇನ್ನೊಂದು ಭಾಗವನ್ನು ವಿಚ್ಛೇದಿತ ಮಗಳಿಗೆ ನೀಡಿದ್ದರು. ಅವಶೇಷಗಳು ಪತ್ತೆಯಾದ ಭಾಗ ಇದೇ ಮನೆಯೊಂದರ ಅಡಿಯಲ್ಲಿತ್ತು.
ಎಪ್ರಿಲ್ 29ರಂದು ಎಫ್ಎಸ್ಎಲ್ ಅಧಿಕಾರಿಗಳು ಹಾಗೂ ತಹಶೀಲ್ದಾರರ ಸಮ್ಮುಖದಲ್ಲಿ ಮನೆಯ ಒಂದು ಭಾಗವನ್ನು ಅಗೆದಾಗ ಮೂಳೆಗಳು, ಹಲ್ಲುಗಳು ಮತ್ತು ಕೂದಲು ಸೇರಿದಂತೆ ಮಾನವ ಅವಶೇಷಗಳು ಪತ್ತೆಯಾಗಿದ್ದವು.
ಅವಶೇಷಗಳನ್ನು ಬಿಜೆ ವೈದ್ಯಕೀಯ ಕಾಲೇಜಿನ ವಿಧಿವಿಜ್ಞಾನ ವಿಭಾಗಕ್ಕೆ ಕಳುಹಿಸಲಾಗಿದ್ದು, ಅವು ಮಹಿಳೆಯ ದೇಹದ ಅವಶೇಷಗಳೆಂದು ದೃಢಪಟ್ಟಿತ್ತು. ಬಳಿಕ ಡಿಎನ್ಎ ಪರೀಕ್ಷೆಗಾಗಿ ಅಹ್ಮದಾಬಾದ್ ನ ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು.
ಅಪರಾಧ ವಿಭಾಗವು ಮುಂಬೈ ಹಾಗೂ ಧೋಲ್ಕಾದಲ್ಲಿ ಪತ್ತೆ ಹಚ್ಚಿದ್ದ ಫರ್ಝಾನಾ ಅವರ ಸಹೋದರ ಮತ್ತು ಸಹೋದರಿಯ ರಕ್ತದ ಮಾದರಿಗಳ ಡಿಎನ್ಎಯೊಂದಿಗೆ ಅವಶೇಷಗಳಿಂದ ಸಂಗ್ರಹಿಸಿದ ಡಿಎನ್ಎಯನ್ನು ಹೋಲಿಕೆ ಮಾಡಿತ್ತು.
ಮೇ 8ರಂದು ಎಫ್ಎಸ್ಎಲ್ನಿಂದ ಡಿಎನ್ಎ ಹೊಂದಾಣಿಕೆ ದೃಢಪಟ್ಟ ವರದಿ ಬಂದ ನಂತರ, ಕೊಲೆ, ಸಾಕ್ಷ್ಯ ನಾಶ ಹಾಗೂ ಕ್ರಿಮಿನಲ್ ಪಿತೂರಿ ಆರೋಪಗಳಡಿ ಐಪಿಸಿ ಸೆಕ್ಷನ್ಗಳ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಖೇಡಾವಾಲಾ ಸಹೋದರರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮೃತಪಟ್ಟಿರುವ ಇಬ್ಬರು ಆರೋಪಿಗಳ ವಿರುದ್ಧ ಸಂಕ್ಷಿಪ್ತ ದೂರು ದಾಖಲಿಸುವ ಸಾಧ್ಯತೆಯಿದೆ.






