CEC ವಿರುದ್ಧ ಪ್ರತಿಭಟನೆ ನಡುವೆ SIR ಪ್ರಕ್ರಿಯೆಯ ನಿರ್ವಹಣೆ ಬಗ್ಗೆ ಪಂಜಾಬ್ ಮುಖ್ಯ ಚುನಾವಣಾಧಿಕಾರಿಗೆ ಸರ್ವಪಕ್ಷಗಳಿಂದ ಮೆಚ್ಚುಗೆ!

ಪಂಜಾಬ್ನ ಮುಖ್ಯ ಚುನಾವಣಾಧಿಕಾರಿ (CEO) ಅನಿಂದಿತಾ ಮಿತ್ರಾ (Photo: The Indian Express)
ಹೊಸದಿಲ್ಲಿ: ಮತದಾರರ ಪಟ್ಟಿಗಳ ಪರಿಷ್ಕರಣೆ ವಿಚಾರವಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ದಿಲ್ಲಿಯಲ್ಲಿ ಪ್ರತಿಭಟನೆಗಳನ್ನು ಎದುರಿಸುತ್ತಿದ್ದರೆ, ಎಸ್ಐಆರ್ ಬಳಿಕ ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದ ನಂತರ ಪಂಜಾಬ್ನ ಮುಖ್ಯ ಚುನಾವಣಾಧಿಕಾರಿ (CEO) ಅನಿಂದಿತಾ ಮಿತ್ರಾ ಅವರು ಕಾಂಗ್ರೆಸ್, ಶಿರೋಮಣಿ ಅಕಾಲಿದಳ , ಬಿಜೆಪಿ ಮತ್ತು ಆಪ್ ನಾಯಕರಿಂದ ಪ್ರಶಂಸೆಯನ್ನು ಪಡೆದರು ಎಂದು indianexpress.com ವರದಿ ಮಾಡಿದೆ.
ಎಸ್ಐಆರ್ ಪ್ರಕ್ರಿಯೆಯ ಸಂದರ್ಭದಲ್ಲಿ ಅನಿಂದಿತಾ ಮಿತ್ರಾ ಅವರು ತಮ್ಮ ಕಳವಳಗಳನ್ನು ಆಲಿಸಿದ್ದಾರೆ, ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಹಾಗೂ ಪ್ರಸ್ತಾಪಿತ ಸಮಸ್ಯೆಗಳನ್ನು ಪರಿಹರಿಸಿದ್ದಾರೆ ಎಂದು ನಾಲ್ಕೂ ಪಕ್ಷಗಳ ಪ್ರತಿನಿಧಿಗಳು ಹೇಳಿದ್ದಾರೆ.
ಪಂಜಾಬ್ನಲ್ಲಿ ಪ್ರಕ್ರಿಯೆಯನ್ನು ನಿರ್ವಹಿಸಿದ ರೀತಿಗೆ ಪ್ರಶಂಸಿಸುವುದಾಗಿ ಕಾಂಗ್ರೆಸ್ ಮತ್ತು ಆಪ್ ನಾಯಕರು ಹೇಳಿದ್ದಾರೆ. ದಿಲ್ಲಿ ಸೇರಿದಂತೆ ವಿವಿಧೆಡೆ ವಿರೋಧ ಪಕ್ಷಗಳ ಪ್ರತಿಭಟನೆಗೆ ಕಾರಣವಾಗಿರುವ ಒಟ್ಟಾರೆ ಎಸ್ಐಆರ್ ಪ್ರಕ್ರಿಯೆಗೆ ತಮ್ಮ ಅನುಮೋದನೆಯಿದೆ ಎಂದುಕೊಳ್ಳಬಾರದು ಎಂದು ಕಾಂಗ್ರೆಸ್ ಮತ್ತು ಆಪ್ ನಾಯಕರು ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಪ್ರಕಟಿಸಿದ ಪಂಜಾಬ್ನ ಎಲ್ಲಾ 117 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 2,01,00,727 ಮತದಾರರು ಇದ್ದಾರೆ. ಆಗಸ್ಟ್ 13ರಂದು ಪ್ರಕಟಿಸಿದ ಕರಡು ಮತದಾರರ ಪಟ್ಟಿಯಲ್ಲಿ 1,93,94,435 ಮತದಾರರಿದ್ದರು. ಇದಕ್ಕೆ ಹೋಲಿಸಿದರೆ ಅಂತಿಮ ಪಟ್ಟಿಯಲ್ಲಿ ಶೇ. 3.64ರಷ್ಟು ಹೆಚ್ಚಳವಾಗಿದೆ.
ಅಂತಿಮ ಮತದಾರರ ಪಟ್ಟಿಯಲ್ಲಿ 1,03,76,026 ಪುರುಷ ಮತದಾರರು, 97,24,195 ಮಹಿಳಾ ಮತದಾರರು ಹಾಗೂ ತೃತೀಯ ಲಿಂಗದ 506 ಮತದಾರರು ಇದ್ದಾರೆ. ಹಕ್ಕು ಮತ್ತು ಆಕ್ಷೇಪಣೆಗಳ ಹಂತದಲ್ಲಿ ಒಟ್ಟು 7,97,263 ಮತದಾರರನ್ನು ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ.
ಶಿರೋಮಣಿ ಅಕಾಲಿದಳದ ವಕ್ತಾರ ಅರ್ಷದೀಪ್ ಸಿಂಗ್ ಕ್ಲೇರ್ ಅವರು ಈ ಪ್ರಕ್ರಿಯೆಯನ್ನು ಸ್ವಾಗತಿಸಿದ್ದಾರೆ. ಪಂಜಾಬ್ನಲ್ಲಿ ಎಸ್ಐಆರ್ ಕುರಿತು ಆತಂಕಗಳಿದ್ದವು. ಪ್ರತಿ ಸಭೆಯಲ್ಲೂ ನಾವು ಮುಖ್ಯ ಚುನಾವಣಾಧಿಕಾರಿಯೊಂದಿಗೆ ನಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೇವೆ. ಅವರು ಎಲ್ಲವನ್ನೂ ಗಮನವಿಟ್ಟು ಆಲಿಸಿದರು ಮತ್ತು ಅಗತ್ಯವಿದ್ದಲ್ಲೆಲ್ಲ ಸುಧಾರಣೆಗಳನ್ನು ಮಾಡಿದರು ಎಂದು ಹೇಳಿದರು.
ಅಂತಿಮ ಮತದಾರರ ಪಟ್ಟಿಯಲ್ಲಿ ಸುಮಾರು 2.01 ಕೋಟಿ ಮತದಾರರಿದ್ದು, ಈ ಪ್ರಕ್ರಿಯೆಯು ಸಕಾರಾತ್ಮಕವಾಗಿ ಮುಕ್ತಾಯಗೊಂಡಿದೆ ಎಂದು ಅವರು ಹೇಳಿದರು. ಸ್ಥಳಾಂತರಗೊಂಡಿರುವ ಅಥವಾ ಮತದಾರರಾಗಲು ಅರ್ಹತೆ ಕಳೆದುಕೊಂಡಿರುವವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಿರುವುದರ ಜೊತೆಗೆ ಹೊಸ ಮತದಾರರನ್ನು ಸೇರ್ಪಡೆಗೊಳಿಸಿರುವುದನ್ನೂ ಅವರು ಉಲ್ಲೇಖಿಸಿದರು.
ಪಂಜಾಬ್ ಬಿಜೆಪಿ ಕಾನೂನು ಘಟಕದ ಅಧ್ಯಕ್ಷ ಎನ್.ಕೆ. ವರ್ಮಾ ಅವರು ಶಾಂತಿಯುತವಾಗಿ ಈ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಹೇಳಿದರು. ಅಂತಿಮ ಮತದಾರರ ಪಟ್ಟಿಗೆ ಬಿಜೆಪಿ, ಕಾಂಗ್ರೆಸ್, ಆಪ್ ಮತ್ತು ಎಸ್ಎಡಿ ಪ್ರತಿನಿಧಿಗಳು ಯಾವುದೇ ಆಕ್ಷೇಪಣೆ ವ್ಯಕ್ತಪಡಿಸಿಲ್ಲ. ಈ ಪ್ರಕ್ರಿಯೆಯನ್ನು ನಿರ್ವಹಿಸಿದ ರೀತಿ ಶ್ಲಾಘನೀಯ ಎಂದು ಹೇಳಿದರು.
ಆಪ್ ವಕ್ತಾರ ಫೆರಿ ಸೋಫತ್ ಮಾತನಾಡಿ, ಜೂನ್ನಿಂದಲೂ ತಮ್ಮ ಪಕ್ಷವು ಎಸ್ಐಆರ್ಗೆ ಸಂಬಂಧಿಸಿದ ಸಮಸ್ಯೆಗಳನ್ನು ಮುಖ್ಯ ಚುನಾವಣಾಧಿಕಾರಿಯ ಗಮನಕ್ಕೆ ತಂದಿದ್ದು, ತೃಪ್ತಿಕರ ಪ್ರತಿಕ್ರಿಯೆಗಳನ್ನು ಪಡೆದಿದೆ ಎಂದು ಹೇಳಿದರು.
ತಮ್ಮ ಪಕ್ಷಗಳ ಬೂತ್ ಮಟ್ಟದ ಏಜೆಂಟ್ಗಳ (BLA) ಮೂಲಕ ರಾಜಕೀಯ ಪಕ್ಷಗಳು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದನ್ನೂ ಅವರು ಪ್ರಸ್ತಾಪಿಸಿದರು. ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರತಿನಿಧಿಗಳು ಎಸ್ಐಆರ್ ಪ್ರಕ್ರಿಯೆಯನ್ನು ನಡೆಸಿದ ರೀತಿಯನ್ನು ಶ್ಲಾಘಿಸಿದ್ದಾರೆ ಎಂದು ಅವರು ತಿಳಿಸಿದರು.
ನಂತರ ತಮ್ಮ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ ಆಪ್ ವಕ್ತಾರ ಫೆರಿ ಸೋಫತ್, ಪಂಜಾಬ್ನಲ್ಲಿ ಎಸ್ಐಆರ್ ಪ್ರಕ್ರಿಯೆಯನ್ನು ನಿರ್ವಹಿಸಿದ ರೀತಿಗೆ ಮಾತ್ರ ಮೆಚ್ಚುಗೆ ವ್ಯಕ್ತಪಡಿಸಿದ್ದೇವೆ. ದೇಶದ ಇತರ ಭಾಗಗಳಲ್ಲಿ ನಡೆಯುತ್ತಿರುವ ಎಸ್ಐಆರ್ ಬಗ್ಗೆ ಆಪ್ಗೆ ಯಾವುದೇ ಆತಂಕಗಳಿಲ್ಲ ಎಂದರ್ಥವಲ್ಲ ಎಂದು ಹೇಳಿದರು.
ಪಶ್ಚಿಮ ಬಂಗಾಳ, ದಿಲ್ಲಿ ಮತ್ತು ದೇಶದ ಇತರ ಭಾಗಗಳಲ್ಲಿ ಎಸ್ಐಆರ್ ಪ್ರಕ್ರಿಯೆಯಲ್ಲಿನ ಸಮಸ್ಯೆಗಳ ಕುರಿತು ನಾವು ಮುಖ್ಯ ಚುನಾವಣಾಧಿಕಾರಿಯ ಗಮನಕ್ಕೆ ತಂದಿದ್ದೇವೆ. ಆದರೆ ಪಂಜಾಬ್ನಲ್ಲಿ ಮುಖ್ಯ ಚುನಾವಣಾಧಿಕಾರಿ ಅನಿಂದಿತಾ ಮಿತ್ರಾ ಅವರು ಈ ಪ್ರಕ್ರಿಯೆಯನ್ನು ಸುಗಮವಾಗಿ ಮತ್ತು ಉತ್ತಮ ಸಮನ್ವಯದೊಂದಿಗೆ ನಿರ್ವಹಿಸಿದ್ದಾರೆ. ಇದಕ್ಕಾಗಿಯೇ ಅವರನ್ನು ಶ್ಲಾಘಿಸಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ವಕ್ತಾರ ಹರ್ದೀಪ್ ಸಿಂಗ್ ಕಿಂಗ್ರಾ ಮಾತನಾಡಿ, ಪಂಜಾಬ್ನಲ್ಲಿ ಎಸ್ಐಆರ್ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದ್ದು, ಪ್ರತಿಯೊಂದು ಹಂತದಲ್ಲೂ ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡಲಾಗಿತ್ತು ಎಂದು ಹೇಳಿದರು.
ವಾಟ್ಸ್ಆ್ಯಪ್ ಗುಂಪಿನಲ್ಲಿ ತಾವು ಕೇಳಿದ ಪ್ರಶ್ನೆಗಳಿಗೆ ತಕ್ಷಣವೇ ಉತ್ತರ ಸಿಗುತ್ತಿತ್ತು. ಕೆಲವೊಮ್ಮೆ ಮಧ್ಯರಾತ್ರಿಯಲ್ಲೂ ಪ್ರತಿಕ್ರಿಯೆ ಸಿಗುತ್ತಿತ್ತು. ಅನಿಂದಿತಾ ಮಿತ್ರಾ ಅವರು ಬಹಳ ಸಕ್ರಿಯ ಅಧಿಕಾರಿ ಎಂದು ಹೇಳಿದರು.






