ಬಂಗಾಳಕೊಲ್ಲಿ, ನಿಕೋಬಾರ್ ನಲ್ಲಿ ಭೂಕಂಪ; ಸುನಾಮಿ ಸಾಧ್ಯತೆ ಇಲ್ಲ

ಹೊಸದಿಲ್ಲಿ: ಬಂಗಾಳಕೊಲ್ಲಿಯಲ್ಲಿ ಸೋಮವಾರ ಮಧ್ಯರಾತ್ರಿ ವೇಳೆಗೆ 6.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ಪ್ರಕಟಿಸಿದೆ.
ಇದರ ಕೇಂದ್ರ ಬಿಂದು 10 ಕಿಲೋಮೀಟರ್ ಆಳದಲ್ಲಿ 6.82 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 93.37 ಡಿಗ್ರಿ ಪೂರ್ವ ರೇಖಾಂಶದಲ್ಲಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಭೂಕಂಪದಿಂದ ಕರಾವಳಿ ಪ್ರದೇಶದ ಮೇಲೆ ಯಾವುದೇ ಪರಿಣಾಮ ಇಲ್ಲ ಎಂದು ಹೇಳಲಾಗಿದ್ದು, ದ್ವೀಪಗಳಲ್ಲಿ ಸಂಭಾವ್ಯ ಹಾನಿಯನ್ನು ಅಂದಾಜಿಸಲಾಗುತ್ತಿದೆ. ತಕ್ಷಣಕ್ಕೆ ಯಾವುದೇ ಆಸ್ತಿಪಾಸ್ತಿ ಹಾನಿ ಅಥವಾ ಜೀವಹಾನಿಯ ವರದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮಂಗಳವಾರ ನಸುಕಿನಲ್ಲಿ 6.5 ತೀವ್ರತೆಯ ಭೂಕಂಪ ಸಂಭವಿಸಿದೆ; ಆದರೆ ಯಾವುದೇ ಸುನಾಮಿ ಭೀತಿ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಮೆರಿಕದ ಜಿಯಾಲಾಜಿಕಲ್ ಸರ್ವೆ ಪ್ರಕಾರ, ಮಧ್ಯರಾತ್ರಿ ಬಳಿಕ 12.12ಕ್ಕೆ 10 ಕಿಲೋಮೀಟರ್ ಆಳದಲ್ಲಿ ಕಂಪನ ಸಂಭವಿಸಿದೆ. ಇಂಡೋನೇಷ್ಯಾದ ಅಚ್ ಪ್ರಾಂತ್ಯದ ಸಬಂಗ್ ನಿಂದ 259 ಕಿಲೋಮೀಟರ್ ವಾಯ್ಯವಕ್ಕೆ ಇದರ ಕೇಂದ್ರಬಿಂದು ಇತ್ತು. ಸುತ್ತಮುತ್ತಲ ಪ್ರದೇಶಗಳಲ್ಲೂ ಕಂಪನದ ಅನುಭವವಾಗಿದ್ದು, ತಕ್ಷಣಕ್ಕೆ ಯಾವುದೇ ಹಾನಿಯ ವಿವರಗಳಿಲ್ಲ ಎಂದು ಸ್ಪಷ್ಟಪಡಿಸಿದೆ.







