ಚುನಾವಣಾ ಆಯೋಗದ ಪತ್ರದಲ್ಲಿ ಕೇರಳ ಬಿಜೆಪಿಯ ʼಸೀಲ್ʼ; ʼಸಿಬ್ಬಂದಿ ದೋಷʼ ಎಂದ ಚುನಾವಣಾ ಆಯೋಗ!

Photo source: X/@CPIMKerala
ತಿರುವನಂತಪುರಂ: ಚುನಾವಣಾ ಆಯೋಗದ ಪತ್ರದಲ್ಲಿ ಕೇರಳ ಬಿಜೆಪಿ ಘಟಕದ ಸೀಲ್ (ಮುದ್ರೆ) ಇರುವುದು ಸೋಮವಾರ ವಿವಾದಕ್ಕೆ ಕಾರಣವಾಗಿದ್ದು, ಇದರ ವಿರುದ್ಧ ಸಿಪಿಎಂ ಹಾಗೂ ಕಾಂಗ್ರೆಸ್ ತೀಕ್ಷ್ಣ ವಾಗ್ದಾಳಿ ನಡೆಸಿವೆ.
ಈ ಕುರಿತು ಎಕ್ಸ್ ನಲ್ಲಿ ಸಿಪಿಎಂ ಪೋಸ್ಟ್ ಮಾಡಿದ ಬಳಿಕ ಈ ವಿವಾದ ಭುಗಿಲೆದ್ದಿದೆ. ಮಾರ್ಚ್ 19, 2019ರ ದಿನಾಂಕ ಹೊಂದಿರುವ ಪತ್ರಕ್ಕೆ ಪ್ರಮಾಣ ಪತ್ರ ಲಗತ್ತಿಸಿ ದೇಶಾದ್ಯಂತ ಇರುವ ಪಕ್ಷಗಳಿಗೆ ರವಾನಿಸಿರುವುದನ್ನು ಈ ಪೋಸ್ಟ್ ನಲ್ಲಿ ಹಂಚಿಕೊಳ್ಳಲಾಗಿದೆ. ಈ ಪತ್ರದಲ್ಲಿ ಚುನಾವಣಾ ಆಯೋಗದ ಅಧಿಕೃತ ಮುದ್ರೆಯ ಬದಲು ಕೇರಳ ಬಿಜೆಪಿ ಘಟಕದ ಮುದ್ರೆ ಇರುವುದನ್ನು ಎತ್ತಿ ತೋರಿಸಲಾಗಿದೆ.
ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗ, “ಇದೊಂದು ʼಸಿಬ್ಬಂದಿ ಲೋಪʼವಾಗಿದ್ದು, ಅದನ್ನು ತಕ್ಷಣವೇ ಸರಿಪಡಿಸಲಾಗುವುದು” ಎಂದು ಸ್ಪಷ್ಟಪಡಿಸಿದೆ.
“ಭಾರತೀಯ ಚುನಾವಣಾ ಆಯೋಗ ಹಾಗೂ ಬಿಜೆಪಿಯನ್ನು ಒಂದೇ ಶಕ್ತಿಕೇಂದ್ರ ನಿಯಂತ್ರಿಸುತ್ತಿರುವಂತೆ ಕಂಡು ಬರುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಹೀಗಿದ್ದೂ, ಕನಿಷ್ಠ ಪಕ್ಷ ಎರಡು ಪ್ರತ್ಯೇಕ ಮೇಜುಗಳನ್ನು ನಿರ್ವಹಿಸುವ ಔದಾರ್ಯವನ್ನಾದರೂ ಪ್ರದರ್ಶಿಸಿ” ಎಂದು ಸಿಪಿಎಂ ವ್ಯಂಗ್ಯವಾಡಿದೆ.
“ಮುದ್ರೆಗಳನ್ನು ಬೇಕಾಬಿಟ್ಟಿಯಾಗಿ ಹಾಕಲಾಗಿದೆ. ಚುನಾವಣಾ ಆಯೋಗದ ಪತ್ರದಲ್ಲಿ ಬಿಜೆಪಿಯ ಮುದ್ರೆ!” ಎಂದು ಹೇಳಿರುವ ಸಿಪಿಎಂ, “ಯಾವುದೇ ಗುಂಡಿಯನ್ನು ಒತ್ತಿದರೂ, ಕಮಲ ಕಾಣಿಸುತ್ತದೆ ಎಂಬ ಹಳೆಯ ಆರೋಪದಂತೆ ಇದು ಮತ್ತೊಂದು ಕಾಕತಾಳೀಯವಾಗಿ ಬಂದಿದೆ” ಎಂದೂ ಛೇಡಿಸಿದೆ.
ಈ ನಡುವೆ, ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕೇರಳ ಕಾಂಗ್ರೆಸ್ ಘಟಕ, “ನೀವೇನಾದರೂ ಬಿಜೆಪಿ ಕಚೇರಿಯಿಂದ ಕಾರ್ಯನಿರ್ವಹಿಸುತ್ತಿದ್ದೀರಾ? ನಿಮ್ಮ ಲೆಟರ್ ಹೆಡ್ ನೊಂದಿಗೆ ಎಲ್ಲ ಚುನಾವಣಾಧಿಕಾರಿಗಳಿಗೆ ರವಾನಿಸಲಾಗಿರುವ ಬಿಜೆಪಿ ಪತ್ರವೆ? ಇದನ್ನು ನೀವು ವಿವರಿಸಬಲ್ಲಿರಾ?” ಎಂದು ಪ್ರಶ್ನಿಸಿದೆ.






