ಮತಗಳ್ಳತನದ ಕುರಿತು ಕರ್ನಾಟಕ ಸಿಐಡಿಗೆ ಚುನಾವಣಾ ಆಯೋಗ ಮಾಹಿತಿ ನೀಡುತ್ತಿಲ್ಲ: ರಾಹುಲ್ ಗಾಂಧಿ ಆರೋಪ

ರಾಹುಲ್ ಗಾಂಧಿ |PC : PTI
ವಯನಾಡ್ (ಕೇರಳ): ಕರ್ನಾಟಕದಲ್ಲಿ ನಡೆದಿದೆಯೆನ್ನಲಾದ ಮತಗಳ್ಳತನದ ಕುರಿತು ಕರ್ನಾಟಕ ಸಿಐಡಿ ಕೋರಿರುವ ಮಾಹಿತಿಯನ್ನು ಚುನಾವಣಾ ಆಯೋಗ ನೀಡುತ್ತಿಲ್ಲ ಎಂದು ಶನಿವಾರ ಕಾಂಗ್ರೆಸ್ ನಾಯಕ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಶುಕ್ರವಾರ ತಮ್ಮ ತಾಯಿ ಸೋನಿಯಾ ಗಾಂಧಿಯವರೊಂದಿಗೆ ವಯನಾಡ್ ಗೆ ಆಗಮಿಸಿರುವ ರಾಹುಲ್ ಗಾಂಧಿ, ಮತಗಳ್ಳತನದಲ್ಲಿ ಬಳಕೆಯಾಗಿರುವ ಮೊಬೈಲ್ ಸಂಖ್ಯೆಗಳ ಕುರಿತು ಮಾಹಿತಿ ಒದಗಿಸುವಂತೆ ಕರ್ನಾಟಕ ಸಿಐಡಿಯು ಚುನಾವಣಾ ಆಯೋಗಕ್ಕೆ ಹಲವಾರು ಪತ್ರಗಳನ್ನು ಬರೆದಿದ್ದರೂ, ಚುನಾವಣಾ ಆಯೋಗ ಆ ಮಾಹಿತಿಯನ್ನು ಒದಗಿಸುತ್ತಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಈ ಪ್ರಕರಣದಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗಿಂತ ದೊಡ್ಡ ಶಕ್ತಿಗಳು ಭಾಗಿಯಾಗಿರುವಂತಿದೆ. ಪೊಲೀಸರು ಮಾಹಿತಿ ಕೇಳುತ್ತಿದ್ದಾರೆ ಹಾಗೂ ಅವರು ಅದನ್ನು ಒದಗಿಸುತ್ತಿಲ್ಲ. ಇದು ನನ್ನ ಹೇಳಿಕೆಯಲ್ಲ. ಇದು ವಾಸ್ತವ. ಇದು ಕಪ್ಪು ಬಿಳುಪಿನಲ್ಲಿದೆ” ಎಂದು ಅವರು ದೂರಿದ್ದಾರೆ.
“ಕಾಂಗ್ರೆಸ್ ಪಕ್ಷವು ಮತಗಳ್ಳತನದ ಕುರಿತು ಯಾವ ರೀತಿಯ ಪುರಾವೆಗಳನ್ನು ಮುಂದಿಡುತ್ತದೆಯೆಂದರೆ, ಯಾರಿಗೂ ಕೂಡಾ ಪ್ರಧಾನಿ ನರೇಂದ್ರ ಮೋದಿ ಮತಗಳ್ಳತನ ಮಾಡಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂಬ ಬಗ್ಗೆ ಅನುಮಾನವಿರಲು ಸಾಧ್ಯವಿಲ್ಲ” ಎಂದೂ ಅವರು ಹೇಳಿದ್ದಾರೆ.
“ನಾನು ಈ ಹಿಂದೆ ಎರಡು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಂತೆ, ನಾವು ಹೈಡ್ರೋಜನ್ ಬಾಂಬ್ ಅನ್ನು ಬಯಲು ಮಾಡಲಿದ್ದೇವೆ. ಅವು ಸಂಪೂರ್ಣವಾಗಿ ವಿನಾಶಕಾರಿಯಾಗಿದ್ದು, ಪರಿಸ್ಥಿತಿಯ ನೈಜತೆಯಾಗಿದೆ. ನಾವು ಹೇಳುತ್ತಿರುವುದಕ್ಕೆ ನಮ್ಮ ಬಳಿ ಖುಲ್ಲಂಖುಲ್ಲಾ ಸಾಕ್ಷಿಯಿದೆ” ಎಂದು ಅವರು ತಿಳಿಸಿದ್ದಾರೆ.







