"ಜನರನ್ನು ದಾರಿತಪ್ಪಿಸುವ ಪ್ರಯತ್ನ" : ವೋಟರ್ ಆಧಿಕಾರ ಯಾತ್ರಾ ಕುರಿತು ಕಾಂಗ್ರೆಸ್ ಹಂಚಿಕೊಂಡ AI ವೀಡಿಯೊ ಬಗ್ಗೆ ಚುನಾವಣಾ ಆಯೋಗ ಪ್ರತಿಕ್ರಿಯೆ

Photo | indiatoday
ಹೊಸದಿಲ್ಲಿ : ಮತದಾರರ ಪಟ್ಟಿಯಲ್ಲಿನ ಲೋಪಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹಂಚಿಕೊಂಡ ಇತ್ತೀಚಿನ ವೀಡಿಯೊದ ಬಗ್ಗೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗ, ಈ ಕುರಿತು ಸತ್ಯ ಪರಿಶೀಲನೆ ನಡೆಸಲಾಗಿದೆ. ಈ ವೀಡಿಯೊ AI ರಚಿತವಾಗಿದ್ದು ಮತ್ತು ಉದ್ದೇಶಪೂರ್ವಕವಾಗಿ ದಾರಿತಪ್ಪಿಸುವ ಪ್ರಯತ್ನವಾಗಿದೆ ಎಂದು ಹೇಳಿದೆ.
ಕಾಂಗ್ರೆಸ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ʼವೋಟರ್ ಆಧಿಕಾರ ಯಾತ್ರಾ'ಗೆ ಜನರನ್ನು ಆಹ್ವಾನಿಸುವ AI-ರಚಿತ ವೀಡಿಯೊವನ್ನು ಕಾಂಗ್ರೆಸ್ ಹಂಚಿಕೊಂಡಿದೆ.
ಈ ಕುರಿತು ಚುನಾವಣಾ ಆಯೋಗ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಈ ವೀಡಿಯೊ ಬಿಹಾರದ ಜನರನ್ನು ದಾರಿತಪ್ಪಿಸುವ ಸ್ಪಷ್ಟ ಪ್ರಯತ್ನ ಎಂದು ಆರೋಪಿಸಿದೆ. ಬಿಹಾರದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಮತದಾರರ ಪಟ್ಟಿಯನ್ನು ಕಾನೂನುಬದ್ಧವಾಗಿ ಮತ್ತು ಪಾರದರ್ಶಕವಾಗಿ ಸಿದ್ಧಪಡಿಸಲಾಗುತ್ತಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ಗಳು ಮತ್ತು ಚುನಾವಣಾ ನೋಂದಣಿ ಅಧಿಕಾರಿಗಳು ಚುನಾವಣಾ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದಾರೆ. 90,000ಕ್ಕೂ ಹೆಚ್ಚು ಬೂತ್ ಮಟ್ಟದ ಅಧಿಕಾರಿಗಳು ಸಕ್ರಿಯವಾಗಿ ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರದ ಮತದಾರರು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದಂತೆ ಬಿಹಾರದ ಎಲ್ಲಾ 12 ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ನೇಮಿಸಿದ 1.6 ಲಕ್ಷಕ್ಕೂ ಹೆಚ್ಚು ಬೂತ್ ಮಟ್ಟದ ಏಜೆಂಟ್ಗಳು ಕೂಡ ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮತದಾರರ ಪಟ್ಟಿಯನ್ನು ಪಾರದರ್ಶಕವಾಗಿ ಸಿದ್ಧ ಪಡಿಸಲಾಗುತ್ತಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ರಾಹುಲ್ ಗಾಂಧಿಯವರ ಮತಗಳ ಕಳ್ಳತನ ಆರೋಪದ ಬಗ್ಗೆ ರವಿವಾರ (ಆಗಸ್ಟ್ 17) ಚುನಾವಣಾ ಆಯೋಗ ಪತ್ರಿಕಾಗೋಷ್ಠಿ ನಡೆಸಲಿದೆ.
17 अगस्त से हमारे साथ आना है
— Congress (@INCIndia) August 16, 2025
वोट चोरों को गद्दी से हटाना है
वोटर अधिकार यात्रा 🇮🇳
📍 बिहार pic.twitter.com/SdiKiZWWnH







