SIR ವಿವಾದ | ಅ.5ರಿಂದ ಸುಪ್ರೀಂ ಕೋರ್ಟ್ ನಲ್ಲಿ CEC ಜ್ಞಾನೇಶ್ ಕುಮಾರ್ ವಿರುದ್ಧದ ಅರ್ಜಿಗಳ ವಿಚಾರಣೆ

ಜ್ಞಾನೇಶ್ ಕುಮಾರ್ | Photo Credit: PTI
ಹೊಸದಿಲ್ಲಿ: ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ (SIR)ಗೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಇತರ ಇಬ್ಬರು ಚುನಾವಣಾ ಆಯುಕ್ತರ ಸಮ್ಮತಿಯಿಲ್ಲದೆ ಕೈಗೊಂಡಿದ್ದಾರೆ ಎನ್ನಲಾದ ನಿರ್ಧಾರಗಳ ವಿರುದ್ಧ ಸಲ್ಲಿಸಿರುವ ಎರಡು ರಿಟ್ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರದಿಂದ ನಡೆಸಲಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠ ಅರ್ಜಿಗಳ ವಿಚಾರಣೆ ನಡೆಸಲಿದೆ.
ಇತರ ಇಬ್ಬರು ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಷಿ ಆಕ್ಷೇಪಣೆ ವ್ಯಕ್ತಪಡಿಸಿದ್ದರೂ, ಚುನಾವಣಾ ಆಯೋಗದ ಪರವಾಗಿ ಸುಮಾರು 14 ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗಿವೆ. SIRಗೆ ಸಂಬಂಧಿಸಿದ ವಿವಿಧ ಕ್ರಮಗಳ ಕುರಿತು ಅಕ್ಟೋಬರ್ 2025ರಿಂದ ಆಗಸ್ಟ್ 2026ರ ನಡುವೆ ಇಬ್ಬರು ಚುನಾವಣಾ ಆಯುಕ್ತರು ಕನಿಷ್ಠ 14 ಬಾರಿ ಆಕ್ಷೇಪಣೆ ದಾಖಲಿಸಿದ್ದಾರೆ ಎಂದು ಅರ್ಜಿಗಳಲ್ಲಿ ಉಲ್ಲೇಖಿಸಲಾಗಿದೆ.
ರಾಕೇಶ್ ಕುಮಾರ್ ಸಿಂಗ್ ಸಲ್ಲಿಸಿರುವ ಅರ್ಜಿಯಲ್ಲಿ, ಹಲವು ಸದಸ್ಯರನ್ನು ಒಳಗೊಂಡಿರುವ ಚುನಾವಣಾ ಆಯೋಗವು ಏಕಪಕ್ಷೀಯವಾಗಿ ನಿರ್ಧಾರಗಳನ್ನು ಕೈಗೊಳ್ಳುವಂತಿಲ್ಲ ಎಂದು ಘೋಷಿಸಬೇಕು ಎಂದು ಕೋರಲಾಗಿದೆ. ವಿವಾದಿತ ಕ್ರಮಗಳನ್ನು ಸಾಂವಿಧಾನಿಕ ಹಾಗೂ ಶಾಸನಾತ್ಮಕ ಚೌಕಟ್ಟಿನ ಅನುಸಾರವೇ ಕೈಗೊಳ್ಳಲಾಗಿದೆಯೇ ಎಂಬುದನ್ನು ಪರಿಶೀಲಿಸಲು ಚುನಾವಣಾ ಆಯೋಗದ ಮೂಲ ದಾಖಲೆಗಳನ್ನು ಪರಿಶೀಲಿಸಬೇಕು ಎಂದೂ ಮನವಿ ಮಾಡಲಾಗಿದೆ.
ಜ್ಞಾನೇಶ್ ಕುಮಾರ್ ಅವರನ್ನು ಮುಖ್ಯ ಚುನಾವಣಾ ಆಯುಕ್ತ ಹುದ್ದೆಯಿಂದ ಅಮಾನತುಗೊಳಿಸಬೇಕು ಎಂದೂ ಅರ್ಜಿಯಲ್ಲಿ ಕೋರಲಾಗಿದೆ.
ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಸಲ್ಲಿಸಿರುವ ಮತ್ತೊಂದು ಅರ್ಜಿಯಲ್ಲಿ, ಏಕಪಕ್ಷೀಯವಾಗಿ ಕೈಗೊಳ್ಳಲಾಗಿದೆ ಎನ್ನಲಾದ 14 ನಿರ್ಧಾರಗಳನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಲಾಗಿದೆ.
ಈ ನಿರ್ಧಾರಗಳ ಕುರಿತು ತನಿಖೆ ನಡೆಸಲು ಸ್ವತಂತ್ರ ನ್ಯಾಯಾಂಗ ತನಿಖಾ ಆಯೋಗ ರಚಿಸಬೇಕು ಅಥವಾ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಬೇಕು ಎಂದು ಕೋರಲಾಗಿದೆ. ತಂಡಕ್ಕೆ ಸೈಬರ್ ಸೆಕ್ಯುರಿಟಿ ಮತ್ತು ಐಟಿ ತಜ್ಞರ ನೆರವು ಒದಗಿಸಬೇಕು ಎಂದೂ ಮನವಿ ಮಾಡಲಾಗಿದೆ.
SIR ಪ್ರಕ್ರಿಯೆಯಲ್ಲಿ 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 13 ಕೋಟಿ ಮತದಾರರ ಹೆಸರುಗಳನ್ನು ಅಳಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗದ ECINet ಮತ್ತು ERONet ದತ್ತಸಂಚಯಗಳ ಫೊರೆನ್ಸಿಕ್ ಆಡಿಟ್ ನಡೆಸಬೇಕು ಹಾಗೂ ಹೆಸರುಗಳನ್ನು ಅಳಿಸಿದ ಪ್ರಕರಣಗಳ ಕುರಿತು ತನಿಖೆ ನಡೆಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಅಧಿಕೃತ ಕರ್ತವ್ಯ ಉಲ್ಲಂಘಿಸಿದ ಆರೋಪದ ಮೇಲೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಹಿರಿಯ ಉಪ ಚುನಾವಣಾ ಆಯುಕ್ತ ಮನೀಶ್ ಗರ್ಗ್ ಮತ್ತು ಪ್ರಧಾನ ನಿರ್ದೇಶಕಿ (ಐಟಿ) ಸೀಮಾ ಖನ್ನಾ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆ, 1950ರ ಸೆಕ್ಷನ್ 32ರ ಅಡಿ ದೂರು ದಾಖಲಿಸಿಕೊಳ್ಳಲು ಹಾಗೂ ಪ್ರಾಸಿಕ್ಯೂಷನ್ ಪ್ರಕ್ರಿಯೆ ಆರಂಭಿಸಲು ಸಕ್ಷಮ ಪ್ರಾಧಿಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ನಿರ್ದಿಷ್ಟವಾಗಿ ಕೋರಲಾಗಿದೆ.
ಮತದಾರರ ಪಟ್ಟಿಯ ಸಿದ್ಧತೆ, ಪರಿಷ್ಕರಣೆ ಅಥವಾ ತಿದ್ದುಪಡಿಗೆ ಸಂಬಂಧಿಸಿದ ಅಧಿಕೃತ ಕರ್ತವ್ಯಗಳ ಉಲ್ಲಂಘನೆಗೆ ಶಿಕ್ಷೆ ವಿಧಿಸಲು ಸೆಕ್ಷನ್ 32 ಅವಕಾಶ ಕಲ್ಪಿಸುತ್ತದೆ ಎಂದೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ದತ್ತಾಂಶ ಬದಲಾವಣೆ ಆರೋಪ
ಫಾರ್ಮ್–6 ಅನ್ನು ಅನುಮತಿಯಿಲ್ಲದೆ ಬದಲಾಯಿಸಲಾಗಿದೆ, ಮತದಾರರ ಪಟ್ಟಿಯ ದತ್ತಸಂಚಯಗಳನ್ನು ಕೇಂದ್ರೀಕರಿಸಲಾಗಿದೆ ಹಾಗೂ ECINet ವ್ಯವಸ್ಥೆಯ ಮೂಲಕ ಅರ್ಹ ಮತದಾರರ ಹೆಸರುಗಳನ್ನು ಮರುಸ್ಥಾಪಿಸುವಲ್ಲಿ ವಿಫಲರಾಗಲಾಗಿದೆ ಎಂಬ ಆರೋಪಗಳನ್ನೂ ಅರ್ಜಿಯಲ್ಲಿ ಮಾಡಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಮತದಾರರ ಸೇರ್ಪಡೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಹೆಸರಿನಲ್ಲಿ 16.10 ಲಕ್ಷ ಮೇಲ್ಮನವಿಗಳು ಸಲ್ಲಿಕೆಯಾಗಿರುವ ಬಗ್ಗೆಯೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಆರೋಪಗಳು, ಚುನಾವಣಾ ಆಯೋಗದ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆ ಹಾಗೂ SIRಗೆ ಸಂಬಂಧಿಸಿದ ಕ್ರಮಗಳ ಸಾಂವಿಧಾನಿಕ ಮತ್ತು ಶಾಸನಾತ್ಮಕ ಮಾನ್ಯತೆ ಕುರಿತು ಸುಪ್ರೀಂ ಕೋರ್ಟ್ ನಾಳೆ ವಿಚಾರಣೆ ನಡೆಸಲಿದೆ.






