ಅಕ್ರಮ ಹಣ ವರ್ಗಾವಣೆ ಪ್ರಕರಣ | ಅನಿಲ್ ಅಂಬಾನಿಗೆ ಸೇರಿದ 3,000 ಕೋಟಿ ರೂ.ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡ ಈಡಿ

Credit: Reuters Photo
ಹೊಸ ದಿಲ್ಲಿ: ಅನಿಲ್ ಅಂಬಾನಿ ಒಡೆತನದ ಸಮೂಹ ಸಂಸ್ಥೆಗಳ ವಿರುದ್ಧ ಕೇಳಿ ಬಂದಿದ್ದ ಅಕ್ರಮ ಹಣ ವರ್ಗಾವಣೆ ಆರೋಪದ ಕುರಿತು ನಡೆಯುತ್ತಿರುವ ತನಿಖೆಯ ಭಾಗವಾಗಿ ಅನಿಲ್ ಅಂಬಾನಿಗೆ ಸೇರಿದ ಸುಮಾರು 3,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ ಎಂದು ವರದಿಯಾಗಿದೆ.
ಅನಿಲ್ ಅಂಬಾನಿಗೆ ಸೇರಿದ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯ ನಾಲ್ಕು ತಾತ್ಕಾಲಿಕ ಆದೇಶಗಳನ್ನು ಹೊರಡಿಸಿದೆ ಎಂದು ಹೇಳಲಾಗಿದೆ.
ಈ ಆಸ್ತಿಗಳ ಪೈಕಿ ಮುಂಬೈನ ಪಾಲಿ ಹಿಲ್ ನಲ್ಲಿರುವ ಅನಿಲ್ ಅಂಬಾನಿಯ ನಿವಾಸ ಹಾಗೂ ಅವರ ಒಡೆತನದ ಸಮೂಹ ಸಂಸ್ಥೆಗಳಿಗೆ ಸಂಬಂಧಿಸಿದ ಇನ್ನಿತರ ವಸತಿ ಹಾಗೂ ವಾಣಿಜ್ಯ ಆಸ್ತಿಗಳು ಸೇರಿವೆ ಎನ್ನಲಾಗಿದೆ.
ದಿಲ್ಲಿಯ ಮಹಾರಾಜ ರಂಜಿತ್ ಸಿಂಗ್ ಮಾರ್ಗ್ನಲ್ಲಿರುವ ರಿಲಯನ್ಸ್ ಸೆಂಟರ್ಗೆ ಸಂಬಂಧಿಸಿದ ಜಮೀನು, ದಿಲ್ಲಿ, ನೋಯ್ಡಾ, ಘಾಝಿಯಾಬಾದ್, ಮುಂಬೈ, ಪುಣೆ, ಥಾಣೆ, ಹೈದರಾಬಾದ್, ಚೆನ್ನೈ ಹಾಗೂ ಪೂರ್ವ ಗೋದಾವರಿ ನಗರಗಳಲ್ಲಿರುವ ಇನ್ನಿತರ ಆಸ್ತಿಪಾಸ್ತಿಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಎಲ್ಲಾ ಆಸ್ತಿಯ ಒಟ್ಟು ಮೌಲ್ಯ 3,084 ಕೋಟಿ ರೂ. ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.





