ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷನ ವಿರುದ್ಧ ವಂಚನೆ ಪ್ರಕರಣ: 13.91 ಕೋಟಿ ರೂ. ಮೌಲ್ಯದ ಚರ, ಸ್ಥಿರಾಸ್ತಿಗೆ ಮುಟ್ಟುಗೋಲು ಹಾಕಿದ ಈಡಿ

ಬೆಂಗಳೂರು: ವಂಚನೆ ಆರೋಪ ಪ್ರಕರಣದಡಿ ಶಿವಮೊಗ್ಗದ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಹಾಗೂ ಕರ್ನಾಟಕ ರಾಜ್ಯ ಸಹಕಾರಿ ಅಫೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಹಾಗೂ ಅವರ ಪತ್ನಿಗೆ ಸೇರಿದ ಅಂದಾಜು 13.91ಕೋಟಿ ರೂ. ಮೌಲ್ಯದ ಚರ ಹಾಗೂ ಸ್ಥಿರಾಸ್ತಿಯನ್ನು ಜಾರಿ ನಿರ್ದೇಶಾಲಯ(ಈ.ಡಿ.) ಮುಟ್ಟುಗೋಲು ಹಾಕಿಕೊಂಡಿರುವುದಾಗಿ ತಿಳಿಸಿದೆ.
ಶಿವಮೊಗ್ಗ ಡಿಸಿಸಿ ಬ್ಯಾಂಕ್‍ನಲ್ಲಿ ನಕಲಿ ಚಿನ್ನ ಅಡವಿಟ್ಟು 62.77 ಕೋಟಿ ರೂಪಾಯಿ ಹಣ ವಂಚಿಸಿದ್ದರು. ಈ ಕುರಿತು ಶಿವಮೊಗ್ಗ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದರು. ಅಲ್ಲದೆ, ಮಂಜುನಾಥ್ ಗೌಡ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದಾಗ 3.95 ಕೋಟಿ ರೂ. ಅಸಮತೋಲನ ಆಸ್ತಿ ಪತ್ತೆಯಾಗಿತ್ತು. ಇದರ ಆಧಾರದ ಮೇರೆಗೆ ಪ್ರತ್ಯೇಕವಾಗಿ ಪಿಎಂಎಲ್‍ಎ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಈ.ಡಿ. ಪ್ರಕಟನೆಯಲ್ಲಿ ತಿಳಿಸಿದೆ.
ಎ.9ರಂದು ಮಂಜುನಾಥ್ ಗೌಡ ಅವರನ್ನು ಈ.ಡಿ. ಬಂಧಿಸಿತ್ತು. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಹಾಗೂ ಅವರ ಪತ್ನಿಗೆ ಸೇರಿದ ಚರ ಹಾಗೂ ಸ್ಥಿರಾಸ್ತಿ ಮುಟ್ಟುಗೋಲು ಹಾಕಿಕೊಂಡು ಹೆಚ್ಚಿನ ತನಿಖೆ ಮುಂದುವರೆಸಲಾಗಿದೆ ಎಂದು ಈ.ಡಿ. ಪ್ರಕಟನೆಯಲ್ಲಿ ಮಾಹಿತಿ ನೀಡಿದೆ.
ಜೂ.6ರಂದು ಈ ಸಂಬಂಧ ಅಕ್ರಮ ಹಣ ವರ್ಗಾವಣೆ ಕಾಯ್ದೆ 2002ರ ಅಡಿಯಲ್ಲಿ ವಿಶೇಷ ನ್ಯಾಯಾಲಯಕ್ಕೆ ಈ.ಡಿ. ಅಧಿಕಾರಿಗಳು ಪ್ರಾಸಿಕ್ಯೂಷನ್ ದೂರು ಸಲ್ಲಿಸಿದ್ದರು.