ಆಸ್ಪತ್ರೆ ನಿರ್ಮಾಣ ಯೋಜನೆಯಲ್ಲಿ ಹಗರಣ ಆರೋಪ | ಆಪ್ ನಾಯಕ ಸೌರಭ್ ಭಾರದ್ವಾಜ್ ನಿವಾಸದ ಮೇಲೆ ED ದಾಳಿ

Photo | indiatoday
ಹೊಸದಿಲ್ಲಿ : ಆಸ್ಪತ್ರೆ ನಿರ್ಮಾಣ ಯೋಜನೆಯಲ್ಲಿನ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮಂಗಳವಾರ ದಿಲ್ಲಿಯ ಮಾಜಿ ಸಚಿವ ಸೌರಭ್ ಭಾರದ್ವಾಜ್ ಅವರ ನಿವಾಸ ಸೇರಿದಂತೆ 13 ಸ್ಥಳಗಳ ಮೇಲೆ ದಾಳಿ ನಡೆಸಿದೆ.
ದಿಲ್ಲಿಯ ಆಪ್ ಸರಕಾರದ ಅವಧಿಯಲ್ಲಿ ಮಂಜೂರಾದ ಆಸ್ಪತ್ರೆ ನಿರ್ಮಾಣ ಯೋಜನೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಗ್ರೇಟರ್ ಕೈಲಾಶ್ನಿಂದ ಮೂರು ಬಾರಿ ಶಾಸಕರಾಗಿರುವ ಭಾರದ್ವಾಜ್, ದಿಲ್ಲಿಯ ಆರೋಗ್ಯ, ನಗರಾಭಿವೃದ್ಧಿ ಮತ್ತು ಜಲ ಸಂಪನ್ಮೂಲ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
2018-19ರ ಅವಧಿಯಲ್ಲಿ 5,590 ಕೋಟಿ ರೂ.ಮೌಲ್ಯದ 24 ಆಸ್ಪತ್ರೆ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಇದರಲ್ಲಿ 11 ಹೊಸ ಆಸ್ಪತ್ರೆಗಳ ನಿರ್ಮಾಣ ಮತ್ತು 13 ಆಸ್ಪತ್ರೆಗಳ ನವೀಕರಣ ಯೋಜನೆ ಕೂಡ ಸೇರಿದ್ದವು. ಈ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಆಗಸ್ಟ್ 2024ರಲ್ಲಿ ವಿರೋಧ ಪಕ್ಷದ ನಾಯಕ ವಿಜೇಂದರ್ ಗುಪ್ತಾ ಅವರು ಪ್ರಕರಣ ದಾಖಲಿಸಿದ್ದರು.





