AAP ಸಂಸದ ಅಶೋಕ್ ಮಿತ್ತಲ್ಗೆ ಸೇರಿದ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ, ಲವ್ಲಿ ಗ್ರೂಪ್ ಸಂಸ್ಥೆಗಳ ಮೇಲೆ ED ದಾಳಿ

Photo: X/@DrAshokKMittal
ಜಲಂಧರ್/ಚಂಡೀಗಢ: AAP ಸಂಸದ ಅಶೋಕ್ ಮಿತ್ತಲ್ ಗೆ ಸೇರಿದ ಪಂಜಾಬ್ ಲವ್ಲಿ ಪ್ರೊಫೆಷನಲ್ ವಿವಿ(LPU) ಮತ್ತು ಲವ್ಲಿ ಗ್ರೂಪ್ ನ ವ್ಯವಹಾರಿಕ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ (ED) ಬುಧವಾರ ಮುಂಜಾನೆ ದಾಳಿ ನಡೆಸಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆ ಆರೋಪಗಳ ಸಂಬಂಧ ನಡೆಯುತ್ತಿರುವ ತನಿಖೆಯ ಭಾಗವಾಗಿ, ಜಲಂಧರ್ ಮತ್ತು ಚಂಡೀಗಢದ ED ತಂಡಗಳು ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿವೆ. ಈ ಕಾರ್ಯಾಚರಣೆಗೆ ಸ್ಥಳೀಯ ಪೊಲೀಸರ ಸಹಾಯವನ್ನು ಕೇಳಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಶ್ವವಿದ್ಯಾಲಯದ ಕ್ಯಾಂಪಸ್ ಮಾತ್ರವಲ್ಲದೆ, ಲವ್ಲಿ ಗ್ರೂಪ್ಗೆ ಸೇರಿದ ಅಂಗಡಿಗಳು, ಲವ್ಲಿ ಆಟೋ ಶೋರೂಂಗಳು, ದೂರ ಶಿಕ್ಷಣ ಕೇಂದ್ರಗಳು ಸೇರಿದಂತೆ ಹಲವು ಸ್ಥಳಗಳು ಹಾಗೂ ಸಂಸ್ಥೆಯ ಮಾಲಕರಾದ ಅಶೋಕ್ ಮಿತ್ತಲ್ ಅವರ ನಿವಾಸದ ಮೇಲೂ ದಾಳಿ ನಡೆದಿದೆ.
ಅಶೋಕ್ ಮಿತ್ತಲ್ ಅವರು ಆಪ್ ಪಕ್ಷದ ರಾಜ್ಯಸಭಾ ಸದಸ್ಯರಾಗಿದ್ದು, ಇತ್ತೀಚೆಗೆ ರಾಘವ್ ಛಡ್ಡಾ ಅವರನ್ನು ಬದಲಿಸಿ ರಾಜ್ಯಸಭೆಯ ಉಪ ನಾಯಕರಾಗಿ ನೇಮಕಗೊಂಡಿದ್ದರು. ಈ ನೇಮಕಾತಿಯ ಕೆಲವೇ ದಿನಗಳಲ್ಲೇ ಅವರೊಂದಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ಈಡಿ ದಾಳಿ ನಡೆದಿದೆ.






