ದಿಲ್ಲಿ | TMC ನಿಧಿಯಿಂದ 160 ಕೋಟಿ ರೂ. ವರ್ಗಾವಣೆ? : ವಿಮಾನಯಾನ ಸಂಸ್ಥೆ ವಿರುದ್ಧ ED ತನಿಖೆ

ಹೊಸದಿಲ್ಲಿ : ಕೋಲ್ಕತ್ತಾ ಮೂಲದ ವಿಮಾನಯಾನ ಸಂಸ್ಥೆಯೊಂದರ ವಿರುದ್ಧ ಜಾರಿ ನಿರ್ದೇಶನಾಲಯ (ED) ನಡೆಸುತ್ತಿರುವ ತನಿಖೆಯಲ್ಲಿ ಗಂಭೀರ ಆರೋಪವೊಂದು ಬೆಳಕಿಗೆ ಬಂದಿದೆ. ತನಿಖೆಯ ಪ್ರಕಾರ, ಹೆಚ್ಚು ಪರಿಚಿತವಲ್ಲದ ‘ಕೇರ್ವೆಲ್ ಏವಿಯೇಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ ಎಂಬ ಸಂಸ್ಥೆಗೆ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ನಿಧಿಯಿಂದ ಸುಮಾರು 160 ಕೋಟಿ ರೂ. ಹಣ ನೀಡಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಈ ಹಣವನ್ನು ಎಂಬ್ರೇರ್ ಜೆಟ್ ಹಾಗೂ ಅಗಸ್ಟಾ ವಿಐಪಿ ಹೆಲಿಕಾಪ್ಟರ್ ಖರೀದಿಸಲು ಬಳಸಲಾಗಿತ್ತು ಎಂದು ತಿಳಿದುಬಂದಿದೆ. ಬಳಿಕ ಇದೇ ವಿಮಾನಯಾನ ಸಂಸ್ಥೆಯು ಖರೀದಿಸಿದ ವಿಮಾನಗಳು ಮತ್ತು ಹೆಲಿಕಾಪ್ಟರ್ ಗಳನ್ನು 187 ಕೋಟಿ ರೂ. ಗೆ ಟಿಎಂಸಿಗೆ ಬಾಡಿಗೆಗೆ ನೀಡಿತ್ತು ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ.
ಈ ಹಣದ ವಹಿವಾಟಿನ ಸ್ವರೂಪ ಹಾಗೂ ಅದರ ಹಿಂದಿನ ಉದ್ದೇಶದ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.
ಜೆಟ್ ಮತ್ತು ಹೆಲಿಕಾಪ್ಟರ್ ಖರೀದಿಸಲು ಸ್ವಂತ ಬಂಡವಾಳವಿಲ್ಲದ ಕೇರ್ವೆಲ್ ಏವಿಯೇಷನ್ ಸಂಸ್ಥೆಗೆ ಟಿಎಂಸಿ 88.5 ಕೋಟಿ ರೂ. ಬಡ್ಡಿರಹಿತ ಭದ್ರತಾ ಠೇವಣಿ ಒದಗಿಸಿರುವ ಆರೋಪದ ಸುತ್ತ ಅಕ್ರಮ ಹಣ ವರ್ಗಾವಣೆ ತನಿಖೆ ಕೇಂದ್ರೀಕೃತವಾಗಿದೆ ಎಂದು ಮೂಲಗಳು ತಿಳಿಸಿವೆ.
ಭದ್ರತಾ ಠೇವಣಿ ಪಡೆದ ಬಳಿಕ, ಕೇರ್ವೆಲ್ ಏವಿಯೇಷನ್ ಸಂಸ್ಥೆಯು ಗುಜರಾತ್ ನ ಗಿಫ್ಟ್ ಸಿಟಿಯಲ್ಲಿ ನೋಂದಾಯಿತವಾಗಿರುವ ತನ್ನ ಅಂಗಸಂಸ್ಥೆ ಕೇರ್ವೆಲ್ ಫ್ಲೈಜೆಟ್ ಐಎಫ್ಎಸ್ಸಿ ಪ್ರೈವೇಟ್ ಲಿಮಿಟೆಡ್ ಗೆ ಈ ಹಣವನ್ನು ವರ್ಗಾಯಿಸಿ, ಜೆಟ್ ಹಾಗೂ ಹೆಲಿಕಾಪ್ಟರ್ ಖರೀದಿಗೆ ಬಳಸಿಕೊಂಡಿದೆ ಎಂದು ED ಆರೋಪಿಸಿದೆ.
ಇದಲ್ಲದೆ, ಈ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೇಮನ್ ದ್ವೀಪಗಳಿಂದ ವರ್ಗಾವಣೆಯಾದ 16 ಕೋಟಿ ರೂ.ಗೂ ಅಧಿಕ ಮೊತ್ತದ ಹಣದ ವಹಿವಾಟು ಕೂಡ ತನಿಖೆಯ ವ್ಯಾಪ್ತಿಯಲ್ಲಿದೆ ಎಂದು ತಿಳಿದುಬಂದಿದೆ.
ಜೆಟ್ ಅನ್ನು 72 ತಿಂಗಳುಗಳ ಕಾಲ ಹಾಗೂ ಹೆಲಿಕಾಪ್ಟರ್ ಅನ್ನು 56 ತಿಂಗಳುಗಳ ಕಾಲ ಬಳಸಿದ್ದಕ್ಕಾಗಿ, ಜಿಎಸ್ಟಿ ಹೊರತುಪಡಿಸಿ 186.9 ಕೋಟಿ ರೂ.ಬಾಡಿಗೆ ಪಾವತಿಸಬೇಕಿತ್ತು ಎಂದು ಮೂಲಗಳು ತಿಳಿಸಿವೆ. ಆದರೆ, ಚಾರ್ಟರ್ ಒಪ್ಪಂದದಲ್ಲಿ ನಿಗದಿಪಡಿಸಲಾಗಿದ್ದ ಕನಿಷ್ಠ ಗ್ಯಾರಂಟಿ ಹಾರಾಟದ ಸಮಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಾಗಿಲ್ಲ ಎಂದು ಹೇಳಲಾಗಿದೆ.
ಇದರ ನಡುವೆಯೇ, 2021ರಿಂದ 2026ರ ಅವಧಿಯಲ್ಲಿ ಇತರೆ ಕಂಪನಿಗಳಿಂದ ವಿಮಾನ ಹಾಗೂ ಹೆಲಿಕಾಪ್ಟರ್ ಗಳನ್ನು ಬಾಡಿಗೆಗೆ ಪಡೆಯಲು ಟಿಎಂಸಿ ಹೆಚ್ಚುವರಿಯಾಗಿ 149 ಕೋಟಿ ರೂ. ವ್ಯಯಿಸಿದೆ ಎಂದು ಮೂಲಗಳು ತಿಳಿಸಿವೆ.






