CMRL ಪ್ರಕರಣ | ಮಾಜಿ ಸಿಎಂ ಪಿಣರಾಯಿ ವಿಜಯನ್, ಪುತ್ರಿ, ಅಳಿಯನ ವಿರುದ್ಧ ಎಫ್ಐಆರ್ಗೆ ಈಡಿ ಮನವಿ

ಟಿ. ವೀಣಾ , ಪಿಣರಾಯಿ ವಿಜಯನ್ | Photo Credit : PTI
ಕೊಚ್ಚಿ: ಸಿಎಂಆರ್ಎಲ್ ಲಂಚ ಪ್ರಕರಣಕ್ಕೆ ಸಂಬಂಧಿಸಿ ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರ ಪುತ್ರಿ ಟಿ.ವೀಣಾ, ಅಳಿಯ ಪಿ.ಎ.ಮುಹಮ್ಮದ್ ರಿಯಾಸ್ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಜಾರಿ ನಿರ್ದೇಶನಾಲಯ ಮಂಗಳವಾರ ಕೇರಳ ಡಿಜಿಪಿಗೆ ಮನವಿ ಮಾಡಿದೆ.
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಜಾರಿ ನಿರ್ದೇಶನಾಲಯ ನಡೆಸಿದ ತನಿಖೆ ಮತ್ತು ಶೋಧ ಕಾರ್ಯಾಚರಣೆಯ ಸಂದರ್ಭ ದೊರಕಿದ ಸಾಕ್ಷ್ಯಾಧಾರಗಳ ಆಧಾರದಲ್ಲಿ ಈ ವಿನಂತಿ ಮಾಡಲಾಗಿದೆ.
ಕೇರಳ ಮೂಲದ ಗಣಿಗಾರಿಕೆ ಸಂಸ್ಥೆಯಾದ ಕೊಚ್ಚಿನ್ ಮಿನರಲ್ಸ್ ಮತ್ತು ರೂಟೈಲ್ ಲಿಮಿಟೆಡ್ (ಸಿಎಂಆರ್ಎಲ್) ವೀಣಾ ಅವರ ಈಗ ಮುಚ್ಚಲಾಗಿರುವ ‘ಎಕ್ಸಲಾಜಿಕ್ ಸೊಲ್ಯುಷನ್ಸ್’ ಸಂಸ್ಥೆಗೆ ‘‘ಐಟಿ ಸಲಹಾ ಸೇವೆ’’ಗಳ ಹೆಸರಿನಲ್ಲಿ 2,78 ಕೋ.ರೂ. ಹಣವನ್ನು ಅಕ್ರಮವಾಗಿ ನೀಡಿದೆ ಎಂದು ಈಡಿ ಆರೋಪಿಸಿದೆ.
ಈಡಿ ಜೂನ್ನಲ್ಲಿ ವೀಣಾ ಅವರಿಗೆ ಸೇರಿದ ಆಸ್ತಿಪಾಸ್ತಿಗಳ ಮೇಲೆ ದಾಳಿ ನಡೆಸಿತ್ತು. ಅನಂತರ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಆ ಸಂದರ್ಭ ಅವರು ತಿರುವನಂತಪುರದಲ್ಲಿ ವಿಜಯನ್ ಅವರೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.




