ದೀಪಾವಳಿಗೆ ‘ಸಂತೋಷದ ಈದ್’ ಎಂದ ಮಲ್ಲಿಕಾರ್ಜುನ ಖರ್ಗೆ: ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ಷೇಪ
ಮತಬ್ಯಾಂಕ್ ರಾಜಕೀಯದ ಆರೋಪ; ಹಿಂದೂ ಧಾರ್ಮಿಕ ಆಚರಣೆಗಳಿಗೆ ಕಾಂಗ್ರೆಸ್ ಅವಮಾನ ಮಾಡುತ್ತಿದೆ ಎಂದು ವಾಗ್ದಾಳಿ

Photo: PTI
ಹೊಸದಿಲ್ಲಿ: ದೀಪಾವಳಿಗೆ ಶುಭಾಶಯ ಕೋರುವ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬೆಳಕಿನ ಹಬ್ಬವನ್ನು ‘ಸಂತೋಷದ ಈದ್’ (Eid of Happiness) ಎಂದು ಅಭಿಪ್ರಾಯಪಟ್ಟಿರುವುದು ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದೆ. 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಈ ಮೂಲಕ ಮತಬ್ಯಾಂಕ್ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ಸೋಮವಾರ ಆರೋಪಿಸಿದೆ.
ಖರ್ಗೆ ಅವರ ಹೇಳಿಕೆಯು ನಿರ್ದಿಷ್ಟ ಸಮುದಾಯದ ಮತದಾರರನ್ನು ಓಲೈಸುವ ಪ್ರಯತ್ನ ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಟೀಕಿಸಿದ್ದಾರೆ. ಕಾಂಗ್ರೆಸ್ ಪಕ್ಷವು ‘ಸನಾತನ ವಿರೋಧಿ’ ಮತ್ತು ‘ಹಿಂದೂ ವಿರೋಧಿ’ ನಿಲುವು ಹೊಂದಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಈ ಕುರಿತು ವೀಡಿಯೊ ಸಂದೇಶ ಪ್ರಕಟಿಸಿರುವ ಭಂಡಾರಿ, ಕಾಂಗ್ರೆಸ್ ನ ಹಿಂದಿನ ರಾಜಕೀಯ ನಿಲುವುಗಳನ್ನು ಪ್ರಸ್ತಾಪಿಸಿದ್ದಾರೆ. ಬಾಟ್ಲಾ ಹೌಸ್ ಎನ್ಕೌಂಟರ್ ಮತ್ತು ಬಾಬ್ರಿ ಮಸೀದಿ ವಿವಾದದ ಸಂದರ್ಭದಲ್ಲಿ ಸೋನಿಯಾ ಗಾಂಧಿ ನೀಡಿದ್ದ ಪ್ರತಿಕ್ರಿಯೆಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡದಿರುವ ವಿಚಾರವನ್ನೂ ಅವರು ಪ್ರಸ್ತಾಪಿಸಿದ್ದಾರೆ.
ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾ ರೋಗಗಳಿಗೆ ಹೋಲಿಸಿದ್ದಾಗ ಕಾಂಗ್ರೆಸ್ ಮೌನವಾಗಿತ್ತು ಎಂದು ಭಂಡಾರಿ ಉಲ್ಲೇಖಿಸಿದ್ದಾರೆ.
ಬಿಜೆಪಿ ವಕ್ತಾರ ಸಿ.ಆರ್. ಕೇಶವನ್ ಕೂಡ ಖರ್ಗೆ ಅವರ ಹೇಳಿಕೆಯನ್ನು ಟೀಕಿಸಿದ್ದಾರೆ. ಅವರ ದೀಪಾವಳಿ ಸಂದೇಶವನ್ನು ‘ವಿಕೃತ’ ಎಂದು ಕರೆದಿರುವ ಅವರು, ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿದ್ದಾರೆ.
‘ಎಕ್ಸ್’ನಲ್ಲಿನ ಪೋಸ್ಟ್ ನಲ್ಲಿ, ಕಾಂಗ್ರೆಸ್ ಹಿಂದೂ ಧಾರ್ಮಿಕ ಸಂಪ್ರದಾಯಗಳು ಮತ್ತು ಆಚರಣೆಗಳನ್ನು ಪದೇ ಪದೇ ಅವಮಾನಿಸುತ್ತಿದೆ ಎಂದು ಕೇಶವನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಖರ್ಗೆ ಅವರು ಮಹಾ ಕುಂಭದ ಕುರಿತು ವ್ಯಕ್ತಪಡಿಸಿದ್ದ ಟೀಕೆಗಳು ಮತ್ತು ರಾಹುಲ್ ಗಾಂಧಿ ಅವರು ಛತ್ ಪೂಜೆಯನ್ನು ‘ನಾಟಕ’ ಎಂದು ಕರೆದಿದ್ದನ್ನು ಉಲ್ಲೇಖಿಸಿದ್ದಾರೆ.
ಜವಾಹರಲಾಲ್ ನೆಹರು ಅವರ ಕಾಲದಲ್ಲಿ ಸೋಮನಾಥ ದೇವಾಲಯದ ಪುನರ್ನಿರ್ಮಾಣಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು ಎಂದೂ ಕೇಶವನ್ ಆರೋಪಿಸಿದ್ದಾರೆ. ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾಪನಾ ಸಮಾರಂಭವನ್ನು ರಾಹುಲ್ ಗಾಂಧಿ ಅವರು ‘ನಾಚ್-ಗಾನಾ’ (ಹಾಡು-ಕುಣಿತ) ಎಂದು ಟೀಕಿಸಿದ್ದನ್ನೂ ಪ್ರಸ್ತಾಪಿಸಿದ್ದಾರೆ.
ಶಾಂತಿ ಮತ್ತು ಐಕ್ಯತೆಗೆ ಖರ್ಗೆ ಕರೆ
ನವೆಂಬರ್ 7ರಂದು ಖರ್ಗೆ ಅವರು ದೀಪಾವಳಿ ಶುಭಾಶಯ ಕೋರಿದ್ದರು. ಇದರ ಎರಡು ದಿನಗಳ ಬಳಿಕ ಬಿಜೆಪಿ ನಾಯಕರಿಂದ ಟೀಕೆಗಳು ವ್ಯಕ್ತವಾಗಿವೆ.
ಸುದ್ದಿಗಾರರೊಂದಿಗೆ ಮಾತನಾಡಿದ್ದ ಖರ್ಗೆ, "ಎಲ್ಲರಿಗೂ ದೀಪಾವಳಿಯ ಶುಭಾಶಯಗಳು. ಅನೇಕರು ಇದನ್ನು 'ಸಂತೋಷದ ಈದ್' (Eid of Happiness) ಎಂದು ಆಚರಿಸುತ್ತಾರೆ" ಎಂದು ಹೇಳಿದ್ದರು.
ದೇಶದ ರಕ್ಷಣೆ ಮತ್ತು ರಾಷ್ಟ್ರೀಯ ಐಕ್ಯತೆಯನ್ನು ಬಲಪಡಿಸಲು ಜನರು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದ್ದರು.
"ಪರಸ್ಪರ ಸಂಘರ್ಷದಲ್ಲಿರುವವರು ಅಥವಾ ತಪ್ಪು ತಿಳುವಳಿಕೆ ಹೊಂದಿರುವವರು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಡಬೇಕು. ನಾವೆಲ್ಲರೂ ಪೂರ್ಣ ಹೃದಯದಿಂದ ಒಟ್ಟಾಗಿ ಕೆಲಸ ಮಾಡೋಣ" ಎಂದು ಖರ್ಗೆ ಮನವಿ ಮಾಡಿದ್ದರು.






