ಚುನಾವಣೆ ಹಿನ್ನೆಲೆ: ಮಹಿಳೆಯರಿಗೆ ರೂ. 10 ಸಾವಿರ ನೀಡಿ ಓಲೈಕೆಗೆ ಮುಂದಾದ ಅಸ್ಸಾಂ ಸರ್ಕಾರ!

PC: x.com/TIgerNS3
ಗುವಾಹತಿ: ಸದ್ಯದಲ್ಲೇ ವಿಧಾನಸಭಾ ಚುನಾವಣೆ ಎದುರಿಸಲಿರುವ ಅಸ್ಸಾಂನಲ್ಲಿ ಹಿಮಾಂತ ಬಿಸ್ವ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರ ಮಹಿಳೆಯರ ಸ್ವಯಂ-ಉದ್ಯೋಗ ಯೋಜನೆಯನ್ನು ಮತ್ತಷ್ಟು ವಿಸ್ತರಿಸಲು ನಿರ್ಧರಿಸಿದೆ. ರಾಜ್ಯದ 35 ಜಿಲ್ಲೆಗಳಲ್ಲಿನ ಎಲ್ಲ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರಿಗೆ ತಲಾ 10,000 ರೂ. ವಿತರಿಸಲು ಸರ್ಕಾರ ಮುಂದಾಗಿದ್ದು, ಚುನಾವಣೆ ಹಿನ್ನೆಲೆ 40 ಲಕ್ಷ ಫಲಾನುಭವಿಗಳ ಗುರಿ ತಲುಪುವ ನಿಟ್ಟಿನಲ್ಲಿ ದಾಪುಗಾಲು ಹಾಕಿದೆ.
ಮುಖ್ಯಮಂತ್ರಿಗಳ ಮಹಿಳಾ ಉದ್ಯಮಿತ ಅಭಿಯಾನ (ಎಂಎಂಯುಎ) ಯೋಜನೆಯಡಿ ಈಗಾಗಲೇ 15 ಲಕ್ಷ ಮಹಿಳೆಯರು 10,000 ರೂ. ಪಡೆದಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಕಳೆದ ವರ್ಷದ ಏಪ್ರಿಲ್ 1ರಂದು ಘೋಷಿಸಲಾದ ಈ ಯೋಜನೆಯಡಿ ಆರಂಭದಲ್ಲಿ 32 ಲಕ್ಷ ಮಹಿಳೆಯರಿಗೆ ನೆರವು ನೀಡುವ ಉದ್ದೇಶವಿತ್ತು. ನಂತರ ಕಳೆದ ವರ್ಷದ ಬಜೆಟ್ನಲ್ಲಿ ಈ ಗುರಿಯನ್ನು 40 ಲಕ್ಷಕ್ಕೆ ವಿಸ್ತರಿಸಲಾಯಿತು. ಇದುವರೆಗೆ ಎಂಟು ಲಕ್ಷ ಮಹಿಳೆಯರು ‘ಲಕ್ಷಾಧಿಪತಿ’ ಸ್ಥಾನಮಾನ ಪಡೆದಿದ್ದು, ಕುಟುಂಬಗಳ ಆದಾಯ ಹೆಚ್ಚುವ ಮೂಲಕ ಗ್ರಾಮೀಣ ಆರ್ಥಿಕತೆಗೆ ಶಕ್ತಿ ತುಂಬುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
“ನಾರಿ ಶಕ್ತಿಯ ಸಬಲೀಕರಣ ಮತ್ತು ಅವರ ಕನಸುಗಳು ನನಸಾಗುವ ನಿಟ್ಟಿನಲ್ಲಿ ಸರ್ಕಾರ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸರೂಪತರ್ ಬಳಿಕ ಬೊಕ್ಕಾಹಾತ್ನಲ್ಲಿ 27 ಸಾವಿರಕ್ಕೂ ಅಧಿಕ ಸಹೋದರಿಯರು ತಲಾ 10,000 ನೆರವು ಪಡೆದಿದ್ದಾರೆ. 15 ಲಕ್ಷಕ್ಕೂ ಹೆಚ್ಚು ಮಹಿಳೆಯರು ಈಗಾಗಲೇ ಸಶಕ್ತರಾಗಿದ್ದು, 40 ಲಕ್ಷ ಲಕ್ಷಾಧಿಪತಿಗಳನ್ನು ರೂಪಿಸುವ ಗುರಿಗೆ ನಾವು ಸನಿಹದಲ್ಲಿದ್ದೇವೆ,” ಎಂದು ಮುಖ್ಯಮಂತ್ರಿ ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.





