ಮತದಾನ ಪ್ರಮಾಣ ಕುರಿತು ಕಾಲೋಚಿತ ಮಾಹಿತಿ ನೀಡಲು ನವೀಕೃತ ವ್ಯವಸ್ಥೆ ತರಲಿರುವ ಚುನಾವಣಾ ಆಯೋಗ

ಚುನಾವಣಾ ಆಯೋಗ | PTI
ಹೊಸದಿಲ್ಲಿ: ಅಂದಾಜು ಮತದಾನದ ಶೇಕಡಾವಾರು ದತ್ತಾಂಶಗಳ ಕುರಿತು ಸಮಯೋಚಿತ ಮಾಹಿತಿಗಳನ್ನು ಒದಗಿಸಲು ನವೀಕೃತ,ತಂತ್ರಜ್ಞಾನ ಆಧಾರಿತ ವ್ಯವಸ್ಥೆಯನ್ನು ಜಾರಿಗೆ ತರುವುದಾಗಿ ಚುನಾವಣಾ ಆಯೋಗವು ಮಂಗಳವಾರ ತಿಳಿಸಿದೆ. ನೂತನ ವ್ಯವಸ್ಥೆಯು ಹಿಂದಿನ ಭೌತಿಕ ವರದಿಗಾರಿಕೆಯಲ್ಲಿನ ಸಮಯ ವಿಳಂಬವನ್ನು ಗಮನಾರ್ಹವಾಗಿ ತಗ್ಗಿಸಲಿದೆ ಎಂದು ಅದು ಹೇಳಿದೆ.
ನೂತನ ಉಪಕ್ರಮದಡಿ ಅಂದಾಜು ಮತದಾನ ಪ್ರವೃತ್ತಿಗಳ ನವೀಕರಣದಲ್ಲಿ ವಿಳಂಬವನ್ನು ತಗ್ಗಿಸಲು ಪ್ರತಿ ಮತಗಟ್ಟೆಯ ಚುನಾವಣಾಧಿಕಾರಿ(ಪಿಆರ್ಒ)ಗಳು ಮತದಾನದ ದಿನದಂದು ಪ್ರತಿ ಎರಡು ಗಂಟೆಗಳಿಗೊಮ್ಮೆ ಮತದಾನದ ಪ್ರಮಾಣವನ್ನು ECINET ಆ್ಯಪ್ನಲ್ಲಿ ನೇರವಾಗಿ ನಮೂದಿಸಲಿದ್ದಾರೆ. ಇದು ಕ್ಷೇತ್ರ ಮಟ್ಟದಲ್ಲಿ ಸ್ವಯಂಚಾಲಿತವಾಗಿ ಏಕೀಕೃತಗೊಳ್ಳುತ್ತದೆ.
ಅಂದಾಜು ಮತದಾನದ ಶೇಕಡಾವಾರು ದತ್ತಾಂಶವನ್ನು ಮೊದಲಿನಂತೆ ಪ್ರತಿ ಎರಡು ಗಂಟೆಗಳಿಗೆ ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗವು ತಿಳಿಸಿದೆ.
ಗಮನಾರ್ಹವಾಗಿ,ಈಗ ಪಿಆರ್ಒಗಳು ಮತದಾನ ಮುಗಿದ ತಕ್ಷಣ,ತಾವು ಮತಗಟ್ಟೆಯಿಂದ ತೆರಳುವ ಮುನ್ನ ಮತದಾನ ಪ್ರಮಾಣದ ದತ್ತಾಂಶಗಳನ್ನು ECINET ಆ್ಯಪ್ನಲ್ಲಿ ನಮೂದಿಸಲಿದ್ದಾರೆ. ಇದು ವಿಳಂಬಗಳನ್ನು ಕಡಿಮೆ ಮಾಡುತ್ತದೆ ಮತ್ತು ನೆಟ್ವರ್ಕ್ ಸಂಪರ್ಕಕ್ಕೆ ಒಳಪಟ್ಟು ಮತದಾನ ಅಂತ್ಯದ ಬಳಿಕ ನವೀಕೃತ ಮತದಾನ ಪ್ರಮಾಣ ಆ್ಯಪ್ನಲ್ಲಿ ಕೇತ್ರವಾರು ಮತದಾನದ ಅಂದಾಜು ಶೇಕಡಾವಾರು ಪ್ರಮಾಣ ಲಭ್ಯವಾಗುವುದನ್ನು ಖಚಿತಪಡಿಸಲಿದೆ ಎಂದು ಆಯೋಗವು ಹೇಳಿದೆ.







