ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಲು ಗುರುತು ಸಾಬೀತುಪಡಿಸುವಂತೆ ಚುನಾವಣಾ ಆಯೋಗ ನೋಟಿಸ್ ನೀಡಿದೆ: ಗೋವಾ ಕಾಂಗ್ರೆಸ್ ಸಂಸದ

PC: goanewshub
ಪಣಜಿ, ಜ. 8: ಭಾರತೀಯ ಚುನಾವಣಾ ಆಯೋಗ (ಇಸಿಐ)ದಿಂದ ತಾನು ನೋಟಿಸ್ ಸ್ವೀಕರಿಸಿದ್ದೇನೆ ಎಂದು ದಕ್ಷಿಣ ಗೋವಾದ ಕಾಂಗ್ರೆಸ್ ಸಂಸದ ವಿರಿಯಾಟೊ ಫೆರ್ನಾಂಡಿಸ್ ಹೇಳಿದ್ದಾರೆ.
ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಲು ಗುರುತು ಸಾಬೀತುಪಡಿಸಲು ದಾಖಲೆಗಳೊಂದಿಗೆ ಚುನಾವಣಾ ಆಯೋಗದ ಮುಂದೆ ಹಾಜರಾಗುವಂತೆ ನೋಟಿಸ್ನಲ್ಲಿ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಒಬ್ಬ ಸಂಸದನನ್ನು ಈ ರೀತಿ ಪರಿಶೀಲನೆಗೆ ಒಳಪಡಿಸುವುದು ವಿರೋಧ ಪಕ್ಷಗಳು ಎತ್ತಿದ ಕಳವಳವನ್ನು ದೃಢಪಡಿಸುತ್ತದೆ. ಭಾರತೀಯ ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ತಡೆಯಲು ಕಾನೂನು ಬದ್ಧ ಮತದಾರರ ಹೆಸರುಗಳನ್ನು ಅಳಿಸುವ ಗುರಿಯನ್ನು ಹೊಂದಿದೆ ಎಂದು ಭಾರತೀಯ ನೌಕಾ ಪಡೆಯ ಮಾಜಿ ಅಧಿಕಾರಿಯಾಗಿರುವ ಫೆರ್ನಾಂಡಿಸ್ ಆರೋಪಿಸಿದ್ದಾರೆ.
‘‘ಮತದಾರರ ಪಟ್ಟಿಯಲ್ಲಿ ನನ್ನ ಹೆಸರನ್ನು ಉಳಿಸಿಕೊಳ್ಳುವುದಕ್ಕಾಗಿ ಗುರುತು ಸಾಬೀತುಪಡಿಸಲು ದಾಖಲೆಗಳೊಂದಿಗೆ ಹಾಜಾರಾಗುವಂತೆ ಭಾರತೀಯ ಚುನಾವಣಾ ಆಯೋಗದಿಂದ ನೋಟಿಸು ಸ್ವೀಕರಿಸಲಾಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅನುಮತಿ ನೀಡುವ ಮುನ್ನ ಚುನಾವಣಾ ಆಯೋಗ ನನ್ನನ್ನು ಸೇರಿದಂತೆ ಎಲ್ಲಾ ಅಭ್ಯರ್ಥಿಗಳನ್ನು ಅತ್ಯಂತ ಮೇಲ್ಮಟ್ಟದಲ್ಲಿ ಪರಿಶೀಲನೆಗೆ ಒಳಪಡಿಸಿದೆ. ಆದರೂ ಅದು ಈಗ ನೋಟಿಸು ನೀಡಿದೆ’’ ಎಂದು ಫೆರ್ನಾಂಡಿಸ್ ಸಾಮಾಜಿಕ ಮಾಧ್ಯಮದ ಪೋಸ್ಟ್ನಲ್ಲಿ ಹೇಳಿದ್ದಾರೆ.
‘‘ಅದೃಷ್ಟವಶಾತ್, ಮತದಾನದ ಹಕ್ಕು ಪಡೆದ ಬಳಿಕ 1989ರಿಂದ ನಾನು ಮತ ಚಲಾಯಿಸುತ್ತಾ ಬಂದಿದ್ದೇನೆ. 18 ವರ್ಷ ಪ್ರಾಯದವರಿಗೆ ಮತದಾನದ ಹಕ್ಕು ನೀಡಿದ ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ವಂದನೆಗಳು’’ ಎಂದು ಅವರು ಹೇಳಿದ್ದಾರೆ.
ಭಾರತೀಯ ನೌಕಾ ಪಡೆಯಲ್ಲಿನ 26 ವರ್ಷಗಳ ಸೇವೆಯಲ್ಲಿ ಲೋಕಸಭೆ, ವಿಧಾನ ಸಭೆ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಮತ ಚಲಾಯಿಸಲು ದೂರದ ಸೇನಾ ನಿಯೋಜನೆಯ ಸ್ಥಳದಿಂದ ಗೋವಾಕ್ಕೆ ಹಲವು ಬಾರಿ ಪ್ರಯಾಣಿಸಿದ್ದೇನೆ ಎಂದು ಫೆರ್ನಾಂಡಿಸ್ ತಿಳಿಸಿದ್ದಾರೆ.
‘‘ಒಬ್ಬ ಸಂಸದ ಇಂತಹ ಪರಿಶೀಲನೆ ಎದುರಿಸುವುದಾದರೆ, ರಾಜ್ಯದಲ್ಲಿ ಸಾಮಾನ್ಯ ಜನರ ಜನರ ಸ್ಥಿತಿಯನ್ನು ಊಹಿಸು ಸಾಧ್ಯವಿಲ್ಲ. ಇದು ಎಸ್ಐಆರ್ ಬಗ್ಗೆ ವಿರೋಧ ಪಕ್ಷಗಳು, ಸರಕಾರೇತರ ಸಂಸ್ಥೆಗಳು ಹಾಗೂ ನಾಗರಿಕರು ಎತ್ತಿದ ಕಳವಳಗಳನ್ನು ದೃಢಪಡಿಸುತ್ತದೆ. ಕಾನೂನು ಬದ್ದ ಮತದಾರರ ಹೆಸರುಗಳನ್ನು ಅಳಿಸಲು ಹಾಗೂ ಮತದಾನದ ಪ್ರಕ್ರಿಯೆಯಲ್ಲಿ ಅವರು ಭಾಗವಹಿಸದಂತೆ ತಡೆಯಲು ಚುನಾವಣಾ ಆಯೋಗ ಎಸ್ಐಆರ್ ಆನ್ನು ಬಳಸುತ್ತಿದೆ’’ ಎಂದು ಅವರು ಆರೋಪಿಸಿದ್ದಾರೆ.







