SIR ಬಳಿಕ ಹೊರಗುಳಿದ ಅರ್ಹ ಮತದಾರರ ಸೇರ್ಪಡೆಗೆ ʼವಿಶೇಷ ಅಭಿಯಾನʼ: ಚುನಾವಣಾ ಆಯೋಗ ಆದೇಶ

ಚುನಾವಣಾ ಆಯೋಗ | Photo Credit : PTI
ಹೊಸದಿಲ್ಲಿ: ವಿಶೇಷ ತೀವ್ರ ಪರಿಷ್ಕರಣೆ (SIR) ಪೂರ್ಣಗೊಂಡ ಬಳಿಕ ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಅರ್ಹ ಮತದಾರರನ್ನು ಗುರುತಿಸಿ, ಅವರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ವಿಶೇಷ ಅಭಿಯಾನ ಆರಂಭಿಸುವಂತೆ ಭಾರತದ ಚುನಾವಣಾ ಆಯೋಗ ಮುಖ್ಯ ಚುನಾವಣಾಧಿಕಾರಿಗಳು (CEOs), ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಮತದಾರರ ನೋಂದಣಿ ಅಧಿಕಾರಿಗಳಿಗೆ (EROs) ನಿರ್ದೇಶನ ನೀಡಿದೆ.
ಅಕ್ಟೋಬರ್ 1ರಂದು ಎಲ್ಲಾ ಮುಖ್ಯ ಚುನಾವಣಾಧಿಕಾರಿಗಳೊಂದಿಗೆ ಚುನಾವಣಾ ಆಯೋಗದ ಸಭೆ ನಡೆದಿತ್ತು. ಆ ಬಳಿಕ ಈ ನಿರ್ದೇಶನ ನೀಡಲಾಗಿದೆ. SIRಗೆ ಮೊದಲ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದು, ಪ್ರಸ್ತುತ ಪಟ್ಟಿಯಲ್ಲಿ ಹೆಸರು ಇಲ್ಲದ ಮತದಾರರು ಹಾಗೂ ಇನ್ನೂ ನೋಂದಣಿಯಾಗದ ಮೊದಲ ಬಾರಿಗೆ ಮತದಾನ ಮಾಡಲಿರುವ ಯುವ ಮತದಾರರನ್ನು ಈ ವಿಶೇಷ ಅಭಿಯಾನ ಒಳಗೊಂಡಿರಲಿದೆ.
ಮತದಾರರ ನೋಂದಣಿ ನಿರಂತರವಾದ ಪ್ರಕ್ರಿಯೆಯಾಗಿದ್ದು, SIR ಗಣತಿ ಸಂದರ್ಭದಲ್ಲಿ ಸೇರ್ಪಡೆಯಾಗಿಲ್ಲ ಎಂಬ ಕಾರಣಕ್ಕೆ ಯಾವುದೇ ಅರ್ಹ ನಾಗರಿಕರಿಗೆ ಮತದಾರರ ಪಟ್ಟಿಗೆ ನೋಂದಾಯಿಸಿಕೊಳ್ಳುವ ಅವಕಾಶ ನಿರಾಕರಿಸಬಾರದು ಎಂದು ECI ತಿಳಿಸಿದೆ.
ಈ ಅಭಿಯಾನದಡಿ, ಬೂತ್ ಮಟ್ಟದ ಅಧಿಕಾರಿಗಳು (BLO) ಪ್ರಸ್ತುತ ಮತದಾರರ ಪಟ್ಟಿಯನ್ನು SIRಗೆ ಮುನ್ನದ ಮತದಾರರ ಪಟ್ಟಿಯೊಂದಿಗೆ ಹೋಲಿಸಿ, ಹೆಸರುಗಳನ್ನು ಕೈಬಿಡಲಾಗಿರುವ ಮತದಾರರ ಬೂತ್ವಾರು ಪಟ್ಟಿಯನ್ನು ಸಿದ್ಧಪಡಿಸಲಿದ್ದಾರೆ. ಬಳಿಕ ಈ ಮತದಾರರ ಮನೆ-ಮನೆಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ. ಅರ್ಹರಾಗಿರುವುದು ಕಂಡುಬಂದಲ್ಲಿ, ನಮೂನೆ–6 (Form 6) ಮೂಲಕ ಅವರನ್ನು ಮತದಾರರ ಪಟ್ಟಿಗೆ ಮರುಸೇರ್ಪಡೆಗೊಳಿಸಲು ಅಗತ್ಯ ನೆರವು ನೀಡಲಿದ್ದಾರೆ.
ಮನೆ-ಮನೆಗೆ ಭೇಟಿ ನೀಡುವ ವೇಳೆ BLOಗಳು ಪಟ್ಟಿಯಿಂದ ಹೊರಗುಳಿದಿರುವ ಅರ್ಹ ಮತದಾರರು, ಮೊದಲ ಬಾರಿಗೆ ಮತದಾನ ಮಾಡುವವರು ಹಾಗೂ ಯುವ ಮತದಾರರನ್ನು ಕೂಡ ಗುರುತಿಸಿ ಅವರ ನೋಂದಣಿಗೆ ಅಗತ್ಯ ನೆರವು ನೀಡಲಿದ್ದಾರೆ.
ಬೂತ್ವಾರು ಪಟ್ಟಿಗಳನ್ನು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟ್ಗಳು (BLAs) ಹಾಗೂ ಸಂಬಂಧಿತ ಮತದಾರರ ನೋಂದಣಿ ಅಧಿಕಾರಿಗಳಿಗೆ (EROs) ಹಂಚಲಾಗುತ್ತದೆ. ಪರಿಶೀಲನಾ ವರದಿಗಳೊಂದಿಗೆ ನಮೂನೆ–6 (Form 6) ಅರ್ಜಿಗಳನ್ನು EROಗಳು ಸ್ವೀಕರಿಸಲಿದ್ದು, ಜನಪ್ರತಿನಿಧಿ ಕಾಯ್ದೆ, 1950 ಹಾಗೂ ಮತದಾರರ ನೋಂದಣಿ ನಿಯಮಗಳು, 1960ರ ಅಡಿಯಲ್ಲಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.
ನೋಂದಣಿ ಅರ್ಜಿಗಳನ್ನು ಸಲ್ಲಿಸಲು ನಾಗರಿಕರಿಗೆ ನೆರವು ನೀಡುವ ಉದ್ದೇಶದಿಂದ ಬೂತ್ ಮಟ್ಟದ ಶಿಬಿರಗಳನ್ನು ಆಯೋಜಿಸುವಂತೆ ಚುನಾವಣಾ ಆಯೋಗವು ಚುನಾವಣಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಆಶ್ರಯ ಕೇಂದ್ರಗಳು ಹಾಗೂ ಕಾರ್ಮಿಕರ ಕಾಲನಿಗಳಲ್ಲಿ ವಾಸಿಸುವವರು, ನಿರಾಶ್ರಿತರು ಮತ್ತು ಇತರ ಅಂಚಿನಲ್ಲಿರುವ ವರ್ಗಗಳ ಜನರಿಗಾಗಿ ವಿಶೇಷ ಶಿಬಿರಗಳನ್ನು ಕೂಡ ಆಯೋಜಿಸಲಾಗುತ್ತದೆ ಎಂದು ತಿಳಿಸಿದೆ.
SIR ಗಣತಿ ವೇಳೆ ಸಿದ್ಧಪಡಿಸಿದ Absent, Shifted, Dead, Duplicate ಎಂದು ವರ್ಗೀಕರಿಸಲಾದ ಮತದಾರರ ಪಟ್ಟಿಗಳನ್ನು ಸ್ಥಳೀಯ ಸರಕಾರಿ ಕಚೇರಿಗಳಲ್ಲಿ ಪ್ರಕಟಿಸಲಾಗಿದೆ ಎಂದು ಚುನಾವಣಾ ಆಯೋಗ (ECI) ತಿಳಿಸಿದೆ. ಈ ಪಟ್ಟಿಗಳನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಹಂಚಿಕೊಳ್ಳಲಾಗಿದ್ದು, ಸಂಬಂಧಿತ ಮುಖ್ಯ ಚುನಾವಣಾಧಿಕಾರಿಗಳ (CEO) ವೆಬ್ಸೈ ಟ್ಗಲ್ಲಿಯೂ ಅಪ್ಲೋಡ್ ಮಾಡಲಾಗಿದೆ ಎಂದು ECI ತಿಳಿಸಿದೆ.
ವಿಶೇಷ ಅಭಿಯಾನ ಮುಕ್ತಾಯಗೊಂಡ ಬಳಿಕ EROಗಳು ಮತ್ತೊಮ್ಮೆ ಬೂತ್ವಾರು ಪಟ್ಟಿಗಳನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ. ಇದರಿಂದ ಪಟ್ಟಿಯಿಂದ ಹೊರಗುಳಿದಿರುವ ಯಾವುದೇ ಅರ್ಹ ಮತದಾರರ ನೋಂದಣಿಗೆ ಅವರು ಅಗತ್ಯ ನೆರವು ನೀಡಬಹುದಾಗಿದೆ. ಇದಲ್ಲದೆ ಶೈಕ್ಷಣಿಕ ಸಂಸ್ಥೆಗಳು, ಜನಸಂಪರ್ಕ ಕಾರ್ಯಕ್ರಮಗಳು, SVEEP ಚಟುವಟಿಕೆಗಳು ಹಾಗೂ ಇತರ ವೇದಿಕೆಗಳ ಮೂಲಕ ಜಾಗೃತಿ ಮತ್ತು ಜನಸಂಪರ್ಕ ಅಭಿಯಾನಗಳನ್ನು ನಡೆಸುವಂತೆ ಚುನಾವಣಾ ಅಧಿಕಾರಿಗಳಿಗೆ ಆಯೋಗವು ಸೂಚಿಸಿದೆ. ಇದಲ್ಲದೆ ಈ ಅಭಿಯಾನದ ಪ್ರಗತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವಂತೆಯೂ ನಿರ್ದೇಶನ ನೀಡಿದೆ.






