3 ದಶಕಗಳ ಬಳಿಕ ಒಂದಾದ ತಾಯಿ-ಮಗ ಪ್ರಕರಣಕ್ಕೆ ತಿರುವು: ಮಗನ ರೂಪದಲ್ಲಿ ಬಂದಿದ್ದು ದರೋಡೆಕೋರ!

PC : PTI
ಘಾಝಿಯಾಬಾದ್: 3 ದಶಕಗಳ ಬಳಿಕ ಒಂದಾದ ತಾಯಿ-ಮಗ ಪ್ರಕರಣ ತಿರುವು ಪಡೆದುಕೊಂಡಿದ್ದು, ಪುತ್ರ ದೊರೆತ ಸಂಭ್ರಮದಲ್ಲಿದ್ದ ತಾಯಿಗೆ ಸಂಕಟ ಆವರಿಸಿದೆ. ಕಳೆದುಹೋದ ಮಗ ಎಂದು ಬರ ಮಾಡಿಕೊಂಡ ವ್ಯಕ್ತಿ ತನ್ನ ಮಗನಲ್ಲ, ದರೋಡೆಕೋರ ಎಂಬ ಅಂಶ ಬಯಲಾಗಿ ತಾಯಿ ಆಘಾತಗೊಂಡಿದ್ದಾರೆ.
30 ವರ್ಷಗಳ ಹಿಂದೆ, ಗಾಝಿಯಾಬಾದ್ ನ ಲೀಲಾವತಿ ಎಂಬ ಮಹಿಳೆಯ ಮಗನನ್ನು ಹಾಡಹಗಲೇ ಅಪಹರಿಸಲಾಗಿತ್ತು. ಕಳೆದ ವಾರ ಗಾಝಿಯಾಬಾದ್ ನ ಖೋಡಾ ಪೊಲೀಸ್ ಠಾಣೆಯಲ್ಲಿ ತಮ್ಮ ಕಾಣೆಯಾಗಿದ್ದ ಪುತ್ರ ಎಂದು 40 ವರ್ಷದ ವ್ಯಕ್ತಿಯೊಬ್ಬನನ್ನು ಲೀಲಾವತಿ ಅವರು ಗುರುತಿಸಿದ್ದರು. ವಿಶೇಷ ಪ್ರಕರಣವಾಗಿದ್ದುದರಿಂದ ಈ ಘಟನೆಯು ಉತ್ತರ ಪ್ರದೇಶದಲ್ಲಿ ಮಾತ್ರವಲ್ಲದೆ, ದೇಶದ ಪ್ರಮುಖ ಮಾಧ್ಯಮಗಳ ಗಮನ ಸೆಳೆದಿದ್ದವು.
ಆದರೆ, ಸದ್ಯ ಪ್ರಕರಣಕ್ಕೆ ವಿಚಿತ್ರ ತಿರುವು ಪಡೆದಿದ್ದು, ಮಗನೆಂದು ಬಂದ ವ್ಯಕ್ತಿ ಓರ್ವ ದರೋಡೆಕೋರ ಎಂಬುದು ಬಹಿರಂಗವಾಗಿದೆ. ಈ ವ್ಯಕ್ತಿ ಮನೆಗಳನ್ನು ದೋಚಲು ಇದೇ ರೀತಿಯಾಗಿ ಬೇರೆ ಬೇರೆ ಗುರುತಿನಲ್ಲಿ ನೆಲೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Emotional Reunion After 30 Years? No, That's How He Robbed Many Families https://t.co/U5uUMnnEZH pic.twitter.com/MKUo07DeiI
— NDTV (@ndtv) December 7, 2024
ಮಗನೆಂದು ಬಂದ ವ್ಯಕ್ತಿಯ ಮೇಲೆ ಕುಟುಂಬಸ್ಥರಿಗೆ ಸಂದೇಹ ಬಂದಿದ್ದು, ಈ ಹಿನ್ನೆಲಯಲ್ಲಿ ಕುಟುಂಬದ ಡಿಎನ್ಎ ಪರೀಕ್ಷೆ ನಡೆಸಿದಾಗ ಸತ್ಯ ಬಯಲಾಗಿದೆ. ಲೀಲಾವತಿಯ ಕಳೆದು ಹೋದ ಪುತ್ರ ಭೀಮಸೇನ್ ಹೆಸರಿನಲ್ಲಿ ಬಂದಿದ್ದ ನಿಜವಾದ ಹೆಸರು ಇಂದ್ರರಾಜ್ ರಂದು ತಿಳಿದು ಬಂದಿದ್ದು, ಈತ ಇದೇ ರೀತಿಯಲ್ಲಿ ಕನಿಷ್ಠ 9 ಕಡೆಗಳಲ್ಲಿ ಗುರುತು ಬದಲಿಸಿ ವಂಚಿಸಿದ್ದಾನೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ.
ಪೊಲೀಸರ ಎದುರು ತನ್ನನ್ನು 7 ವರ್ಷದವನಿದ್ದಾಗ ಅಪಹರಿಸಲಾಗಿತ್ತು ಎಂದು ರಾಜು ಕಥೆ ಕಟ್ಟಿದ್ದ. ಆದರೆ, ಹೆಚ್ಚಿನ ತನಿಖೆಯಿಂದ ರಾಜುವಿಗೆ ಕಳ್ಳತನ ಮಾಡುವ ಅಭ್ಯಾಸವಿದ್ದ ಕಾರಣ ಆತನನ್ನು ಆತನ ಮನೆಯವರೇ ಮನೆಯಿಂದ ಹೊರ ಹಾಕಿರುವುದು ಬೆಳಕಿಗೆ ಬಂದಿದೆ. ಸಂಬಂಧಿಕರು ಮತ್ತು ಪರಿಚಯಸ್ಥರ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಈತನಿಂದ ಬೇಸತ್ತು 2005ರಲ್ಲಿ ಮನೆಯಿಂದ ಹೊರ ಹಾಕಿದ್ದರು. ನಂತರ ತನ್ನ ಗುರುತು ಮರೆಮಾಚಿಕೊಂಡು ಹಲವರ ಮನೆಗಳಲ್ಲಿ ವಾಸ ಮಾಡುತ್ತಿದ್ದ ಎಂದು ಗಾಝಿಯಾಬಾದ್ ಡಿಸಿಪಿ ನಿಮಿಷ್ ಪಾಟೀಲ್ ಹೇಳಿದ್ದಾರೆ.
ಮನೆಯಿಂದ ಹೊರಹಾಕಲ್ಪಟ್ಟ ನಂತರ, ಆತ ಒಂಬತ್ತು ವಿಭಿನ್ನ ಕುಟುಂಬಗಳೊಂದಿಗೆ ವಾಸಿಸಲು ತಮ್ಮ ಗುರುತನ್ನು ಬದಲಾಯಿಸಿದ್ದ. ನಂತರ ಆತ ಅವರ ಮನೆಗಳನ್ನು ದೋಚಿ, ಯಾರಿಗೂ ತಿಳಿಸದೆ ಹೊರಟುಹೋಗುತ್ತಿದ್ದ. ಇದು ಅವನ ಕಾರ್ಯ ವಿಧಾನವಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆದರೆ, ತನ್ನ ತಾಯಿಯ ಮರಣದ ನಂತರ ಉಚಿತ ಆಹಾರಕ್ಕಾಗಿ ಇತರರ ಮನೆಯಲ್ಲಿ ವಾಸಿಸುತ್ತಿದ್ದೆ ಎಂದು ರಾಜು ಪೊಲೀಸರಿಗೆ ತಿಳಿಸಿದ್ದಾನೆ.
ಆತ ತನ್ನ ಗುರುತನ್ನು ಮರೆಮಾಚಿಕೊಂಡು ತಂಗಿದ್ದ ಕನಿಷ್ಠ ಐದು ಸ್ಥಳಗಳನ್ನು ಪೊಲೀಸರು ದೃಢಪಡಿಸಿದ್ದಾರೆ.