‘ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿ ಮುಂಬೈಗೆ ಪಾದಯಾತ್ರೆ ನಡೆಸಿ’: ಪ್ರತಿಭಟನಾನಿರತ ಆದಿವಾಸಿ ವಿದ್ಯಾರ್ಥಿಗಳಿಗೆ ಅಭಿಜಿತ್ ದೀಪ್ಕೆ ಕರೆ

Photo: screengrab/ x.com/PTI_News
ಮುಂಬೈ: ನಾಸಿಕ್ ನ ಈದ್ಗಾ ಮೈದಾನದಲ್ಲಿ ಆದಿವಾಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ 17ನೇ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ, ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿ ಹೋರಾಟವನ್ನು ಮುಂಬೈಗೆ ಕೊಂಡೊಯ್ಯುವಂತೆ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಗುರುವಾರ ಕರೆ ನೀಡಿದ್ದಾರೆ.
ಆಶ್ರಮ ಶಾಲೆಗಳಿಗೆ ಹಳಸಿದ ಆಹಾರ ಸರಬರಾಜು ಮಾಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ‘ಸೆಂಟ್ರಲ್ ಕಿಚನ್’ ಯೋಜನೆಯನ್ನು ವಿರೋಧಿಸಿ ಹಾಗೂ ಆದಿವಾಸಿ ವಸತಿ ನಿಲಯಗಳಲ್ಲಿ ಉತ್ತಮ ಗುಣಮಟ್ಟದ ಹಾಸಿಗೆಗಳು, ಸುಸ್ಥಿತಿಯಲ್ಲಿರುವ ಶೌಚಾಲಯಗಳು, ಸಮರ್ಪಕ ನೀರು ಸರಬರಾಜು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಸಂವಾದ ನಡೆಸಿದ ದೀಪ್ಕೆ , ಸರ್ಕಾರದ ಗಮನ ಸೆಳೆಯಲು ಮಹಾರಾಷ್ಟ್ರದ ಅಧಿಕಾರ ಕೇಂದ್ರವಾಗಿರುವ ಮುಂಬೈಗೆ ಪಾದಯಾತ್ರೆ ನಡೆಸುವುದೊಂದೇ ದಾರಿ ಎಂದು ಅವರಿಗೆ ಸಲಹೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಆದಿವಾಸಿ ವಿದ್ಯಾರ್ಥಿಗಳು ಓದುತ್ತಿರುವ ಶಿಕ್ಷಣ ಸಂಸ್ಥೆಗಳ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಹಲವು ಶಾಲೆಗಳಲ್ಲಿ ಕುಡಿಯುವ ನೀರು, ಸೂಕ್ತ ಶೌಚಾಲಯ, ಹಾಸಿಗೆಗಳು ಹಾಗೂ ಕನಿಷ್ಠ ಶೈಕ್ಷಣಿಕ ಸೌಲಭ್ಯಗಳೂ ಇಲ್ಲ. ವಿದ್ಯಾರ್ಥಿಗಳು ಎತ್ತಿರುವ ಸಮಸ್ಯೆಗಳು ದೇಶಾದ್ಯಂತ ಆದಿವಾಸಿ ಶಿಕ್ಷಣದ ದುಸ್ಥಿತಿಯನ್ನು ಪ್ರತಿಬಿಂಬಿಸುತ್ತಿವೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಿಎಂ ಕೇರ್ಸ್ ನಿಧಿಯ ಬಳಕೆಯ ಕುರಿತು ಪ್ರಸ್ತಾಪಿಸಿದ ಅವರು, “ಪಿಎಂ ಕೇರ್ಸ್ ನಲ್ಲಿ ಸುಮಾರು 8,500 ಕೋಟಿ ರೂ. ಹಣ ಉಳಿದಿದೆ. ಈ ಹಣವನ್ನು ನಿವೃತ್ತಿ ಜೀವನಕ್ಕಾಗಿ ಕಾಯ್ದಿರಿಸಲಾಗಿದೆಯೇ? ದೇಶಾದ್ಯಂತ ಆದಿವಾಸಿ ಶಿಕ್ಷಣದ ಚಿತ್ರಣವನ್ನೇ ಬದಲಾಯಿಸಲು ಈ ಮೊತ್ತ ಸಾಕು,” ಎಂದು ಹೇಳಿದರು.
ಹಲವು ಸಚಿವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದರೂ ಸಮಸ್ಯೆಗಳನ್ನು ಬಗೆಹರಿಸಲು ವಿಫಲವಾಗಿರುವುದಕ್ಕೆ ದೀಪ್ಕೆ ಆಶ್ಚರ್ಯ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದ ಅವರು, “ಇಲ್ಲಿಂದ ಕೂಗಿದರೆ ಅವರ ಧ್ವನಿ ಸರ್ಕಾರಕ್ಕೆ ಕೇಳಿಸುವುದಿಲ್ಲ. ಹಾಗಾಗಿ ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸಿ, ಹೋರಾಟವನ್ನು ಮುಂದುವರಿಸುತ್ತಾ ‘ಮುಂಬೈ ಚಲೋ’ ನಡೆಸುವಂತೆ ನಾನು ಅವರಿಗೆ ಸಲಹೆ ನೀಡಿದ್ದೇನೆ. ಅಲ್ಲಿಗೆ ಹೋದಾಗ ಸರ್ಕಾರ ಅವರ ಮಾತನ್ನು ಕೇಳಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ,” ಎಂದರು.
ಹೋರಾಟಕ್ಕೆ ತಮ್ಮ ಸಂಘಟನೆಯ ಬೆಂಬಲವನ್ನು ಘೋಷಿಸಿದ ದೀಪ್ಕೆ, “ಶೇ. 75ರಷ್ಟು ಸರ್ಕಾರಿ ಶಾಲೆಗಳು ಸುಸ್ಥಿತಿಯಲ್ಲಿವೆ ಎಂದು ಮುಖ್ಯಮಂತ್ರಿಗಳು ಇತ್ತೀಚೆಗೆ ಹೇಳಿದ್ದಾರೆ. ಅವರು ನನ್ನೊಂದಿಗೆ ಹಾಗೂ ಮಾಧ್ಯಮಗಳೊಂದಿಗೆ ವಿದರ್ಭ ಭಾಗದ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಲಿ,” ಎಂದು ಸರ್ಕಾರಕ್ಕೆ ಸವಾಲು ಹಾಕಿದರು.
2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಸರ್ಕಾರದ ಸಾಧನೆಗಳನ್ನು ಒಳಗೊಂಡ ‘ಪ್ರೋಗ್ರೆಸ್ ರಿಪೋರ್ಟ್’ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿದರು.






