ಪಾಕಿಸ್ತಾನ ಪರ ಬೇಹುಗಾರಿಕೆ : ಥಾಣೆ ಮೂಲದ ಇಂಜಿನಿಯರ್ ರವೀಂದ್ರ ವರ್ಮಾ ಬಂಧನ
ಪಾಕ್ ಏಜೆಂಟ್ಗಳಿಗೆ ಭಾರತದ ಯುದ್ಧನೌಕೆಗಳು, ಜಲಾಂತರ್ಗಾಮಿ ನೌಕೆಗಳ ಬಗ್ಗೆ ಸೂಕ್ಷ್ಮ ಮಾಹಿತಿ ಹಂಚಿಕೊಳ್ಳುತ್ತಿದ್ದ ವರ್ಮಾ

ಸಾಂದರ್ಭಿಕ ಚಿತ್ರ | NDTV
ಮುಂಬೈ: ಬೇಹುಗಾರಿಕೆ ಆರೋಪದ ಮೇಲೆ ಬಂಧಿಸಲ್ಪಟ್ಟ ಥಾಣೆ ಮೂಲದ ಇಂಜಿನಿಯರ್ ರವೀಂದ್ರ ವರ್ಮಾ, ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿ ನೌಕೆಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ದಳದ ಅಧಿಕಾರಿಗಳಿಗೆ ರೇಖಾಚಿತ್ರಗಳು ಮತ್ತು ಆಡಿಯೊ ಟಿಪ್ಪಣಿಗಳ ಮೂಲಕ ಹಂಚಿಕೊಂಡಿದ್ದ ಮತ್ತು ಇದಕ್ಕೆ ಪ್ರತಿಯಾಗಿ ನಗದು ಹಣವನ್ನು ಪಡೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಥಾಣೆಯ ಕಲ್ವಾ ನಿವಾಸಿ ಮೆಕ್ಯಾನಿಕಲ್ ಇಂಜಿನಿಯರ್ ರವೀಂದ್ರ ವರ್ಮಾ(27)ನನ್ನು ಬುಧವಾರ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಬಂಧಿಸಿತ್ತು. ವರ್ಮಾ ಭಾರತಕ್ಕೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಹಲವು ಬಾರಿ ಹಂಚಿಕೊಂಡಿದ್ದಾನೆ. ಈ ಮಾಹಿತಿಗೆ ಪ್ರತಿಯಾಗಿ ವಿವಿಧ ಬ್ಯಾಂಕ್ ಖಾತೆಗಳಿಂದ ಹಣವನ್ನು ಪಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರವೀಂದ್ರ ವರ್ಮಾ ಭಾರತದ ವಿವಿಧ ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿ ನೌಕೆಗಳ ಬಗ್ಗೆ ಪಾಕಿಸ್ತಾನ ಪಿಐಒಗೆ ಮಾಹಿತಿ ನೀಡಿದ್ದಾನೆ. ವರ್ಮಾ ರಕ್ಷಣಾ ತಂತ್ರಜ್ಞಾನ ಸಂಸ್ಥೆಯಲ್ಲಿ ಜೂನಿಯರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಇದರಿಂದಾಗಿ ದಕ್ಷಿಣ ಮುಂಬೈನಲ್ಲಿರುವ ನೇವಲ್ ಡಾಕ್ಯಾರ್ಡ್ಗೆ ಪ್ರವೇಶಕ್ಕೆ ಅನುಮತಿ ಹೊಂದಿದ್ದ. ನೌಕಾ ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳಲ್ಲಿಯೂ ಪ್ರಯಾಣಿಸುತ್ತಿದ್ದ ಎಂದು ಮತ್ತೋರ್ವ ಅಧಿಕಾರಿ ಹೇಳಿದ್ದಾರೆ.
ನೌಕಾ ಡಾಕ್ಯಾರ್ಡ್ಗೆ ಭೇಟಿ ನೀಡುವಾಗ ಆತನಿಗೆ ಮೊಬೈಲ್ ಫೋನ್ ಒಳಗೆ ಕೊಂಡೊಯ್ಯಲು ಅವಕಾಶವಿರಲಿಲ್ಲ. ಆದ್ದರಿಂದ, ಅಲ್ಲಿನ ಕೆಲಸ ಮುಗಿಸಿದ ನಂತರ ರೇಖಾಚಿತ್ರಗಳ ಮೂಲಕ ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿ ನೌಕೆಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದ. ಕೆಲವೊಮ್ಮೆ, ಆಡಿಯೋ ಮೂಲಕವೂ ಮಾಹಿತಿಯನ್ನು ನೀಡುತ್ತಿದ್ದ ಎನ್ನುವುದು ತನಿಖೆಯ ವೇಳೆ ಬಯಲಾಗಿದೆ.
ವರ್ಮಾ 2024ರ ನವೆಂಬರ್ನಿಂದ ಪಾಕಿಸ್ತಾನದ ಏಜೆಂಟ್ ಜೊತೆ ಸಂಪರ್ಕದಲ್ಲಿದ್ದ ಎಂದು ತಿಳಿದು ಬಂದಿದೆ. ಪಾಯಲ್ ಶರ್ಮಾ ಮತ್ತು ಇಸ್ಪ್ರೀತ್ ಎಂಬ ಹೆಸರಿನ ಫೇಸ್ಬುಕ್ ಖಾತೆ ಮೂಲಕ ಪಾಕ್ ಏಜೆಂಟ್ಗಳು ರವೀಂದ್ರ ವರ್ಮಾನಿಗೆ ಸಂಪರ್ಕಿಸಿದ್ದರು. ಮಹಿಳೆಯರಂತೆ ನಟಿಸಿ ಪಾಕ್ ಏಜೆಂಟ್ಗಳು ವರ್ಮಾಗೆ ಮೊದಲು ಹನಿಟ್ರ್ಯಾಪ್ ಮಾಡಿದ್ದರು. ಆ ಬಳಿಕ ಭಾರತಕ್ಕೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ವರ್ಮಾ ಪಾಕ್ ಏಜೆಂಟ್ಗಳ ಜೊತೆ ಹಂಚಿಕೊಳ್ಳುತ್ತಿದ್ದ ಎನ್ನುವುದು ತನಿಖೆಯ ವೇಳೆ ಬಯಲಾಗಿದೆ.







