ಇತಿಹಾಸ ನಿರ್ಮಿಸಿದ ಇವಿ ಮಾರುಕಟ್ಟೆ: ಒಂದೇ ವರ್ಷ 20 ಲಕ್ಷ ಬ್ಯಾಟರಿ ವಾಹನಗಳು ನೋಂದಣಿ !

ಚೆನ್ನೈ: ಬ್ಯಾಟರಿ ಚಾಲಿತ ವಾಹನಗಳಿಗೆ 2025 ಅತ್ಯಂತ ಉತ್ತಮ ವರ್ಷವಾಗಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ದೇಶದಲ್ಲಿ ಒಂದೇ ವರ್ಷ 20 ಲಕ್ಷ ಬ್ಯಾಟರಿ ಚಾಲಿತ ವಾಹನಗಳು ನೋಂದಣಿಗೊಂಡಿವೆ. ಈ ವರ್ಷದಲ್ಲಿ ಇನ್ನೂ ಒಂದು ತಿಂಗಳು ಬಾಕಿ ಇರುವಂತೆಯೇ ಭಾರತದಲ್ಲಿ ಇವಿ ಕ್ರಾಂತಿ ಈ ಮೈಲುಗಲ್ಲು ದಾಟಿದೆ.
ಈ ಏರಿಕೆ ಗ್ರಾಹಕರಲ್ಲಿನ ಆಸಕ್ತಿ, ಉತ್ತಮ ಉತ್ಪನ್ನ ಲಭ್ಯತೆ ಮತ್ತು ಇವಿ ಅಳವಡಿಕೆಯನ್ನು ಬೆಂಬಲಿಸುವ ನೀತಿಯಿಂದಾಗಿ ಈ ಸಾಧನೆ ಸಾಧ್ಯವಾಗಿದೆ. ಮಂಗಳವಾರದವರೆಗೆ ಪ್ರಸಕ್ತ ವರ್ಷದಲ್ಲಿ ಹೈಬ್ರೀಡ್ ವಾಹನಗಳನ್ನು ಹೊರತುಪಡಿಸಿ, 2.02 ದಶಲಕ್ಷ ಇವಿ ನೋಂದಣಿಯಾಗಿದೆ. 2024ರಲ್ಲಿ ಒಟ್ಟು 1.95 ದಶಲಕ್ಷ ವಾಹನಗಳು ನೋಂದಣಿಯಾಗಿದ್ದವು.
ಇವಿ ನೀತಿ ಬದಲಾವಣೆಯಾಗಿದ್ದರೂ, ಎಲೆಕ್ಟ್ರಿಕ್ ವಾಹನಗಳಿಗೆ ಪ್ರಬಲ ಬೇಡಿಕೆ ಮುಂದುವರಿದಿದೆ. ಬ್ಯಾಟರಿ ವೆಚ್ಚದಲ್ಲಿ ಇಳಿಕೆ, ನಿಧಾನವಾಗಿ ಏರಿಕೆಯಾಗುತ್ತಿರುವ ಚಾರ್ಜಿಂಗ್ ಜಾಲ ಮತ್ತು ಹೊಸ ಧೀರ್ಘ ದೂರದ ಮಾದರಿಗಳು ಇದಕ್ಕೆ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಬ್ಯಾಟರಿ ಚಾಲಿತ ವಾಹನಗಳ ಬೇಡಿಕೆ ವೇಗ ಪಡೆಯಲು ಮುಖ್ಯ ಕಾರಣ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು. ವಾಹನ ಅಂಕಿ ಅಂಶಗಳ ಪ್ರಕಾರ, ಒಟ್ಟು ಎಲೆಕ್ಟ್ರಿಕ್ ವಾಹನಗಳ ನೋಂದಣಿಯಲ್ಲಿ ದ್ವಿಚಕ್ರ ವಾಹನಗಳು ಸಿಂಹಪಾಲು ಪಡೆದಿವೆ. ಒಟ್ಟು ಎಲೆಕ್ಟ್ರಿಕ್ ವಾಹನಗಳ ಪೈಕಿ ದ್ವಿಚಕ್ರ ವಾಹನಗಳ ಪಾಲು ಶೇಕಡ 57ರಷ್ಟಿವೆ. "ಕಳೆದ ವರ್ಷ ಇದ್ದ ಶೇಕಡ 27ರ ಪ್ರಗತಿಗೆ ಹೋಲಿಸಿದರೆ ಈಗ ಶೇಕಡ 15ರಷ್ಟು ಪ್ರಗತಿ ಕಂಡುಬಂದಿದ್ದು, ಇದು ಕೂಡಾ ಆರೋಗ್ಯಕರ ಬೆಳವಣಿಗೆ. ದ್ವಿಚಕ್ರ ವಾಹನಗಳಿಗೆ ಬೇಡಿಕೆ ಮುಂದುವರಿದಿರುವುದು, ತ್ರಿಚಕ್ರ ಸರಕು ವಾಹನಗಳ ವಿದ್ಯುದ್ದೀಕರಣ ಮತ್ತು ಸ್ಪರ್ಧಾತ್ಮಕ ಚತುಶ್ಚಕ್ರ ವಾಹನಗಳನ್ನು ಪರಿಚಯಿಸುತ್ತಿರುವುದು ಸುಸ್ಥಿರ ಪ್ರಗತಿಯನ್ನು ಸೂಚಿಸುತ್ತದೆ ಎಂದು ಕ್ರಿಸಿಲ್ ರೇಟಿಂಗ್ಸ್ ನಿರ್ದೇಶಕರಾದ ಪೂನಮ್ ಉಪಾಧ್ಯಾಯ ಹೇಳುತ್ತಾರೆ.







