́ಒಂದೊಂದು ಸೆಕೆಂಡು ಕೂಡಾ ತಾಸಿನಂತೆ ಭಾಸವಾಗುತ್ತಿತ್ತುʼ!
ನೋವು, ಯಾತನೆ ಮರೆಯಲು ‘ರಾಜಾ, ರಾಣಿ, ಕಳ್ಳ, ಸಿಪಾಯಿ ಆಟ ಆಡಿದ ಕಾರ್ಮಿಕರು
Photo: PTI
ಉತ್ತರಕಾಶಿ: ಉತ್ತರಾಖಂಡದ ಸುರಂಗಮಾರ್ಗದೊಳಗೆ 17 ದಿನಗಳ ಸುದೀರ್ಘ ಅವಧಿಯವರೆಗೆ ಸಿಕ್ಕಿಹಾಕಿಕೊಂಡ ಸಮಯದಲ್ಲಿ ನಮಗೆ ಒಂದೊಂದು ಸೆಕೆಂಡು ಕೂಡಾ ತಾಸಿನಂತೆ ಭಾಸವಾಗುತ್ತಿತ್ತು. ಈ ಸಂದರ್ಭದಲ್ಲಿ ಸಿಲುಕಿಕೊಂಡ ಕಾರ್ಮಿಕರೆಲ್ಲರೂ ತಮ್ಮ ಯಾತನೆಯನ್ನು ಮರೆಯಲು ರಾಜಾ, ಮಂತ್ರಿ, ಕಳ್ಳ, ಸಿಪಾಯಿ’ಯಂತಹ ಆಟವನ್ನು ಆಡಲು ಆರಂಭಿಸಿದರು ಎಂದು ರಕ್ಷಿಸಲ್ಪಟ್ಟ ಕಾರ್ಮಿಕ ಪುಷ್ಕರ್ ಸಿಂಗ್ ಅರಿ ತಿಳಿಸಿದ್ದಾರೆ.
ಪ್ರಸಕ್ತ ಪುಷ್ಕರ್ ಸಿಂಗ್ ಸೇರಿದಂತೆ ಎಲ್ಲಾ 41 ಕಾರ್ಮಿಕರನ್ನು ಸುರಂಗಮಾರ್ಗದಿಂದ ರಕ್ಷಿಸಿದ ಬಳಿಕ ಸುರಂಗ ಮಾರ್ಗದ ಸಮೀಪವೇ ಸ್ಥಾಪಿಸಲಾದ ತಾತ್ಕಾಲಿಕ ಆಸ್ಪತ್ರೆಯೊಂದರಲ್ಲಿ ವೈದ್ಯಕೀಯ ನಿಗಾವಣೆಯಲ್ಲಿ ಇರಿಸಲಾಗಿದೆ.
ಪುಷ್ಕರ್ಸಿಂಗ್ ಅವರನ್ನು ಪಿಟಿಐ ಸುದ್ದಿಸಂಸ್ಥೆಯು ದೂರವಾಣಿ ಮೂಲಕ ಸಂಪರ್ಕಿಸಿದ್ದು, ಅವರನ್ನು ಆಸ್ಪತ್ರೆಯಿಂದ ಯಾವಾಗ ಬಿಡುಗಡೆಗೊಳಿಸಲಾಗುವುದು ಎಂದು ಪ್ರಶ್ನಿಸಿತ್ತು. ಆದಕ್ಕೆ ಉತ್ತರಿಸಿದ ಅವರು, ‘‘ ಈ ಬಗ್ಗೆ ಇನ್ನೂ ಕೂಡಾ ಯಾವುದೇ ದೃಢವಾದ ಮಾಹಿತಿಯಿಲ್ಲ. ಸಿಟಿ ಸ್ಕ್ಯಾನ್ ಗಳಿಗಾಗಿ ತಮ್ಮೆಲ್ಲರನ್ನೂ ರಿಶಿಕೇಶದಲ್ಲಿರುವ ಏಮ್ಸ್ ಆಸ್ಪತ್ರೆಗೆ ಒಯ್ಯಲಾಗುವುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅಲ್ಲದೆ ನಮ್ಮ ದೇಹಸ್ಥಿತಿಯನ್ನು 24 ತಾಸುಗಳ ಕಾಲ ನಿಗಾವಣೆಯಲ್ಲಿರಿಸಬೇಕಾಗುತ್ತದೆ ಎಂಬುದಾಗಿಯೂ ಅವರು ಹೇಳುತ್ತಿದ್ದಾರೆಂದು ಪುಷ್ಕರ್ಸಿಂಗ್ ತಿಳಿಸಿದ್ದಾರೆ. ಸಹೋದರ ವಿಕ್ರಮ್ , ಆಸ್ಪತ್ರೆಯಲ್ಲಿ ಜೊತೆಗಿದ್ದಾನೆ “ ಅವರು ಹೇಳಿದರು.
ರಕ್ಷಣಾ ತಂಡಗಳು ತಮ್ಮೊಂದಿಗೆ ಸಂಪರ್ಕವನ್ನು ಸಾಧಿಸಲು ಸಫಲವಾಗುವವರೆಗಿನ ತಾಸುಗಳು ಅತ್ಯಂತ ಕಠಿಣವಾಗಿದ್ದವು. ನಮಗೆ ಬದುಕಿ ಬರುವ ಬಗ್ಗೆ ಯಾವುದೇ ಭರವಸೆಯಿರಲಿಲ್ಲ. ದಿಕ್ಕೇತೋಚದಂತಹ ಪರಿಸ್ಥಿತಿಯಿತ್ತು ಎಂದು ಅವರು ಹೇಳಿದರು.
‘‘ನಾವು ಸಿಲುಕಿಕೊಂಡಿದ್ದ ಸುರಂಗ ಮಾರ್ಗದ ಭಾಗದಲ್ಲಿ ವಿದ್ಯುತ್ ಪೂರೈಕೆ ಇತ್ತಾದರೂ. ಆಮ್ಲಜನಕವಿರಲಿಲ್ಲ. ಪರ್ವತಗಳಿಂದ ಸುರಂಗಮಾರ್ಗಕ್ಕೆ ಹರಿದುಬರುತ್ತಿದ್ದ ನೀರು ಮಾತ್ರವೇ ನಮಗಿದ್ದ ಏಕೈಕ ಜೀವಜಲವಾಗಿತ್ತು. ನಮ್ಮ ಬಳಿ ಕುಡಿಯುವ ನೀರು ಇರಲಿಲ್ಲ’’ ಎಂದು ಅವರು ಹೇಳಿದ್ದಾರೆ.
ನಿರ್ಮಾಣ ಹಂತದ ಸುರಂಗಮಾರ್ಗವು ನವೆಂಬರ್ 12ರಂದು ಮುಂಜಾನೆ 5:00 ಗಂಟೆಗೆ ಕುಸಿದುಬಿದ್ದಿತ್ತು ಹಾಗೂ ಕಂಪೆನಿಗೆ ತಮ್ಮನ್ನು ಅಂದು ಮಧ್ಯರಾತ್ರಿಯ ವೇಳೆಗೆ ಸಂಪರ್ಕಿಸಲು ಸಾಧ್ಯವಾಯಿತು ಎಂದರು.
‘‘ಸಿಕ್ಕಿಹಾಕಿಕೊಂಡಿದ್ದ ಕಾರ್ಮಿಕರಲ್ಲಿ ಹೆಚ್ಚಿನವರು ತರುಣರಾಗಿದ್ದರು. ಕೆಲವು ಹಿರಿಯ ವಯಸ್ಸಿನವರೂ ಇದ್ರು. ನಾವು ಒಬ್ಬರಿಗೊಬ್ಬರು ನೆರವಾದೆವು. ಏನೇ ಇದ್ದರೂ ನಾವು ಸಿಕ್ಕಿಹಾಕಿಕೊಂಡಿದ್ದೇವೆ. ಆದುದರಿಂದ ಭಯ ಹಾಗೂ ಆತಂಕದಲ್ಲೇ ಇದ್ದರೆ ಏನೂ ಪ್ರಯೋಜನವಾಗದು ಎಂದು ತೀರ್ಮಾನಿಸಿದೆವು. ಹೀಗಾಗಿ ಒಬ್ಬರಿಗೊಬ್ಬರು ನೆರವಾಗಲು ನಿರ್ಧರಿಸಿದೆವು’’ ಎಂದರು.
ಸುರಂಗಮಾರ್ಗದೊಳಗೆ ಸಿಲುಕಿದವರಲ್ಲಿ ಇಲೆಕ್ಟ್ರಿಶಿಯನ್ ಗಳು, ಪ್ಲಂಬರ್ ಗಳು, ಯಂತ್ರ ನಿರ್ವಾಹಕರು ಹಾಗೂ ಫೋರ್ ಮ್ಯಾನ್ ಕೂಡಾ ಇದ್ದು, ಏನೇ ಸಮಸ್ಯೆ ಎದುರಾದರೂ, ಅವರ ಪರಿಣತಿಯ ಪ್ರಯೋಜನವನ್ನು ಪಡೆಯಲಾಯಿತು ಎಂದು ಪುಷ್ಕರ್ ಸಿಂಗ್ ಹೇಳುತ್ತಾರೆ.
ತಮ್ಮಲ್ಲಿ ಫೋರ್ಮನ್ ಗಬ್ಬರ್ ಸಿಂಗ್ ನೇಗಿ ಹಾಗೂ ಸಭಾ ಅಹ್ಮದ್ ಅತ್ಯಂತ ಹಿರಿಯ ಸಿಬ್ಬಂದಿಯಾಗಿದ್ದು, ತಮ್ಮ ಎಲ್ಲಾ ಸಹೋದ್ಯೋಗಿಗಳು ಹೊರಗೆ ಹೋದುದನ್ನು ಖಾತರಿಪಡಿಸಿಕೊಂಡ ಬಳಿಕವೇ ಅವರಿಬ್ಬರೂ ಸುರಂಗದಿಂದ ಹೊರಬಂದರು ಎಂದು ಪುಷ್ಕರ್ ಹೇಳುತ್ತಾರೆ.
12 ದಿನಗಳ ಕಾಲ ಒಣಹಣ್ಣುಗಳನ್ನುತಿಂದು ಜೀವ ಉಳಿಸಿಕೊಂಡರು
12 ದಿನಗಳ ಕಾಲ ತಾವು ಒಣಹಣ್ಣುಗಳನ್ನೇ ತಿಂದು ದಿನಗಳೆದಿದ್ದು, ಆ ಬಳಿಕ ತಮಗೆ ಬೇಯಿಸಿದ ಊಟ ಬರಲಾರಂಭಿಸಿತು. ರಕ್ಷಣಾ ತಂಡಗಳು 4 ಇಂಚು ಪೈಪ್ ಗೆ ಹಿಡಿಯುವಂತಹ ಆಹಾರ ಸಾಮಾಗ್ರಿಗಳನ್ನು ಮಾತ್ರವೇ ಕಳುಹಿಸಬಹುದಾಗಿತ್ತು. ಆ ಒಂದು ಪೈಪ್ ನಿಂದದ ಮಾತ್ರವೇ ನಮಗೆ ಆಹಾರ, ಆಮ್ಲಜನಕ ಹಾಗೂ ಹೊರಗಿನವರ ಸಂಪರ್ಕ ಸಾಧ್ಯವಾಗುತ್ತಿತ್ತು. ಅದೇ ನಮ್ಮ ಜೀವನಾಡಿಯಾಗಿತ್ತು’’ ಎಂದು ಅವರು ಹೇಳಿದರು.
ರಕ್ಷಣಾ ಕಾರ್ಯಾಚರಣೆಯ ಕೊನೆಯಹಂತದಲ್ಲಿ ಮಾತ್ರವೇ ತಮಗೆ ಕುಟುಂಬ ಸದಸ್ಯರೊಂದಿಗೆ ಮಾತನಾಡಲು ಸಾಧ್ಯವಾದ ಬಳಿಕ ನಮಗೆ ಇಂದಲ್ಲ, ನಾಳೆ ಅಥವಾ ಮಾರನೆ ದಿನವಾದರೂ ಹೊರಬರಬಹುದೆಂಬ ಭರವಸೆ ಮೂಡಿತು ಎಂದವರು ಹೇಳಿದರು.