ನನ್ನ ವಿರುದ್ಧ ನೂರು FIR ದಾಖಲಾದರೂ ಸರಿ, ಪ್ರತಿಯೊಂದೂ ನನಗೆ ಪದಕವಿದ್ದಂತೆ: ರಾಹುಲ್ ಗಾಂಧಿ

ರಾಹುಲ್ ಗಾಂಧಿ | Photo Credit : PTI
ಹೊಸದಿಲ್ಲಿ, ಅ. 7: ತನ್ನ ವಿರುದ್ಧ 45 FIR ಗಳು ದಾಖಲಾಗಿರುವ ಕುರಿತು ಬುಧವಾರ ಸವಾಲಿನ ಧ್ವನಿಯಲ್ಲಿ ಮಾತನಾಡಿದ ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು, ಅಂತಹ ಪ್ರತಿಯೊಂದೂ FIR ತನಗೆ ಒಂದು ಪದಕವಿದ್ದಂತೆ ಮತ್ತು ತನ್ನ ಗುರಿ 100 FIR ಗಳನ್ನು ಹೊಂದುವುದಾಗಿದೆ ಎಂದು ಹೇಳಿದರು.
ತನ್ನ ಕಾರ್ಯವೈಖರಿ ಹಾಗೂ ಅಧೀನ ಅಧಿಕಾರಿಗಳೊಂದಿಗೆ ಭಿನ್ನಮತದ ಕುರಿತು ವಿರೋಧ ಪಕ್ಷಗಳ ಗುರಿಯಾಗಿರುವ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ವಿರುದ್ಧ ರಾಹುಲ್ ಇನ್ನಷ್ಟು ತೀವ್ರ ವಾಗ್ದಾಳಿ ನಡೆಸಿದರು.
ಇಲ್ಲಿಯ ಜಂತರ್ ಮಂತರ್ ನಲ್ಲಿ ದಿಢೀರ್ ಪ್ರತಿಭಟನೆಯನ್ನು ಘೋಷಿಸಿದ ರಾಹುಲ್, ಕುಮಾರ್ ರಾಜೀನಾಮೆ ನೀಡಲೇಬೇಕು ಎಂದು ಆಗ್ರಹಿಸಿದರು. ಕುಮಾರ್ ಅವರನ್ನು ಅಕ್ರಮ ಚುನಾವಣಾ ಆಯೋಗದ ಮುಖ್ಯಸ್ಥ ಎಂದು ಅವರು ಬಣ್ಣಿಸಿದರು.
‘ನಾವು ಜಂತರ್ ಮಂತರ್ಗೆ ತೆರಳಿ ಅಲ್ಲಿ ಒಟ್ಟಾಗಿ ಕುಳಿತು, ಕುಮಾರ್ ಈ ದೇಶದ ಕಾನೂನುಬದ್ಧ ಚುನಾವಣಾ ಆಯುಕ್ತರಲ್ಲ ಎಂದು ದೇಶಕ್ಕೆ ತಿಳಿಸುತ್ತೇವೆ’ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧವೂ ಕಿಡಿಕಾರಿದ ರಾಹುಲ್, ಈ ಮೂವರೂ ಕುಮಾರ್ ಜೊತೆ ಸೇರಿ ದೇಶದ ಪ್ರಜಾಪ್ರಭುತ್ವವನ್ನು ನಾಶಗೊಳಿಸಿದ್ದಾರೆ ಎಂದು ಆರೋಪಿಸಿದರು.
ತನ್ನ ವಿರುದ್ಧದ FIR ಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನನ್ನ ವಿರುದ್ಧ 45 FIR ಗಳಿವೆ. 100 FIR ಹೊಂದಿರುವುದು ನನ್ನ ಗುರಿಯಾಗಿದೆ. ಪ್ರತಿಯೊಂದೂ FIR ನನಗೆ ಪದಕವಿದ್ದಂತೆ’ ಎಂದರು.
ಈ ನಡುವೆ ಪ್ರತಿಪಕ್ಷಗಳು ಕುಮಾರ್ ವಿರುದ್ಧ ತಮ್ಮ ಹೋರಾಟವನ್ನು ತೀವ್ರಗೊಳಿಸಿವೆ. ಮಂಗಳವಾರ ಪ್ರತಿಪಕ್ಷಗಳ ನಾಯಕರು ದಿನವಿಡೀ ಪ್ರತಿಭಟನೆ ನಡೆಸಿದ್ದು, ಈ ವೇಳೆ ಪೊಲೀಸರು ರಾಹುಲ್ರನ್ನು ವಶಕ್ಕೆ ತೆಗೆದುಕೊಂಡಿದ್ದರು. ಚುನಾವಣಾ ಆಯುಕ್ತರು ರಾಜೀನಾಮೆ ನೀಡುವವರೆಗೆ ಈ ಹೋರಾಟ ಮುಂದುವರಿಯಲಿದೆ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.
ಮತ್ತೊಂದೆಡೆ, ವ್ಯಾಪಕ ‘ಮತ ಕಳವು’ ಆರೋಪಿಸಿ ದಿಲ್ಲಿಯ ಮುಖ್ಯ ಚುನಾವಣಾ ಅಧಿಕಾರಿಯ ಕಚೇರಿಗೆ ಪ್ರತಿಭಟನಾ ಜಾಥಾ ನಡೆಸುತ್ತಿದ್ದ ಆಪ್ ನಾಯಕರು ಮತ್ತು ಕಾರ್ಯಕರ್ತರನ್ನು ಪೊಲೀಸರು ಬ್ಯಾರಿಕೇಡ್ ಗಳಲ್ಲಿ ತಡೆದರು.






