ಪ್ರತಿಯೊಂದು ಮಗುವೂ ಶಾಂತಿ, ಸ್ವಾತಂತ್ರ್ಯ, ವಿಮೋಚನೆಗೆ ಅರ್ಹ; ಫೆಲಸ್ತೀನ್ ಇದಕ್ಕೆ ಹೊರತಾಗಿಲ್ಲ: ವೆನಿಸ್ ಚಲನಚಿತ್ರೋತ್ಸವ ವೇದಿಕೆಯಲ್ಲಿ ಅನುಪರ್ಣ ರಾಯ್

Anuparna Roy (Courtesy: X/ @airnewsalerts)
ಹೊಸದಿಲ್ಲಿ / ವೆನಿಸ್: “ಪ್ರತಿಯೊಂದು ಮಗುವೂ ಶಾಂತಿ, ಸ್ವಾತಂತ್ರ್ಯ ಮತ್ತು ವಿಮೋಚನೆಗೆ ಅರ್ಹವಾಗಿದೆ; ಫೆಲಸ್ತೀನ್ ಇದಕ್ಕೆ ಹೊರತಾಗಿಲ್ಲ. ಫೆಲಸ್ತೀನ್ ಜೊತೆ ನಿಲ್ಲುವುದು ನಮ್ಮ ನೈತಿಕ ಜವಾಬ್ದಾರಿ. ನನ್ನ ಮಾತುಗಳಿಂದ ನನ್ನ ದೇಶದಲ್ಲಿ ನಿರಾಸೆ ಉಂಟಾಗಬಹುದು, ಆದರೆ ನನಗೆ ಅದು ಮುಖ್ಯವಲ್ಲ”, ಎಂದು ವೆನಿಸ್ ಚಲನಚಿತ್ರೋತ್ಸವ ವೇದಿಕೆಯಲ್ಲಿ ಅನುಪರ್ಣ ರಾಯ್ ಹೇಳಿದ್ದಾರೆ.
ಗಾಝಾ ಸಂಘರ್ಷ ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ, 82ನೇ ವೆನಿಸ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ವೇದಿಕೆಯಲ್ಲಿ ಭಾರತೀಯ ನಿರ್ದೇಶಕಿ ಅನುಪರ್ಣ ರಾಯ್ ಶಾಂತಿ ಮತ್ತು ಮಾನವೀಯತೆಯ ಪರ ಧ್ವನಿಯನ್ನೆತ್ತಿದರು.
“ಸಾಂಗ್ಸ್ ಆಫ್ ಫಾರ್ಗಾಟನ್ ಟ್ರೀಸ್” ಚಿತ್ರಕ್ಕಾಗಿ ಒರಿಝೋಂಟಿ ವಿಭಾಗದ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ ಸ್ವೀಕರಿಸುವ ವೇಳೆ, ಅವರು ಭಾವುಕರಾಗಿ ಗಾಝಾದ ಮಕ್ಕಳ ನೋವು, ಹಿಂಸೆ ಮತ್ತು ಹೋರಾಟವನ್ನು ನೇರವಾಗಿ ಉಲ್ಲೇಖಿಸಿ ಪ್ರೇಕ್ಷಕರ ಮನಸ್ಸನ್ನು ಮುಟ್ಟಿದರು.
ಅವರ ಈ ಧೈರ್ಯಶಾಲಿ ನಿಲುವು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಾನವ ಹಕ್ಕು ಸಂಘಟನೆಗಳು, ಅಂತರರಾಷ್ಟ್ರೀಯ ಕಾರ್ಯಕರ್ತರು ಮತ್ತು ಚಲನಚಿತ್ರ ಕ್ಷೇತ್ರದ ಗಣ್ಯರು ರಾಯ್ ಅವರ ಮಾತುಗಳನ್ನು ಶ್ಲಾಘಿಸಿದ್ದಾರೆ.
ಅನುಪರ್ಣ ರಾಯ್ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಗೌರವ ಪಡೆದು ಇತಿಹಾಸ ನಿರ್ಮಿಸಿದರು.
“ಸಾಂಗ್ಸ್ ಆಫ್ ಫಾರ್ಗಾಟನ್ ಟ್ರೀಸ್” ಚಿತ್ರವು ಮುಂಬೈನಲ್ಲಿ ವಾಸಿಸುವ ಇಬ್ಬರು ವಲಸೆ ಮಹಿಳೆಯರ ಬದುಕಿನ ಕಥೆಯನ್ನು ಸ್ಪರ್ಶಿಸುತ್ತದೆ. ಮಹತ್ವಾಕಾಂಕ್ಷಿ ನಟಿ ಥೂಯಾ ಮತ್ತು ಕಾರ್ಪೊರೇಟ್ ವೃತ್ತಿಪರೆ ಶ್ವೇತಾ ನಡುವಿನ ಒಂಟಿತನ, ಹೋರಾಟ ಮತ್ತು ಮಾನವೀಯ ಬಾಂಧವ್ಯದ ಕಥೆಯನ್ನು ಹೃದಯಸ್ಪರ್ಶಿಯಾಗಿ ಈ ಚಿತ್ರ ತೆರೆದಿಡುತ್ತದೆ. ನಾಝ್ ಶೇಖ್ ಮತ್ತು ಸುಮಿ ಬಾಘೇಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಅನುರಾಗ್ ಕಶ್ಯಪ್ ಅವರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಭಾರತೀಯ ಮತ್ತು ಅಂತರರಾಷ್ಟ್ರೀಯ ಮಾಧ್ಯಮಗಳು ಈ ಸಾಧನೆಯನ್ನು ಭಾರತೀಯ ಸ್ವತಂತ್ರ ಚಲನಚಿತ್ರ ಕ್ಷೇತ್ರದ ಮಹತ್ವದ ಮೈಲಿಗಲ್ಲು ಎಂದು ಶ್ಲಾಘಿಸಿವೆ. ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸೇರಿದಂತೆ ಅನೇಕ ಗಣ್ಯರು ರಾಯ್ ಅವರನ್ನು ಅಭಿನಂದಿಸಿದ್ದು, ಜಾಗತಿಕ ವೇದಿಕೆಯಲ್ಲಿ ಭಾರತೀಯ ಕಥಾ ಹಂದರದವನ್ನು ತೆರೆದಿಟ್ಟಿರುವುದಕ್ಕೆ ದೊರೆತಿರುವ ಮಾನ್ಯತೆಯನ್ನು ಉಲ್ಲೇಖಿಸಿದ್ದಾರೆ.







