ಉತ್ತರ ಪ್ರದೇಶ | "ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಲಿದ್ದಾರೆಂಬುದು ಎಲ್ಲರಿಗೂ ತಿಳಿದಿದೆ": ಡಿಸಿಎಂ ಕೆ.ಪಿ.ಮೌರ್ಯ ಹೇಳಿಕೆಗೆ ಆದಿತ್ಯನಾಥ್ ತಿರುಗೇಟು

ಯೋಗಿ ಆದಿತ್ಯನಾಥ್ | Photo Credit : PTI
ಹೊಸದಿಲ್ಲಿ: ಉತ್ತರಪ್ರದೇಶದ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಮುಖ್ಯಮಂತ್ರಿ ಆದಿತ್ಯನಾಥ್ ಹಾಗೂ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ನಡುವಿನ ಶೀತಲ ಸಮರ ಮುನ್ನೆಲೆಗೆ ಬಂದಿದೆ. ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪಕ್ಷದ ಚಿಹ್ನೆಯಾದ ‘ಕಮಲ’ವೇ ಮುಖವಾಗಿದೆ ಎಂಬ ಕೇಶವ್ ಪ್ರಸಾದ್ ಮೌರ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಆದಿತ್ಯನಾಥ್ ಅವರು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಲಿದ್ದಾರೆಂಬುದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದ್ದಾರೆ. ಬಿಜೆಪಿಯ ಪ್ರತಿಯೊಬ್ಬ ಅಭ್ಯರ್ಥಿಯು ಕಮಲದ ಚಿಹ್ನೆಯಲ್ಲಿಯೇ ಸ್ಪರ್ಧಿಸಬೇಕಾಗಿದೆ. ಕಮಲವು ನಮಗೆಲ್ಲರಿಗೂ ಸರ್ವಸ್ವವಾಗಿದೆ’’ ಎಂದು ಆದಿತ್ಯನಾಥ್ ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಕೇಶವಪ್ರಸಾದ್ ಮೌರ್ಯ ಅವರನ್ನು ಬುಧವಾರ ಸುದ್ದಿಗಾರರು ಸಂದರ್ಶನವೊಂದರಲ್ಲಿ 2027ರ ಉ.ಪ್ರ. ವಿಧಾನಸಭಾ ಚುನಾವಣೆಗೆ ಬಿಜೆಪಿಯ ಮುಖ್ಯಮಂತ್ರಿ ‘ಮುಖ’ ಯಾರಾಗಲಿದ್ದಾರೆಂದು ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸಿದ ಮೌರ್ಯ, "ಚುನಾವಣೆಯ ಸಂದರ್ಭದಲ್ಲಿ ಕಮಲವೇ ಬಿಜೆಪಿಯ ಮುಖವಾಗಿರುತ್ತದೆ. ಚುನಾವಣೆ ಮುಗಿದು, ಶಾಸಕರು ಆಯ್ಕೆಯಾದ ಬಳಿಕ ಅವರು ಸಭೆ ಸೇರಲಿದ್ದಾರೆ. ಪಕ್ಷದ ಕೇಂದ್ರ ವೀಕ್ಷಕರ ಉಪಸ್ಥಿತಿಯಲ್ಲಿ, ಸಭೆಯಲ್ಲಿ ಒಮ್ಮತದ ಆಧಾರದಲ್ಲಿ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ. ಸದ್ಯಕ್ಕೆ ಆದಿತ್ಯನಾಥ್ ನಮ್ಮ ಮುಖ್ಯಮಂತ್ರಿಯಾಗಿದ್ದಾರೆ. ಅವರೇ ಮುಂದುವರಿಯುತ್ತಾರೋ ಅಥವಾ ಬೇರೆ ಯಾರಾದರೂ ಆ ಸ್ಥಾನವನ್ನು ಆಲಂಕರಿಸುತ್ತಾರೋ ಎಂಬುದನ್ನು ನಿರ್ಧರಿಸುವ ಅಧಿಕಾರ ನನಗಿಲ್ಲ. ಅದನ್ನು ಆಗ ಚುನಾಯಿತರಾದ ಶಾಸಕರೇ ತೀರ್ಮಾನಿಸಲಿದ್ದಾರೆ’’ ಎಂದು ಹೇಳಿದ್ದರು. ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂಬುದನ್ನು ಬಿಜೆಪಿಯು ಈವರೆಗೆ ಅಧಿಕೃತವಾಗಿ ಯಾರ ಹೆಸರನ್ನೂ ಕೂಡಾ ಪ್ರಕಟಿಸಿಲ್ಲ.
ಉತ್ತರಪ್ರದೇಶ ವಿಧಾನಸಭಾ ಚುನಾವಣೆಯು ಮುಂದಿನ ವರ್ಷದ ಫೆಬ್ರವರಿ-ಮಾರ್ಚ್ ನುಡವೆ ನಡೆಯುವ ನಿರೀಕ್ಷೆಯಿದೆ. 2017ರಿಂದ ಬಿಜೆಪಿಯು ಸತತ ಎರಡು ಬಾರಿ ಆ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದೆ.






