ರಾಜ್ಯಸಭಾ ಉಪನಾಯಕ ಸ್ಥಾನದಿಂದ ವಜಾ; ಎಮೋಜಿಯೊಂದಿಗೆ ವೀಡಿಯೊ ಪೋಸ್ಟ್ ಮಾಡಿದ ರಾಘವ್ ಚಡ್ಡಾ!

ರಾಘವ್ ಚಡ್ಡಾ (Photo credit: PTI)
ಹೊಸದಿಲ್ಲಿ: ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ಉಪ ನಾಯಕ ಸ್ಥಾನದಿಂದ ಸಂಸದ ರಾಘವ್ ಚಡ್ಡಾ ಅವರನ್ನು ವಜಾಗೊಳಿಸಿದ ಬಳಿಕ, ಅವರು ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಹಂಚುವ ಮೂಲಕ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಚಡ್ಡಾ ಹಂಚಿಕೊಂಡ ವೀಡಿಯೊದಲ್ಲಿ ರಾಜ್ಯಸಭೆಯಲ್ಲಿ ಅವರು ಮಾತನಾಡಿದ ವಿವಿಧ ವಿಷಯಗಳು ಕಾಣಿಸುತ್ತವೆ. ವಾಯು ಮಾಲಿನ್ಯ, ಏರಿಕೆಯಾಗುತ್ತಿರುವ ವಿಮಾನ ದರಗಳು, ಕಾರ್ಮಿಕರ ಹಕ್ಕುಗಳು ಹಾಗೂ ಮೊಬೈಲ್ ಪ್ರಿಪೇಯ್ಡ್ ಯೋಜನೆಗಳ 28 ದಿನಗಳ ಮಾನ್ಯತೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಅವರು ಉಲ್ಲೇಖಿಸಿದ್ದಾರೆ.
ವೀಡಿಯೊಗೆ ಯಾವುದೇ ಶೀರ್ಷಿಕೆ ನೀಡದೇ, ʼದುಷ್ಟ ಕಣ್ಣಿನಿಂದ ರಕ್ಷಿಸುತ್ತದೆʼ ಎಂದು ನಂಬುವ ಚಿಹ್ನೆಯಿರುವ ಎಮೋಜಿಯನ್ನು ಮಾತ್ರ ಬಳಸಿರುವುದು ಗಮನ ಸೆಳೆದಿದೆ.
ಇದಕ್ಕೂ ಮೊದಲು, AAP ಪಕ್ಷವು ರಾಜ್ಯಸಭಾ ಕಾರ್ಯದರ್ಶಿಗೆ ಪತ್ರ ಬರೆದು, ಚಡ್ಡಾ ಅವರನ್ನು ಉಪ ನಾಯಕ ಸ್ಥಾನದಿಂದ ವಜಾಗೊಳಿಸುವಂತೆ ಕೋರಿತ್ತು. ಅವರ ಬದಲಿಗೆ ಪಂಜಾಬ್ ನ ಸಂಸದ ಅಶೋಕ್ ಮಿತ್ತಲ್ ಅವರನ್ನು ನೇಮಿಸಲು ಶಿಫಾರಸು ಮಾಡಲಾಗಿತ್ತು.
ಪತ್ರದಲ್ಲಿ ಚಡ್ಡಾ ಅವರಿಗೆ ಪಕ್ಷದ ಕೋಟಾದಡಿ ಮಾತನಾಡಲು ಸಮಯ ನೀಡಬಾರದು ಎಂಬುದೂ ಉಲ್ಲೇಖವಾಗಿತ್ತು. ಈ ಕ್ರಮದಿಂದ ಪಕ್ಷದೊಳಗಿನ ಭಿನ್ನಮತಗಳ ಬಗ್ಗೆ ಊಹಾಪೋಹಗಳು ಹುಟ್ಟಿವೆ. ಆದರೆ, AAP ನಾಯಕತ್ವವು ಇದನ್ನು ಸಾಮಾನ್ಯ ಪ್ರಕ್ರಿಯೆ ಎಂದು ಹೇಳಿದೆ.
ಇತ್ತೀಚಿನ ದಿನಗಳಲ್ಲಿ ಚಡ್ಡಾ ಅವರು ಪಕ್ಷದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳದೇ ಇರುವುದೂ ಗಮನ ಸೆಳೆದಿತ್ತು. ಒಮ್ಮೆ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಎಂದು ಪರಿಗಣಿಸಲ್ಪಟ್ಟಿದ್ದ ಅವರು, ಪಂಜಾಬ್ ಮತ್ತು ದಿಲ್ಲಿಯಲ್ಲಿ ಪಕ್ಷದ ಪ್ರಮುಖ ಮುಖವಾಗಿದ್ದರು.
ಮಾರ್ಚ್ 2024ರಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ಬಂಧಿತರಾದಾಗ, ಚಡ್ಡಾ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜೈಲು ಅವಧಿಯಲ್ಲಿಯೂ ಅವರು ದೂರವಿದ್ದರು ಮತ್ತು ಬಿಡುಗಡೆ ನಂತರ ಕೆಲವೇ ದಿನಗಳ ಬಳಿಕ ಅವರನ್ನು ಭೇಟಿ ಮಾಡಿದ್ದರು.
ಇತ್ತೀಚೆಗೆ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಸೇರಿದಂತೆ ಇತರ ನಾಯಕರಿಗೆ ನ್ಯಾಯಾಲಯ ಪರಿಹಾರ ನೀಡಿದಾಗಲೂ ಚಡ್ಡಾ ಮೌನವಾಗಿದ್ದರು. ಜಂತರ್ ಮಂತರ್ನಲ್ಲಿ ನಡೆದ ಪತ್ರಿಕಾಗೋಷ್ಠಿ ಮತ್ತು ರ್ಯಾಲಿಗೂ ಅವರು ಹಾಜರಾಗಿರಲಿಲ್ಲ.
ಆದರೂ, ಚಡ್ಡಾ ಸಂಸತ್ತಿನಲ್ಲಿ ಸಕ್ರಿಯವಾಗಿದ್ದು, ವಿವಿಧ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಲೇ ಇದ್ದಾರೆ. ಯುವ ಸಮೂಹದಲ್ಲಿ ಜನಪ್ರಿಯ ಮುಖವಾಗಿರುವ ಅವರು, ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದು, ರಾಜ್ಯಸಭೆಯ ಹಣಕಾಸು ಸ್ಥಾಯಿ ಸಮಿತಿಯ ಸದಸ್ಯರಾಗಿದ್ದಾರೆ.
ಉಪ ನಾಯಕ ಸ್ಥಾನಕ್ಕೆ ನೇಮಕಗೊಂಡ ಅಶೋಕ್ ಮಿತ್ತಲ್, ಈ ಬದಲಾವಣೆಯನ್ನು ಸಾಮಾನ್ಯ ಪ್ರಕ್ರಿಯೆ ಎಂದು ಹೇಳಿದ್ದಾರೆ. “ನಮ್ಮ ಪಕ್ಷದಲ್ಲಿ ಎಲ್ಲರಿಗೂ ಮಾತನಾಡಲು ಅವಕಾಶ ಸಿಗುತ್ತದೆ,” ಎಂದಿದ್ದಾರೆ.
ಪ್ರಸ್ತುತ ಎಎಪಿಗೆ ರಾಜ್ಯಸಭೆಯಲ್ಲಿ 10 ಸದಸ್ಯರಿದ್ದು, ಪಂಜಾಬ್ ನಿಂದ 7 ಮತ್ತು ದಿಲ್ಲಿಯಿಂದ 3 ಮಂದಿ ಇದ್ದಾರೆ.







