ಒಂದು ಕೋಟಿ ರೂಪಾಯಿ ಶುಲ್ಕದ ವೈದ್ಯಕೀಯ ಪಿಜಿ ಕೋರ್ಸ್ ಸೇರಿದ 'ಆರ್ಥಿಕ ದುರ್ಬಲರು'!

ಸಾಂದರ್ಭಿಕ ಚಿತ್ರ PC: istockphoto
ಹೊಸದಿಲ್ಲಿ: ವಾರ್ಷಿಕವಾಗಿ ಎಂಟು ಲಕ್ಷ ರೂಪಾಯಿಗಿಂತ ಕಡಿಮೆ ಆದಾಯ ಹೊಂದಿದ ಆರ್ಥಿಕವಾಗಿ ದುರ್ಬಲ (ಇಡಬ್ಲ್ಯುಎಸ್) ವರ್ಗಕ್ಕೆ ಸೇರಿದ 140 ಅಭ್ಯರ್ಥಿಗಳು ವೈದ್ಯಕೀಯ ಸ್ನಾತಕೋತ್ತರ ಪದವಿ ಪಡೆಯಲು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸುಮಾರು ಒಂದು ಕೋಟಿ ರೂಪಾಯಿ ಶುಲ್ಕ ವಿಧಿಸಲಾಗುವ ಮ್ಯಾನೇಜ್ಮೆಂಟ್ ಮತ್ತು ಎನ್ಆರ್ಐ ಕೋಟಾ ಅಡಿಯಲ್ಲಿ ಪ್ರವೇಶ ಪಡೆಯಲು ಮಂದಾಗಿರುವುದು ಇಡಬ್ಲ್ಯುಎಸ್ ಮಾನದಂಡದ ವಿಶ್ವಾಸಾರ್ಹತೆಯನ್ನು ಸಂದೇಹದಿಂದ ನೋಡುವಂತೆ ಮಾಡಿದೆ.
"ಇವರು ಪಿಜಿ ನೀಟ್ ಪರೀಕ್ಷೆಯನ್ನು ಇಡಬ್ಲ್ಯುಎಸ್ ಕೋಟಾದಡಿ ಬರೆದಿದ್ದರು. ಅವರ ರ್ಯಾಂಕಿಂಗ್ ಕಡಿಮೆ ಬಂದಾಗ ಎನ್ಆರ್ಗಳಾಗಿ ಕೋಟಿ ರೂಪಾಯಿಗೂ ಅಧಿಕ ಶುಲ್ಕ ಪಾವತಿಸಿ ಮ್ಯಾನೇಜ್ಮೆಂಟ್ ಕೋಟಾ ಅಡಿಯಲ್ಲಿ ಪ್ರವೇಶ ಪಡೆದಿದ್ದಾರೆ" ಎಂದು ಸ್ನಾತಕೋತ್ತರ ತರಬೇತಿ ವೈದ್ಯರೊಬ್ಬರು ಹೇಳಿದ್ದಾರೆ. ಇದು ಕಳೆದ ವರ್ಷ ಕೂಡಾ ನಡೆದಿತ್ತು. ಆದರೆ ಸರ್ಕಾರ ಈ ಬಗ್ಗೆ ಯಾವುದೇ ತನಿಖೆ ಕೈಗೊಂಡಿಲ್ಲ. ನಕಲಿ ಇಡಬ್ಲ್ಯುಎಸ್ ಪ್ರಮಾಣಪತ್ರದ ಹಾವಳಿಯಿಂದಾಗಿ ಅರ್ಹ ಅಭ್ಯರ್ಥಿಗಳು ಅವಕಾಶ ವಂಚಿತರಾಗುತ್ತಿದ್ದಾರೆ ಎನ್ನುವುದು ಅವರ ಅಭಿಪ್ರಾಯ.
ಪಿಜಿ ನೀಟ್ ಪರೀಕ್ಷೆಯಲ್ಲಿ 1.1 ಲಕ್ಷಕ್ಕಿಂತ ಕಡಿಮೆ ರ್ಯಾಂಕ್ ಹೊಂದಿದ್ದ ಇಡಬ್ಲ್ಯುಎಸ್ ಅಭ್ಯರ್ಥಿಯೊಬ್ಬರು ಬೆಳಗಾವಿಯ ಜವಾಹರಲಾಲ್ ನೆಹರೂ ಮೆಡಿಕಲ್ ಕಾಲೇಜಿನ ಚರ್ಮರೋಗ ಶಾಸ್ತ್ರ ವಿಭಾಗದಲ್ಲಿ ಪ್ರವೇಶ ಪಡೆದಿದ್ದಾರೆ. ಇಲ್ಲಿ ಟ್ಯೂಷನ್ ಫೀಸ್ ವಾರ್ಷಿಕ ಒಂದು ಕೋಟಿ ರೂಪಾಯಿ. 84 ಸಾವಿರಕ್ಕಿಂತ ಕಡಿಮೆ ರ್ಯಾಂಕಿಂಗ್ ಹೊಂದಿದ್ದ ಮತ್ತೊಬ್ಬ ಇಡಬ್ಲ್ಯುಎಸ್ ಅಭ್ಯರ್ಥಿ ಪುದುಚೇರಿ ವಿನಾಯಕ ಮಿಷನ್ಸ್ ಮೆಡಿಕಲ್ ಕಾಲೇಜಿನ ಜನರಲ್ ಮೆಡಿಸಿನ್ ವಿಭಾಗದಲ್ಲಿ ಎನ್ಆರ್ಐ ಕೋಟಾ ಅಡಿಯಲ್ಲಿ ಪ್ರವೇಶ ಪಡೆದಿದ್ದು, ಇಲ್ಲಿ ವಾರ್ಷಿಕ ಶುಲ್ಕ 55 ಲಕ್ಷ ರೂಪಾಯಿ.
ಮುಂಬೈನ ಡಾ.ಡಿ.ವೈ.ಪಾಟೀಲ್ ವೈದ್ಯಕೀಯ ಕಾಲೇಜಿನಲ್ಲಿ ಜನರಲ್ ಮೆಡಿಸಿನ್ ವಿಭಾಗದಲ್ಲಿ ಮ್ಯಾನೇಜ್ಮೆಂಟ್ ಕೋಟಾದಡಿ ಲಭ್ಯವಿರುವ 16 ಸೀಟುಗಳ ಪೈಕಿ ನಾಲ್ಕು ಮಂದಿ ಇಡಬ್ಲ್ಯುಎಸ್ ಅಭ್ಯರ್ಥಿಗಳು ಪ್ರವೇಶ ಪಡೆದಿದ್ದಾರೆ. ಮೊದಲ ಸುತ್ತಿನ ಸೀಟು ಹಂಚಿಕೆ ಮುಗಿದಿದ್ದು, 27 ಸಾವಿರ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಎಂಡಿ, ಎಂಎಸ್ ಮತ್ತು ಪಿಜಿ ಡಿಪ್ಲೋಮಾ ಸೇರಿ 52 ಸಾವಿರ ಸ್ನಾತಕೋತ್ತರ ವೈದ್ಯಕೀಯ ಸೀಟುಗಳಿವೆ. 2.4 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು 1.3 ಲಕ್ಷ ಮಂದಿ ಅರ್ಹತೆ ಪಡೆದಿದ್ದಾರೆ.







