ಸುಪ್ರೀಂ ಕೋರ್ಟ್ ನ ಮಾಜಿ ಸಿಜೆಐ ಕೆಹರ್ ಸೇರಿದಂತೆ ಒಟ್ಟು 68 ಮಂದಿ ಸಾಧಕರಿಗೆ ಪದ್ಮ ಪ್ರಶಸ್ತಿಗಳ ಪ್ರದಾನ

PC : PTI
ಹೊಸದಿಲ್ಲಿ: ಸುಪ್ರೀಂ ಕೋರ್ಟ್ ನ ಮಾಜಿ ಮುಖ್ಯ ನ್ಯಾಯಾಧೀಶ ಜಗದೀಶ್ ಸಿಂಗ್ ಕೆಹರ್, ನೃತ್ಯಗಾರ್ತಿ ಶೋಭನಾ ಚಂದ್ರಕುಮಾರ್, ನಟ ಅನಂತ ನಾಗ್ ಹಾಗೂ ಪ್ರತಿಷ್ಠಿತ ಕಿಂಗ್ ಜಾರ್ಜ್ಸ್ ವೈದ್ಯಕೀಯ ವಿಶ್ವವಿದ್ಯಾಲಯದ ಉಪ ಕುಲಪತಿ ಸೋನಿಯಾ ನಿತ್ಯಾನಂದ್ ಸೇರಿದಂತೆ ಒಟ್ಟು 68 ಮಂದಿ ಗಣ್ಯ ಸಾಧಕರಿಗೆ ಮಂಗಳವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ದೇಶದ ನಾಗರಿಕ ಪ್ರಶಸ್ತಿಗಳಾದ ಪದ್ಮ ವಿಭೂಷಣ, ಪದ್ಮ ಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಗಳಿಗೆ ವಿವಿಧ ಕ್ಷೇತ್ರಗಳ ಒಟ್ಟು 139 ಸಾಧಕರ ಹೆಸರುಗಳನ್ನು 76ನೇ ಗಣರಾಜ್ಯೋತ್ಸವದ ಮುನ್ನಾದಿನವಾದ ಜನವರಿ 25ರಂದು ಘೋಷಿಸಲಾಗಿತ್ತು.
ಈ ಪೈಕಿ ಆಯ್ದ 68 ಮಂದಿ ಸಾಧಕರಿಗೆ ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ಆಯೋಜನೆಗೊಂಡಿದ್ದ ದ್ವಿತೀಯ ಪ್ರತಿಷ್ಠಾಪನಾ ದಿನದಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ವಿವಿಧ ಗಣ್ಯರೆದುರು ರಾಷ್ಟ್ರಪತಿ ದ್ರೌಪದಿ ಮುರ್ಮು ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಇದಕ್ಕೂ ಮುನ್ನ, ಎಪ್ರಿಲ್ 28ರಂದು ನಡೆದಿದ್ದ ಪ್ರತಿಷ್ಠಾಪನಾ ದಿನದಂದು ಆಯ್ದ 71 ಮಂದಿ ಗಣ್ಯ ಸಾಧಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದ್ದರು.







