1984ರ ಸಿಖ್ ವಿರೋಧಿ ದಂಗೆ | ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ ದೋಷಿ : ನ್ಯಾಯಾಲಯ ತೀರ್ಪು

ಸಜ್ಜನ್ ಕುಮಾರ್ (PTI)
ಹೊಸದಿಲ್ಲಿ : 1984ರ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ ದೋಷಿ ಎಂದು ದಿಲ್ಲಿಯ ರೋಸ್ ಅವೆನ್ಯೂ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.
1984ರ ನವೆಂಬರ್ 1ರಂದು ರಾಷ್ಟ್ರ ರಾಜಧಾನಿಯ ಸರಸ್ವತಿ ವಿಹಾರ್ ಪ್ರದೇಶದಲ್ಲಿ ಜಸ್ವಂತ್ ಸಿಂಗ್ ಮತ್ತು ಅವರ ಪುತ್ರ ತರುಣ್ದೀಪ್ ಸಿಂಗ್ ಅವರನ್ನು ಹತ್ಯೆಗೈಯ್ಯಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ವಾದವನ್ನು ಆಲಿಸಿದ ದಿಲ್ಲಿಯ ರೋಸ್ ಅವೆನ್ಯೂ ನ್ಯಾಯಾಲಯದ ನ್ಯಾಯಾಧೀಶರಾದ ಕಾವೇರಿ ಬವೇಜಾ, ಸಜ್ಜನ್ ಕುಮಾರ್ ದೋಷಿ ಎಂದು ತೀರ್ಪು ನೀಡಿದ್ದಾರೆ.
ಫೆಬ್ರವರಿ 18ರಂದು ಸಜ್ಜನ್ ಕುಮಾರ್ ಗೆ ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷೆ ಘೋಷಣೆಯಾಗಲಿದೆ. ಸಜ್ಜನ್ ಕುಮಾರ್ ಪ್ರಸ್ತುತ ದಿಲ್ಲಿಯಲ್ಲಿ ನಡೆದ ಮತ್ತೊಂದು ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ತಿಹಾರ್ ಜೈಲಿನಲ್ಲಿದ್ದ ಸಜ್ಜನ್ ಕುಮಾರ್ ನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಶಸ್ತ್ರಸಜ್ಜಿತ ಗುಂಪು ದೊಡ್ಡ ಪ್ರಮಾಣದ ಲೂಟಿ, ಅಗ್ನಿಸ್ಪರ್ಶ ಮತ್ತು ಸಿಖ್ಖರ ಆಸ್ತಿಗಳನ್ನು ನಾಶಪಡಿಸಿದೆ . ಉದ್ರಿಕ್ತ ಗುಂಪು ಜಸ್ವಂತ್ ಸಿಂಗ್ ಮತ್ತು ಅವರ ಪುತ್ರ ತರುಣ್ದೀಪ್ ಸಿಂಗ್ ಅವರನ್ನು ಕೊಲೆ ಮಾಡಿ ಅವರ ಮನೆಯನ್ನು ಲೂಟಿ ಮಾಡಿದೆ. ಸಜ್ಜನ್ ಕುಮಾರ್ ಕೃತ್ಯದಲ್ಲಿ ಭಾಗವಹಿಸಿದ್ದಲ್ಲದೆ ಉದ್ರಿಕ ಗುಂಪಿನ ನೇತೃತ್ವವಹಿಸಿದ್ದರು ಎಂದು ನ್ಯಾಯಾಲಯದಲ್ಲಿ ವಾದಿಸಲಾಗಿತ್ತು. ನ್ಯಾಯಾಲಯ ಈ ಕುರಿತು ಸಾಕ್ಷಿಗಳನ್ನು ಪರಿಗಣಿಸಿ ದೋಷಿ ಎಂದು ತೀರ್ಪನ್ನು ನೀಡಿದೆ.







