ಗುಜರಾತ್ನಲ್ಲಿ ಪ್ರಥಮ ಬಾರಿ ಪಾನ ನಿಷೇಧ ನಿಯಮದಿಂದ ವಿನಾಯಿತಿ
ಅಹ್ಮದಾಬಾದ್ನಲ್ಲಿ ತಲೆಯೆತ್ತುತ್ತಿರುವ ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್ ಸಿಟಿಯಲ್ಲಿ ಮದ್ಯ ಸೇವನೆಗೆ ದೊರೆತ ಅನುಮತಿ
ಸಾಂದರ್ಭಿಕ ಚಿತ್ರ | Photo: PTI
ಹೊಸದಿಲ್ಲಿ: ಗುಜರಾತ್ ರಾಜ್ಯ 1960ರಲ್ಲಿ ರಚನೆಯಾದ ಬಳಿಕ ಪಾನನಿಷೇಧ ಜಾರಿಯಲ್ಲಿದ್ದರೂ ಮಹತ್ವದ ಬೆಳವಣಿಗೆಯೊಂದರಲ್ಲಿ ಗುಜರಾತ್ ಸರ್ಕಾರ ಗಾಂಧಿನಗರದಲ್ಲಿ ತಲೆಯೆತ್ತುತ್ತಿರುವ ದೇಶದ ಮೊದಲ ವಿತ್ತೀಯ ಸೇವೆಗಳ ಕೇಂದ್ರ -ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿಯಲ್ಲಿ ಮದ್ಯಪಾನಕ್ಕೆ ಅನುಮತಿ ನೀಡಿದೆ. ಈ ವಿನಾಯಿತಿಯನ್ನು ರಾಜ್ಯದಲ್ಲಿ ಮೊದಲ ಬಾರಿಗೆ ನೀಡಲಾಗಿದೆ.
ಈ ಫೈನಾನ್ಸ್ ಟೆಕ್-ಸಿಟಿಯನ್ನು ಸಿಂಗಾಪುರದಲ್ಲಿರುವಂತಹ ಅಂತರರಾಷ್ಟ್ರೀಯ ಕೇಂದ್ರಗಳಿಗೆ ಸರಿಗಟ್ಟಲು ಹಾಗೂ ಅದನ್ನು ಆಧುನಿಕ ಯುಗದ ವಿತ್ತೀಯ ಸೇವೆಗಳ ಮತ್ತು ತಂತ್ರಜ್ಞಾನಗಳ ಕೇಂದ್ರವನ್ನಾಗಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.
ಈ ಕೇಂದ್ರದ ಕುರಿತು ಸರ್ಕಾರ ಹೊಂದಿರುವ ದೂರದೃಷ್ಟಿಯನ್ನು ಗಮನದಲ್ಲಿರಿಸಿ ಇಲ್ಲಿ ವೈನ್ ಎಂಡ್ ಡೈನ್ಗೆ ಅನುಮತಿಯಿದೆ ಎಂದು ರಾಜ್ಯದ ನಾರ್ಕಾಟಿಕ್ಸ್ ಮತ್ತು ಅಬಕಾರಿ ಇಲಾಖೆ ತಿಳಿಸಿದೆ. ಈ ಮೂಲಕ ಇಲ್ಲೊಂದು ಜಾಗತಿಕ ವ್ಯವಹಾರ ಪರಿಸರ ವ್ಯವಸ್ಥೆಯನ್ನು ಜಾಗತಿಕ ಹೂಡಿಕೆದಾರರಿಗೆ, ತಾಂತ್ರಿಕ ತಜ್ಞರಿಗೆ ಮತ್ತು ಅಂತರರಾಷ್ಟ್ರೀಯ ಮತ್ತು ದೇಶೀಯ ಕಂಫೆನಿಗಳಿಗೆ ಒದಗಿಸಲಾಗುವುದು.
ಇಲ್ಲಿ ಕಾರ್ಯನಿರ್ವಹಿಸುವ ಎಲ್ಲರಿಗೂ ಲಿಕ್ಕರ್ ಆಕ್ಸೆಸ್ ಪರ್ಮಿಟ್ ಒದಗಿಸಲಾಗುವುದು. ಇಲ್ಲಿನ ಪ್ರತಿ ಕಂಪೆನಿಗೆ ಭೇಟಿ ನೀಡುವ ಅಧಿಕೃತ ಮಂದಿಗೂ ಅಲ್ಲಿನ ಹೋಟೆಲ್ಗಳು, ರೆಸ್ಟೋರೆಂಟ್ಗಳು ಮತ್ತು ಕ್ಲಬ್ಗಳನ್ನು ಮದ್ಯ ಸೇವನೆಗೆ ಅನುಮತಿ ನೀಡಲಾಗುವುದು.