ಬ್ರಿಟನ್ ನಲ್ಲಿ ʼಎಮರ್ಜೆನ್ಸಿ' ಚಿತ್ರಪ್ರದರ್ಶನಕ್ಕೆ ಅಡ್ಡಿ : ಸೂಕ್ತ ಕ್ರಮಕ್ಕೆ ಆಗ್ರಹಿಸಿದ ಭಾರತ

Photo credit: X
ಹೊಸದಿಲ್ಲಿ: ಬ್ರಿಟನ್ ನಾದ್ಯಂತ ಚಿತ್ರ ಮಂದಿರಗಳಿಗೆ ನುಗ್ಗಿ 'ಎಮರ್ಜೆನ್ಸಿ' ಚಿತ್ರ ಪ್ರದರ್ಶನಕ್ಕೆ ಅಡ್ಡಿಪಡಿಸಿದ ಖಾಲಿಸ್ತಾನಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಭಾರತ ಆಗ್ರಹಿಸಿದೆ.
'ಎಮರ್ಜೆನ್ಸಿ' ಚಿತ್ರದಲ್ಲಿ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಲನಚಿತ್ರವು 1975 ರಿಂದ 1977ರವರೆಗಿನ 21 ತಿಂಗಳ ತುರ್ತು ಪರಿಸ್ಥಿತಿಯನ್ನು ಕೇಂದ್ರೀಕರಿಸಿದೆ. ಈ ಚಲನಚಿತ್ರದಲ್ಲಿ ಸಿಖ್ ಸಮುದಾಯವನ್ನು ತಪ್ಪಾಗಿ ಪ್ರತಿನಿಧಿಸಲಾಗಿದೆ ಎಂಬ ಆರೋಪ ಕೇಳಿ ಬಂದ ಬಳಿಕ ವಿವಾದ ಭುಗಿಲೆದ್ದಿತ್ತು.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಈ ಕುರಿತು ಮಾತನಾಡಿ, ಬ್ರಿಟನ್ ನಾದ್ಯಂತ ಚಿತ್ರ ಮಂದಿರಗಳಿಗೆ ನುಗ್ಗಿ ʼಎಮರ್ಜೆನ್ಸಿ' ಚಿತ್ರ ಪ್ರದರ್ಶನಕ್ಕೆ ಹೇಗೆ ಅಡ್ಡಿಪಡಿಸಲಾಗಿದೆ ಎಂಬ ಬಗ್ಗೆ ನಾವು ವರದಿಗಳನ್ನು ಓದಿದ್ದೇವೆ. ಈ ಹಿಂಸಾತ್ಮಕ ಪ್ರತಿಭಟನೆಗಳು ಮತ್ತು ಭಾರತ-ವಿರೋಧಿ ದೋರಣೆ ಬಗ್ಗೆ ನಾವು ಬ್ರಿಟನ್ ಸರಕಾರದೊಂದಿಗೆ ಕಳವಳ ವ್ಯಕ್ತಪಡಿಸುತ್ತೇವೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅಡ್ಡಿಪಡಿಸುವವರನ್ನು ಹೊಣೆಗಾರರನ್ನಾಗಿ ಮಾಡಬೇಕು. ಇದಕ್ಕೆ ಕಾರಣರಾದವರ ವಿರುದ್ಧ ಬ್ರಿಟನ್ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದ್ದಾರೆ.
ಖಾಲಿಸ್ತಾನಿ ಪರ ಪ್ರತಿಭಟನಾಕಾರರು 'ಎಮರ್ಜೆನ್ಸಿ' ಚಿತ್ರ ಪ್ರದರ್ಶನದ ವಿರುದ್ಧ ಪ್ರತಿಭಟನೆ ನಡೆಸಿದ್ದರು. UKಯ ಕೆಲವು ಚಿತ್ರಮಂದಿರಗಳಲ್ಲಿ ಚಿತ್ರದ ಪ್ರದರ್ಶನಕ್ಕೆ ಕೂಡ ಅಡ್ಡಿಪಡಿಸಿದ್ದರು.







