ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆಯು ಹಿಂದು ಕಾನೂನನ್ನೇ ಆಧರಿಸಿದೆ, ಇತರರನ್ನು ಪ್ರತಿನಿಧಿಸುತ್ತಿಲ್ಲ ಎಂದ ತಜ್ಞರು

Photo: scroll.in
ಹೊಸದಿಲ್ಲಿ : ಉತ್ತರಾಖಂಡ ವಿಧಾನಸಭೆಯು ಬುಧವಾರ ಏಕರೂಪ ನಾಗರಿಕ ಸಂಹಿತೆ, ಉತ್ತರಾಖಂಡ 2024 ಮಸೂದೆಯನ್ನು ಅಂಗೀಕರಿಸಿದ್ದು, ಈ ಶಾಸನವು ರಾಜ್ಯದ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ನೀಡಲಿದೆ ಎಂದು ಮುಖ್ಯಮಂತ್ರಿ ಪುಷ್ಕರಸಿಂಗ್ ಧಾಮಿ ಹೇಳಿಕೊಂಡಿದ್ದಾರೆ. ಆದರೂ ಮಸೂದೆಯು ಮುಖ್ಯವಾಗಿ ಹಿಂದು ವೈಯಕ್ತಿಕ ಕಾನೂನಿನಲ್ಲಿಯ ಅಂಶಗಳನ್ನು ಒಳಗೊಂಡಿದೆ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ವೈಯಕ್ತಿಕ ಕಾನೂನು ಆಚರಣೆಗಳ ಅಳಿಸುವಿಕೆಗೆ ಕಾರಣವಾಗಬಹುದು ಎಂದು ಕಾನೂನು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು scroll.in ವರದಿ ಮಾಡಿದೆ.
ಹಿಂದು ಆಚರಣೆಗಳನ್ನು ಹಿಂದುಯೇತರರ ಮೇಲೆ ಹೇರುವ ಪ್ರಯತ್ನ ಸ್ವಷ್ಟವಾಗಿ ಗೋಚರಿಸುತ್ತಿದೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ದಿಲ್ಲಿಯ ಹಿರಿಯ ವಕೀಲ ಮೋಹನ ಕಾತರಕಿ ಹೇಳಿದರು.
ಇದು ಸ್ವತಂತ್ರ ಭಾರತದಲ್ಲಿ ಅಂಗೀಕಾರಗೊಂಡಿರುವ ಮೊದಲ ಏಕರೂಪ ನಾಗರಿಕ ಸಂಹಿತೆ ಮಸೂದೆಯಾಗಿದೆ. ಇದು ರಾಜ್ಯದಲ್ಲಿ ಮದುವೆ,ವಿಚ್ಛೇದನ ಮತ್ತು ಉತ್ತರಾಧಿಕಾರಗಳನ್ನು ನಿಯಂತ್ರಿಸುವ ಧರ್ಮಾಧಾರಿತ ವೈಯಕ್ತಿಕ ಕಾನೂನುಗಳ ಬದಲಿಗೆ ಸಮಾನ ಕಾನೂನುಗಳನ್ನು ಅಸ್ತಿತ್ವದಲ್ಲಿ ತರಲು ಉದ್ದೇಶಿಸಿದೆ. ಇದು ರಾಜ್ಯವು ಏಕರೂಪ ನಾಗರಿಕ ಸಂಹಿತೆಯನ್ನು ಹೊಂದಲು ಪ್ರಯತ್ನಿಸಬೇಕು ಎಂದು ಹೇಳಲಾಗಿರುವ ಸಂವಿಧಾನದ 44ನೇ ವಿಧಿಗೆ ಅನುಗುಣವಾಗಿದೆ.
ಅಸ್ತಿತ್ವದಲ್ಲಿರುವ ಕಾನೂನುಗಳೊಂದಿಗೆ ಮಸೂದೆಯ ನಿಬಂಧನೆಗಳ ಹೋಲಿಕೆಯು ಮದುವೆ ಮತ್ತು ವಿಚ್ಛೇದನಕ್ಕೆ ಸಂಬಂಧಿಸಿದ ಉತ್ತರಾಖಂಡ ಸಂಹಿತೆಯಲ್ಲಿನ ಹೆಚ್ಚಿನ ನಿಬಂಧನೆಗಳನ್ನು ಹಿಂದು ವಿವಾಹ ಕಾಯ್ದೆ 1955 ಮತ್ತು ಜಾತ್ಯತೀತ ವಿಶೇಷ ವಿವಾಹ ಕಾಯ್ದೆ 1954ರಿಂದ ಎರವಲು ಪಡೆದುಕೊಳ್ಳಲಾಗಿದೆ. ವಿಶೇಷ ವಿವಾಹ ಕಾಯ್ದೆಯು ಹಿಂದು ವಿವಾಹ ಕಾಯ್ದೆಯನ್ನೇ ಹೋಲುತ್ತದೆ ಎಂದು ದಿಲ್ಲಿಯ ಇನ್ನೋರ್ವ ಹಿರಿಯ ವಕೀಲ ಸಂಜಯ ಘೋಷ್ ತಿಳಿಸಿದರು.
ಇದೇ ರೀತಿ ಉತ್ತರಾಧಿಕಾರ ಕುರಿತು ಮಸೂದೆಯಲ್ಲಿನ ಹೆಚ್ಚಿನ ನಿಬಂಧನೆಗಳನ್ನು ಜಾತ್ಯತೀತ ಭಾರತೀಯ ಉತ್ತರಾಧಿಕಾರ ಕಾಯ್ದೆ 1925 ಮತ್ತು ಹಿಂದು ಉತ್ತರಾಧಿಕಾರ ಕಾಯ್ದೆ 1956ರಿಂದ ಪಡೆದುಕೊಳ್ಳಲಾಗಿದೆ. ಈ ವಿಷಯಗಳನ್ನು ನಿರ್ವಹಿಸುವ ಮಸೂದೆಯ 375 ಕಲಂ ಗಳ ಪೈಕಿ ಕೇವಲ 14 ಕಲಂ ಗಳು ಸಂಪೂರ್ಣವಾಗಿ ಹೊಸದಾಗಿವೆ. ಉಳಿದವುಗಳನ್ನು ಅಸ್ತಿತ್ವದಲ್ಲಿರುವ ಕಾನೂನುಗಳಿಂದ ಯಥಾವತ್ತಾಗಿ ಅಥವಾ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಎತ್ತಿಕೊಳ್ಳಲಾಗಿದೆ.
ಮಹಿಳಾ ಗುಂಪುಗಳ ಒಕ್ಕೂಟವಾಗಿರುವ ಉತ್ತರಾಖಂಡ ಮಹಿಳಾ ಮೋರ್ಚಾ, ಹಿಂದು ಕಾನೂನಿನ ಮಾದರಿಯನ್ನು ಅನುಸರಿಸಿದ್ದಕ್ಕಾಗಿ ಮಸೂದೆಯನ್ನು ಟೀಕಿಸಿದೆ. ಮಸೂದೆಯು ಕ್ರಿಶ್ಚಿಯನ್ ಕೌಟುಂಬಿಕ ಕಾನೂನು ಮತ್ತು ಪಾರ್ಸಿ ಕೌಟುಂಬಿಕ ಕಾನೂನಿನ ಅನ್ವಯದ ಬಗ್ಗೆ ಸಂಪೂರ್ಣವಾಗಿ ಮೌನವಾಗಿದೆ ಎಂದು ಸಾರ್ವಜನಿಕ ಹೇಳಿಕೆಯಲ್ಲಿ ಬೆಟ್ಟು ಮಾಡಿರುವ ಮೋರ್ಚಾ, ಇದು ಕಾನೂನಾತ್ಮಕವಾಗಿ ಅಸಮರ್ಥನೀಯವಾಗಿದೆ ಎಂದು ಹೇಳಿದೆ.
ಮಸೂದೆಯು ಮುಸ್ಲಿಮ್ ವೈಯಕ್ತಿಕ ಕಾನೂನಿನಲ್ಲಿಯ ಮೆಹರ್ ಮತ್ತು ಡೋವರ್ (ಮದುವೆಯ ಪರಿಗಣನೆಯಲ್ಲಿ ಪತ್ನಿಯು ಪತಿಯಿಂದ ಸ್ವೀಕರಿಸುವ ಹಣ) ಪದ್ಧತಿಗಳನ್ನು ಅಂಗೀಕರಿಸಿದೆ. ಇದನ್ನು ಹೊರತುಪಡಿಸಿ ಇತರ ಯಾವುದೇ ಅಲ್ಪಸಂಖ್ಯಾತ ಸಮುದಾಯದ ವೈಯಕ್ತಿಕ ಕಾನೂನುಗಳಿಂದ ಬೇರೆ ಏನನ್ನೂ ಎತ್ತಿಕೊಳ್ಳಲಾಗಿಲ್ಲ ಎಂದು ಕಾನೂನು ನೀತಿ ಚಿಂತನ ಚಾವಡಿ ‘ವಿಧಿ’ ಯಲ್ಲಿ ಕ್ರಿಮಿನಲ್ ಜಸ್ಟೀಸ್ ರಿಫಾರ್ಮ್ಸ್ ತಂಡದಲ್ಲಿ ರೀಸರ್ಚ್ ಫೆಲೋ ಆಗಿರುವ ಆಯುಷಿ ಶರ್ಮಾ ಅವರು ಹೇಳಿದರು.
ಮಸೂದೆಯು ಇಸ್ಲಾಮಿಕ್ ವೈಯಕ್ತಿಕ ಕಾನೂನು ಆಚರಣೆಗಳಿಗೆ ತೀವ್ರ ಹೊಡೆತ ನೀಡುತ್ತದೆ ಎಂದು ಅಭಿಪ್ರಾಯಿಸಿರುವ ತಜ್ಞರು, ಆದಾಗ್ಯೂ ಮಹಿಳೆಯರ ಹಿತಾಸಕ್ತಿಯ ದೃಷ್ಟಿಯಿಂದ ನೋಡಿದಾಗ ಮುಸ್ಲಿಮ್ ಕೌಟುಂಬಿಕ ಕಾನೂನಿನಲ್ಲಿಯ ಕೆಲವು ಆಚರಣೆಗಳ ಮೇಲಿನ ನಿಷೇಧವನ್ನು ಅಪೇಕ್ಷಣೀಯ ಎಂದು ಪರಿಗಣಿಸಬಹುದು. ಉದಾಹರಣೆಗೆ ಮಸೂದೆಯು ಬಹುಪತ್ನಿತ್ವ, ಕುಟುಂಬದ ಪುರುಷ ಮತ್ತು ಮಹಿಳಾ ಸದಸ್ಯರ ನಡುವೆ ಅಸಮಾನ ಉತ್ತರಾಧಿಕಾರ ಹಾಗೂ ಹಲಾಲಾ ವಿಚ್ಛೇದನಗಳನ್ನು ಕೈಬಿಟ್ಟಿದೆ. ಮುಸ್ಲಿಮ್ ಕೌಟುಂಬಿಕ ಕಾನೂನಿನಲ್ಲಿಯ ಈ ಅಂಶಗಳನ್ನು ಸ್ತ್ರೀದ್ವೇಷಿ ಎಂದು ಪರಿಗಣಿಸಲಾಗಿದೆ ಎಂದು ಹೇಳಿದ್ದಾರೆ.
ಆದಾಗ್ಯೂ ಮಸೂದೆಯು ಮುಸ್ಲಿಮ್ ಕಾನೂನಿನ ಸಕಾರಾತ್ಮಕ ಮತ್ತು ಪ್ರಗತಿಪರ ಅಂಶಗಳನ್ನು ಒಳಗೊಂಡಿಲ್ಲ ಎಂದು ಉತ್ತರಾಖಂಡ ಮಹಿಳಾ ಮೋರ್ಚಾ ಹೇಳಿಕೆಯಲ್ಲಿ ತಿಳಿಸಿದೆ
ಈ ಮಸೂದೆಯು ಮುಸ್ಲಿಮ್ ಸಮುದಾಯದ ಮೇಲೆ ಹೆಚ್ಚು ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಇದು ಅವರ ವೈಯಕ್ತಿಕ ಕಾನೂನಿನ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಘೋಷ್ ಹೇಳಿದರು.
ಹಿಂದು ಅವಿಭಜಿತ ಕುಟುಂಬದ ಅಸ್ತಿತ್ವದ ಬಗ್ಗೆ ಮಸೂದೆಯ ಮೌನವು ಅದರ ಗಮನಾರ್ಹ ಅಂಶವಾಗಿದೆ.
ಹಿಂದು ಅವಿಭಜಿತ ಕುಟುಂಬದಲ್ಲಿ ಮಹಿಳೆಯರ ವಿರುದ್ಧ ತಾರತಮ್ಯದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮಸೂದೆಯು ಸಂಪೂರ್ಣ ಮೌನವಾಗಿದೆ ಎಂದು ಉತ್ತರಾಖಂಡ ಮಹಿಳಾ ಮೋರ್ಚಾ ಹೇಳಿದ್ದರೆ, ಹಿಂದು ಅವಿಭಜಿತ ಕುಟುಂಬದ ಸ್ಥಿತಿಗತಿಯ ಬಗ್ಗೆ ಮಸೂದೆಯು ಅಸ್ಪಷ್ಟವಾಗಿರುವುದು ಉಪಯುಕ್ತವಲ್ಲ. ಅವಿಭಜಿತ ಕುಟುಂಬದಲ್ಲಿಯ ಜಂಟಿ ಪೂರ್ವಜರ ಆಸ್ತಿಗೆ ಏನಾಗುತ್ತದೆ ಎನ್ನುವುದನ್ನು ಮಸೂದೆಯು ಸ್ಪಷ್ಟವಾಗಿ ಹೇಳಬೇಕು ಎಂದು ಘೋಷ್ ತಿಳಿಸಿದರು.
ರಾಜ್ಯದ ಜನಸಂಖ್ಯೆಯ ಶೇ.3ರಷ್ಟಿರುವ ಪರಿಶಿಷ್ಟ ಪಂಗಡಗಳನ್ನು ಮಸೂದೆಯ ವ್ಯಾಪ್ತಿಯಿಂದ ಹೊರಗಿರಿಸಲಾಗಿರುವುದು ಇನ್ನೊಂದು ಗಮನಾರ್ಹ ಅಂಶವಾಗಿದೆ.







