ಓಎನ್ಜಿಸಿ ರಿಗ್ ನಲ್ಲಿ ಸ್ಫೋಟ, ಅನಿಲ ಸೋರಿಕೆ; 70 ಕುಟುಂಬಗಳ ಸ್ಥಳಾಂತರ

PC: x.com/KrcTimes
ದಿಬ್ರೂಗಢ: ಅಸ್ಸಾಂನ ಶಿವಸಾಗರ ಪ್ರದೇಶದಲ್ಲಿರುವ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಓಎನ್ಜಿಸಿ)ದ ಅಧೀನದ ರಿಗ್ ನಲ್ಲಿ ಭಾರಿ ಸ್ಫೋಟ ಮತು ಅನಿಯಂತ್ರಿತ ಅನಿಲ ಸೋರಿಕೆ ಪತ್ತೆಯಾದ ಬೆನ್ನಲ್ಲೇ ಸ್ಥಳೀಯ 70 ಕುಟುಂಬಗಳನ್ನು ಬೋನ್ಗಾಂವ್ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಘಟನೆ ನಡೆದ 24 ಗಂಟೆಗಳ ಬಳಿಕವೂ ಪರಿಸ್ಥಿತಿಯನ್ನು ನಿಭಾಯಸಲು ಅಧಿಕಾರಿಗಳು ಹರಸಾಹಸ ಮುಂದುವರಿಸಿದ್ದಾರೆ.
ಶಿವಸಾಗರದ ಭಟಿಯಾಪಾರ್ ನಲ್ಲಿಓಎನ್ಜಿಸಿಯಡಿಯಲ್ಲಿ ಎಸ್ ಕೆ ಪೆಟ್ರೋಕೆಮಿಕಲ್ ನಿರ್ವಹಿಸುತ್ತಿದ್ದ ರಿಗ್ ನಲ್ಲಿ ಗುರುವಾರ ಬೆಳಿಗ್ಗೆ 11.45ರ ವೇಳೆಗೆ ಸ್ಫೋಟಿಸಿ ಅನಿಯಂತ್ರಿತ ಅನಿಲ ಸೋರಿಕೆ ಸಂಭವಿಸಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಭಯಾನಕ ಸದ್ದು ಸುಮಾರು 3-4 ಕಿಲೋಮೀಟರ್ ದೂರದವರೆಗೂ ಕೇಳಿಸಿದ್ದು, ಭಾರಿಚುಕ್ ಮತ್ತು ಸುತ್ತಮುತ್ತಲಿನ ನಿವಾಸಿಗಳು ರಕ್ಷಣೆಗಾಗಿ ದಿಕ್ಕಾಪಾಲಾಗಿ ಓಡಿದರು.
ತುರ್ತು ಶಿಷ್ಟಾಚಾರಗಳನ್ನು ತಕ್ಷಣ ಸಕ್ರಿಯಗೊಳಿಸಲಾಗಿದ್ದರೂ, ಅತ್ಯಧಿಕ ಒತ್ತಡದ ಕಾರಣದಿಂದಾಗಿ ಅದನ್ನು ನಿಯಂತ್ರಿಸುವುದು ಸಾಧ್ಯವಾಗಿಲ್ಲ ಎಂದು ಓಎನ್ಜಿಸಿ ಅಧಿಕಾರಿಗಳು ಹೇಳಿದ್ದಾರೆ. ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ತಂಡಗಳನ್ನು ನಿಯೋಜಿಸಲಾಗಿದ್ದು, ಓಎನ್ಜಿಸಿ ತಾಂತ್ರಿಕ ತಂಡ ಸೋರಿಕೆ ತಡೆಗೆ ಪ್ರಯತ್ನ ಮುಂದುವರಿಸಿದೆ.
"ಇದುವರೆಗೆ 70 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ನೀರು, ಆಹಾರ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಪರಿಹಾರ ಕೇಂದ್ರದಲ್ಲಿ ಒದಗಿಸಲಾಗುತ್ತಿದೆ. ಅವರ ಸುರಕ್ಷತೆಗೆ ಪೊಲೀಸ್ ಪಡೆ ನಿಯೋಜಿಸಲಾಗಿದ್ದು, ವೈದ್ಯಕೀಯ ಸಿಬ್ಬಂದಿಯಿಂದ ಸಜ್ಜಿತವಾದ ಒಂದು ಆ್ಯಂಬುಲೆನ್ಸ್ ಘಟನಾ ಸ್ಥಳದಲ್ಲಿದೆ ಎಂದು ಶಿವಸಾಗರ ಜಿಲ್ಲಾಧಿಕಾರಿ ಆಯುಷ್ ಗರ್ಗ್ ಹೇಳಿದ್ದಾರೆ.







