Chandigarh | BJP ಕಚೇರಿ ಬಳಿ ಸ್ಫೋಟ; ಕಚ್ಚಾ ಬಾಂಬ್ ಎಸೆದು ಪರಾರಿ

Photo: indiatoday
ಚಂಡೀಗಢ: ಇಲ್ಲಿನ ಸೆಕ್ಟರ್ 37ರಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಬಳಿ ಬುಧವಾರ ಸಂಜೆ ಸ್ಫೋಟ ಸಂಭವಿಸಿದ್ದು, ಯಾವುದೇ ಗಾಯಗಳ ವರದಿಯಾಗಿಲ್ಲ ಎಂದು India Today ವರದಿ ಮಾಡಿದೆ.
ಸಂಜೆ ಸುಮಾರು 5 ಗಂಟೆ ವೇಳೆಗೆ ಸ್ಫೋಟದ ಶಬ್ದ ಕೇಳಿಬಂದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಇಬ್ಬರು ಅಪರಿಚಿತರು ದ್ವಿಚಕ್ರ ವಾಹನದಲ್ಲಿ ಬಂದು ಕಚೇರಿ ಸಮೀಪ ಕಚ್ಚಾ ಬಾಂಬ್ ಎಸೆದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಸ್ಫೋಟದಿಂದ ಒಂದು ಕಾರಿನ ಗಾಜುಗಳು ಪುಡಿಯಾಗಿ, ಎರಡು ಸ್ಕೂಟರ್ ಗಳಿಗೆ ಹಾನಿಗೊಳಗಾಗಿವೆ. ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪ್ರದೇಶವನ್ನು ಸುತ್ತುವರಿದು ಪರಿಶೀಲನೆ ನಡೆಸಿದರು. ಶಂಕಿತರ ಪತ್ತೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಸ್ಥಳದಿಂದ ಸ್ಫೋಟಕದ ಅವಶೇಷಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಇದು ಗ್ರೆನೇಡ್ ದಾಳಿ ಅಲ್ಲ, ಕಚ್ಚಾ ಬಾಂಬ್ ಸ್ಫೋಟವಾಗಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಕೇಂದ್ರ ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ (CFSL) ತಂಡವು ಸಾಕ್ಷ್ಯ ಸಂಗ್ರಹಣೆ ನಡೆಸುತ್ತಿದೆ. ಭದ್ರತೆಯನ್ನು ಹೆಚ್ಚಿಸಲು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.




