ಹೆಚ್ಚಾಗುತ್ತಿರುವ ಫೋಭಿಯ ಪ್ರಕರಣಗಳು; ಆರಂಭಿಕ ಘಟ್ಟದಲ್ಲಿ ಚಿಕಿತ್ಸೆ ಏಕೆ ಅಗತ್ಯ?

ಸಾಂದರ್ಭಿಕ ಚಿತ್ರ | Photo Credit : freepik.com
ಇತ್ತೀಚೆಗೆ ತೆಲಂಗಾಣದಲ್ಲಿ ಇರುವೆಯ ಭಯದಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಅತಿ ಭಯವನ್ನು ದೀರ್ಘಕಾಲದವರೆಗೆ ಚಿಕಿತ್ಸೆ ನೀಡದೆ ಮುಂದುವರಿದರೆ ಹೀಗೆ ಅಪಾಯಕಾರಿಯಾಗಿ ಪರಿಣಮಿಸಬಹುದು.
ಖಿನ್ನತೆಯ ರೋಗವಾಗಿರುವ ಅತಿಯಾದ ಭಯ ಮಾನಸಿಕ ವೈಕಲ್ಯಕ್ಕೆ ಕಾರಣವಾಗಬಹುದು. ವ್ಯಕ್ತಿಯ ಸಾಮಾಜಿಕ, ಔದ್ಯೋಗಿಕ ಮತ್ತು ಇತರ ಪ್ರಮುಖ ವೃತ್ತಿಪರ ಕ್ಷೇತ್ರಗಳಲ್ಲಿ ಮಧ್ಯಪ್ರವೇಶಿಸಬಹುದು. ಅದಕ್ಕೆ ಮುಖ್ಯ ಉದಾಹರಣೆ ಇತ್ತೀಚೆಗೆ ತೆಲಂಗಾಣದಲ್ಲಿ ಇರುವೆಯ ಭಯದಿಂದ ಮೃತಪಟ್ಟ ಮಹಿಳೆ. ಅತಿ ಭಯವನ್ನು ದೀರ್ಘಕಾಲದವರೆಗೆ ಚಿಕಿತ್ಸೆ ನೀಡದೆ ಮುಂದುವರಿದರೆ ಅಪಾಯಕಾರಿಯಾಗಿ ಪರಿಣಮಿಸಬಹುದು.
ಒಂದು ಅಂದಾಜಿನ ಪ್ರಕಾರ ಅತಿ ಭಯದ ಕುರಿತಂತೆ ಈಗಿನ ದತ್ತಾಂಶ ಬಹಳ ಸೀಮಿತವಾಗಿದೆ. 2010ರಲ್ಲಿ 13 ಭಾರತೀಯ ನಗರದಲ್ಲಿ ನಡೆಸಿದ ವಿಶ್ಲೇಷಣೆಯ ಪ್ರಕಾರ ರೋಗಪರಿಶೀಲನೆಯಲ್ಲಿ ಕಂಡುಬಂದಿರುವ ಫೋಬಿಯಾಗಳು ಶೇ 4.2ರಷ್ಟಿದ್ದವು. ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆಯಲ್ಲಿ (2015-16) ವರದಿಯಾಗಿರುವ ಪ್ರಕಾರ ಶೇ 2.57ರಷ್ಟು ಭಾರತೀಯರು ಖಿನ್ನತೆಯ ರೋಗದಿಂದ ಬಳಲುತ್ತಿದ್ದರು.
ಜಾಗತಿಕವಾಗಿ ನಿರ್ದಿಷ್ಟ ಫೋಬಿಯಗಳನ್ನು ಅತಿ ಸಾಮಾನ್ಯ ಖಿನ್ನತೆ ರೋಗ ಎಂದು ಪರಿಗಣಿಸಲಾಗಿದೆ.
ʼಅತಿಭಯ ಸ್ಪಷ್ಟವಾಗಿ ಕಂಡುಬಂದಾಗʼ
ಚಿಕಿತ್ಸಕರು ಹೇಳುವ ಪ್ರಕಾರ ನಿತ್ಯದ ಜೀವನಕ್ಕೆ ತೊಂದರೆಯಾಗುವವರೆಗೂ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಚೆನ್ನೈನ ರಿಲಾ ಆಸ್ಪತ್ರೆಯಲ್ಲಿ ಮನಶ್ಶಾಸ್ತ್ರಜ್ಞ ಸಲಹಾತಜ್ಞರು ಮತ್ತು ಸೈಕೊಥೆರಪಿಸ್ಟ್ ಆಗಿರುವ ಯಯತೀ ಎಸ್ ಹೇಳುವ ಪ್ರಕಾರ, ಉದಾಹರಣೆಗೆ ಕಾರಿನಲ್ಲಿ ಕೂರುವುದು ಅಥವಾ ವಿಮಾನದಲ್ಲಿ ಕೂರಲು ಭಯಪಡುವಂತಹ ರೋಗಚಿಹ್ನೆಗಳು ಕೊನೆಯ ಕ್ಷಣದವರೆಗೂ ತಿಳಿದುಬರುವುದಿಲ್ಲ. ಅತಿಭಯ ಬಹಿರಂಗವಾದಾಗ ಕಂಪನವಾಗುವುದು, ಉಸಿರಾಡಲು ಕಷ್ಟಪಡುವುದು, ಬೆವರುವುದು ಮೊದಲಾದ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಚಿಕಿತ್ಸೆಯಾಗಿ ಅರಿವಿನ ವರ್ತನೆಯ ಚಿಕಿತ್ಸೆ (ಸಿಬಿಟಿ) ಬಳಸಲಾಗುತ್ತದೆ. ಕಾಲ್ಪನಿಕವಾಗಿ ಕಾರಿನೊಳಗೆ ಪ್ರವೇಶಿಸುವುದು, ಎಂಜಿನ್ ಸ್ಟಾರ್ಟ್ ಮಾಡುವುದು ಅಥವಾ ವಿಮಾನದೊಳಗೆ ಪ್ರವೇಶಿಸುವುದು ಮೊದಲಾಗಿ ಅಭ್ಯಾಸ ಮಾಡಿದ ನಂತರ ನಿಧಾನವಾಗಿ ಭಯ ನಿವಾರಣೆಯಾಗುತ್ತದೆ.
ಸಾಮಾನ್ಯ ವೈದ್ಯಕೀಯ ವರದಿಗಳ ಹೊರತಾಗಿಯೂ ಒಬ್ಬ ಮಹಿಳೆ ತನಗೆ ಅನಾರೋಗ್ಯವಿದೆ ಎಂದೇ ಭಯಪಡುತ್ತಾರೆ. ಸಾಯುವ ಭಯ ಸದಾ ಕಾಡುತ್ತಿರುತ್ತದೆ. ಚಿಕಿತ್ಸಕರು ಅಂತಹ ಚಿಹ್ನೆಗಳನ್ನು ಸಾಕಷ್ಟು ಆತ್ಮವಿಶ್ವಾಸದ ಮೊರತೆ ಮತ್ತು ಭಾವನಾತ್ಮಕ ಹತಾಶೆ ಎಂದು ಹೇಳುತ್ತಾರೆ.
ಭಯ vs ಫೋಬಿಯ
ಎಲ್ಲರಿಗೂ ಸ್ವಲ್ಪ ಮಟ್ಟಿಗೆ ಭಯ ಇರುವುದು ನಿಜವಾದರೂ, ಫೋಬಿಯದಲ್ಲಿ ವ್ಯತ್ಯಾಸವಿದೆ. ಸಾಮಾನ್ಯ ಭಯ ಹೆಚ್ಚು ದಿನ ಇರುವುದಿಲ್ಲ. ಆದರೆ ಫೋಬಿಯ ತೀವ್ರವಾಗಿರುತ್ತದೆ. ತರ್ಕಬಾಹಿರ ಮತ್ತು ನಿರಂತರವಾಗಿರುತ್ತದೆ. ಫೋಬಿಯ ನಿಧಾನವಾಗಿ ನಿತ್ಯ ಜೀವನದ ಭಾಗವಾಗಿಬಿಡುತ್ತದೆ. ಲಿಫ್ಟ್ನಲ್ಲಿ ಹೋಗಲು ಭಯ, ಸಾಮಾಜಿಕ ಪರಿಸ್ಥಿತಿಗಳು ಅಥವಾ ವೈದ್ಯಕೀಯ ಭೇಟಿಗಳನ್ನು ತಪ್ಪಿಸುವುದು ಇತ್ಯಾದಿ ಕಂಡುಬಂದಾಗ ಚಿಕಿತ್ಸೆಪಡೆಯುವುದು ಅಗತ್ಯವಾಗುತ್ತದೆ ಎನ್ನುತ್ತಾರೆ ತಜ್ಞರು.
ಫೋಬಿಯಗಳನ್ನು ಅತಿಯಾದ ಪ್ರತಿಕ್ರಿಯೆ ಎಂದು ಅಲಕ್ಷಿಸುವವರೇ ಹೆಚ್ಚು. ಆದರೆ ಚಿಕಿತ್ಸೆಗಾಗಿ ಹೋಗುವ ಸಂದರ್ಭದಲ್ಲಿ ತೀವ್ರ ಸಮಸ್ಯೆಯಾಗಿರುತ್ತದೆ. ಬಹಳಷ್ಟು ಬಾರಿ ಸಾಮಾಜಿಕವಾಗಿ ತೊಡಗಿಸಿಕೊಳ್ಳುವ ಭಯ, ಬಯಲು ಪ್ರದೇಶದ ಭಯ ಮತ್ತು ಎತ್ತರದ ಭಯದಂತಹ ಸನ್ನಿವೇಶಗಳು ಇರಬಹುದು. ಇವು ನಿತ್ಯದ ಜೀವನಕ್ಕೆ ಸಮಸ್ಯೆ ತರಬಹುದು.
ಅತಿಕಡಿಮೆ ಕಂಡುಬರುವ ಭಯ
ಪ್ರಯಾಣದ ಭಯ, ಆರೋಗ್ಯದ ಭಯ, ಏಕಾಂಗಿಯಾಗಿರಲು ಭಯ ಅಥವಾ ಸಭೆಗಳಲ್ಲಿ ಭಾಗವಹಿಸಲು ಭಯ ಮೊದಲಾಗಿ ಫೋಬಿಯಗಳು ವಿವಿಧ ರೂಪದಲ್ಲಿರುತ್ತವೆ. ಹೆಚ್ಚು ಪರಿಚಿತವಲ್ಲದ ಭಯದಲ್ಲಿ ರಂಧ್ರಗಳ ಸಮೂಹದ ಭಯ, ಜನರ ಭಯ, ಕ್ಲೋನ್ಗಳ ಭಯ, ಬಲೂನ್ಗಳ ಭಯ, ವಾಹನ ಚಲಾಯಿಸಲು ಭಯ, ಮಾಲಿನ್ಯದ ಭಯ ಇತ್ಯಾದಿ ಸೇರಿವೆ. ಕೋವಿಡ್ ಸಾಂಕ್ರಾಮಿಕ ರೋಗದ ನಂತರ ಮಾಲಿನ್ಯದ ಭಯ ಜನರಲ್ಲಿ ಹೆಚ್ಚಾಗಿದೆ.
ಅಂತಹ ಭಯವಿಲ್ಲದವರಿಗೆ ಇದು ವಿಚಿತ್ರ ಎನಿಸಬಹುದು. ಆದರೆ ಅದನ್ನು ಅನುಭವಿಸುವವರಿಗೆ ಅದು ನಿಜವಾಗಿರುತ್ತದೆ ಎನ್ನುತ್ತಾರೆ ವೈದ್ಯರು.
ಮಕ್ಕಳಲ್ಲಿ ಫೋಬಿಯ ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಾಗುತ್ತಿದೆ ಎನ್ನುತ್ತಾರೆ ತಜ್ಞರು. ಇಂಜೆಕ್ಷನ್ಗಳ ಭಯ, ಸಾಮಾಜಿಕವಾಗಿ ತೊಡಗಿಸಿಕೊಳ್ಳಲು ಭಯಪಡುವುದು ಅಥವಾ ಎತ್ತರದ ಸ್ಥಳಗಳಿಗೆ ಹೋಗಲು ಭಯ ಇತ್ಯಾದಿ ಮಕ್ಕಳಲ್ಲಿ ಕಂಡುಬರಬಹುದು.
ಫೋಬಿಯ ಏಕೆ ಬರುತ್ತದೆ?
ಅನುವಂಶಿಕವಾಗಿಯೂ ಫೋಬಿಯ ಬರಬಹುದು. ಪೋಷಕರಿಂದ ಕಲಿತ ವರ್ತನೆಯಾಗಿ ಬರಬಹುದು. ಭಯಾನಕ ಸನ್ನಿವೇಶಗಳ ಅನುಭವದಿಂದ ಬರಬಹುದು ಅಥವಾ ವರ್ಷಾನುಗಟ್ಟಲೆ ಭಯದ ಸ್ಥಿತಿಯನ್ನು ತಪ್ಪಿಸಿಕೊಳ್ಳುತ್ತಾ ಹೋದರೆ ಫೋಬಿಯವಾಗಿ ಬದಲಾಗಬಹುದು. ಫೋಬಿಯಾ ಪ್ರತ್ಯೇಕವಾಗಿ ಬರುವುದಿಲ್ಲ. ಬಹಳಷ್ಟು ಸಂದರ್ಭದಲ್ಲಿ ಖಿನ್ನತೆ, ಆತಂಕದ ಚಿಹ್ನೆಗಳು, ಹತಾಶೆಯ ಮನೋಸ್ಥಿತಿ ಅಥವಾ ಗೀಳಿನ ಪ್ರವೃತ್ತಿ ಕಂಡುಬರಬಹುದು.
ಫೋಬಿಯಗೆ ಚಿಕಿತ್ಸೆ ಏನು?
ತಜ್ಞರು ಹೇಳುವ ಪ್ರಕಾರ, ಎಷ್ಟೇ ಭಯವಾದರೂ ಫೋಬಿಯ ಒಂದು ಮಾನಸಿಕ ಅನಾರೋಗ್ಯವಾಗಿರುವ ಕಾರಣ ಚಿಕಿತ್ಸೆ ನೀಡಬಹುದು. ಕಾಲ್ಪನಿಕವಾಗಿ ಭಯದ ಸನ್ನಿವೇಶದ ಅನುಭವಪಡೆಯುವ ಚಿಕಿತ್ಸೆ ಪರಿಣಾಮಕಾರಿಯಾಗಿರುತ್ತದೆ. ಬಹಳಷ್ಟು ರೋಗಿಗಳು ಔಷಧಿಯ ಅಗತ್ಯವಿಲ್ಲದೆ ಗುಣಮುಖರಾಗುತ್ತಾರೆ. ಚಿಕಿತ್ಸೆಯು ನಿಧಾನವಾಗಿ ಭಯದ ಸನ್ನಿವೇಶದಿಂದ ಹೊರಬರಲು ನೆರವಾಗಲಿದೆ.
ಕೃಪೆ: thehindu.com







