FACT CHECK - ಸೂರತ್ ನ ಹಳೆಯ ವೀಡಿಯೊ ಹಂಚಿಕೊಂಡು ಮುಂಬೈನಲ್ಲಿ ಬಸ್ ಗೆ ಹಾನಿ ಎಂದು ಪ್ರತಿಪಾದನೆ; ವಾಸ್ತವವೇನು?
ಹೊಸದಿಲ್ಲಿ: ಗುಂಪೊಂದು ಕಲ್ಲು ತೂರಾಟ ನಡೆಸಿ ಬಸ್ ಒಂದಕ್ಕೆ ಹಾನಿ ಮಾಡಿರುವ ವಿಡಿಯೊವನ್ನು ಕೆಲವು ಜನರು ಹಂಚಿಕೊಂಡು, ಮುಂಬೈನ ಬಾಂದ್ರಾದಲ್ಲಿ ಬಸ್ ಒಂದರ ಮೇಲೆ ಮುಸ್ಲಿಂ ಆಟೋರಿಕ್ಷಾ ಚಾಲಕರ ಗುಂಪೊಂದು ದಾಳಿ ನಡೆಸಿದ್ದಾರೆ ಎಂಬ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಂಡಿದ್ದಾರೆ. ಈ ವಿಡಿಯೊವನ್ನು, “ಬಾಂದ್ರಾದಿಂದ ಬಿಕೆಸಿ ಮಾರ್ಗವಾಗಿ ಬಸ್ ಮಾರ್ಗವನ್ನು ಕಾರ್ಯಾಚರಿಸುವುದನ್ನು ಆ ಮಾರ್ಗದಲ್ಲಿ ಪ್ರಯಾಣಿಕರ ಆಸನಗಳನ್ನು ಹಂಚಿಕೊಂಡು ಕಾರ್ಯಾಚರಿಸುತ್ತಿರುವ ಮುಸ್ಲಿಂ ಆಟೋರಿಕ್ಷಾ ಚಾಲಕರು ವಿರೋಧಿಸಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಆದರೆ ಈ ಪ್ರತಿಪಾದನೆಯು ಸುಳ್ಳು ಎಂದು boomlive.in ವರದಿ ಮಾಡಿದೆ.
ಇದೇ ವಿಡಿಯೊದ ತುಣುಕನ್ನು ಹಲವಾರು ಮಂದಿ ʼxʼ ಸಾಮಾಜಿಕ ಮಾಧ್ಯಮದಲ್ಲಿ ಮೇಲಿನ ಶೀರ್ಷಿಕೆಯೊಂದಿಗೇ ಹಂಚಿಕೊಂಡಿದ್ದು, ಆ ಪೋಸ್ಟ್ ಗೆ ಪ್ರತಿಕ್ರಿಯಿಸಿರುವವರು ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಮುಂಬೈ ಪೊಲೀಸರನ್ನು ಆಗ್ರಹಿಸಿದ್ದಾರೆ.
ಆ ವಿಡಿಯೊವನ್ನು ಮುಖ್ಯ ಚೌಕಟ್ಟುಗಳನ್ನಾಗಿ ಬೇರ್ಪಡಿಸಿರುವ boomlive.in ಸತ್ಯಶೋಧನಾ ವೇದಿಕೆಯು, ರಿವರ್ಸ್ ಇಮೇಜ್ ಸರ್ಚ್ ಮೂಲಕ ಆ ವಿಡಿಯೊ ಗುಜರಾತ್ ರಾಜ್ಯದ ಸೂರತ್ ನ ವಿಡಿಯೊ ಎಂಬುದನ್ನು ಪತ್ತೆ ಹಚ್ಚಿದೆ.
ಮಾಧ್ಯಮ ವರದಿಗಳ ಪ್ರಕಾರ, ಈ ಘಟನೆಯು ಜುಲೈ 5, 2019ರಂದು ಗುಂಪು ಹಲ್ಲೆಯ ವಿರುದ್ಧ ವಿರುದ್ಧ ನಡೆದಿದ್ದ ರ್ಯಾಲಿಯ ಸಂದರ್ಭದಲ್ಲಿ ಗುಜರಾತ್ ನ ಸೂರತ್ ಪ್ರದೇಶದಲ್ಲಿ ನಡೆದಿತ್ತು ಎನ್ನಲಾಗಿದೆ. ಅನುಮತಿ ಇಲ್ಲದೆ ರ್ಯಾಲಿ ನಡೆಸುತ್ತಿರುವುದರಿಂದ ರ್ಯಾಲಿಯನ್ನು ನಿಲ್ಲಿಸಬೇಕು ಎಂದು ಪೊಲೀಸರು ಪ್ರತಿಭಟನಾಕಾರರಿಗೆ ಸೂಚಿಸಿದಾಗ, ಆ ರ್ಯಾಲಿಯು ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿತ್ತು ಎಂದು ಹೇಳಲಾಗಿದೆ.
ಈ ಘಟನೆಯ ಕುರಿತು ವರದಿ ಮಾಡಿರುವ Ahmedabad Mirror ಪತ್ರಿಕೆಯು, “ಆ ಸಂದರ್ಭದಲ್ಲಿ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸತೊಡಗಿದರು ಹಾಗೂ ಪೊಲೀಸರು ಗುಂಡಿನ ದಾಳಿ ಮತ್ತು ಅಶ‍್ರುವಾಯು ಶೆಲ್ ದಾಳಿಯ ಮೊರೆ ಹೋಗಬೇಕಾಯಿತು” ಎಂದು ಹೇಳಿದೆ.
ಹೀಗಾಗಿ, ವೈರಲ್ ಆಗಿರುವ ವಿಡಿಯೊವು ಗುಜರಾತ್ ನ ಸೂರತ್ ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದ್ದೇ ಹೊರತು, ಮುಂಬೈನಲ್ಲಿ ನಡೆದಿರುವುದಲ್ಲ ಎಂಬ ಸಂಗತಿಯನ್ನು boomlive.in ಸತ್ಯಶೋಧನಾ ವೇದಿಕೆ ಬಯಲು ಮಾಡಿದೆ.