Fact Check | CJP ಪ್ರತಿಭಟನೆಯಲ್ಲಿ ಕಾರಿಗೆ ಬೆಂಕಿ ಹಚ್ಚಲು ಯತ್ನ ಎಂಬುದು ಸುಳ್ಳು: ಬಿಹಾರದ ಹಳೆಯ ಘಟನೆಯ ವೀಡಿಯೊ ವೈರಲ್

ಹೊಸದಿಲ್ಲಿ: ಜುಲೈ 20ರಂದು ನಡೆದ ಸಂಸತ್ ಮೆರವಣಿಗೆಯ ವೇಳೆ ಜಿರಳೆ ಜನತಾ ಪಕ್ಷದ (CJP) ಪ್ರತಿಭಟನಾಕಾರರು ಕಾರಿಗೆ ಬೆಂಕಿ ಹಚ್ಚಲು ಯತ್ನಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ವೀಡಿಯೊ ಸುಳ್ಳು ಎಂಬುದು India Today ಫ್ಯಾಕ್ಟ್ ಚೆಕ್ ಪರಿಶೀಲನೆಯಲ್ಲಿ ಬಹಿರಂಗವಾಗಿದೆ. ವೈರಲ್ ವೀಡಿಯೊ ದಿಲ್ಲಿಯ CJP ಪ್ರತಿಭಟನೆಗೆ ಸಂಬಂಧಿಸಿದ್ದಲ್ಲ; ಬದಲಿಗೆ ಅದು ಬಿಹಾರದ ಗಯಾದಲ್ಲಿ ರಸ್ತೆ ಅಪಘಾತದ ಬಳಿಕ ನಡೆದ ಜನಸಮೂಹದ ಆಕ್ರೋಶದ ಘಟನೆಯಾಗಿದೆ ಎಂದು ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದೆ.
ಜುಲೈ 20ರಂದು ಸಂಸತ್ ಮೆರವಣಿಗೆಯಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದ ಬಳಿಕ, ಟೋಪಿ ಧರಿಸಿರುವ ಗಡ್ಡದಾರಿ ವ್ಯಕ್ತಿಯೊಬ್ಬರು ಹಾನಿಗೊಳಗಾದ ಕಪ್ಪು ಬಣ್ಣದ ಮಹೀಂದ್ರಾ ಥಾರ್ ವಾಹನದ ಪೆಟ್ರೋಲ್ ಟ್ಯಾಂಕ್‌ಗೆ ಬೆಂಕಿಕಡ್ಡಿಯನ್ನು ಎಸೆಯಲು ಯತ್ನಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಈ ದೃಶ್ಯಗಳು CJP ಬೆಂಬಲಿಗನ ಕೃತ್ಯವೆಂದು ಹಲವರು ಹಂಚಿಕೊಂಡಿದ್ದರು.
ವೀಡಿಯೊದಲ್ಲಿ ಕೋಪಗೊಂಡ ಜನರು ಹಾನಿಗೊಳಗಾದ ಮಹೀಂದ್ರಾ ಥಾರ್ ವಾಹನವನ್ನು ಸುತ್ತುವರಿದಿರುವುದು ಕಾಣುತ್ತದೆ. NEET ವಿದ್ಯಾರ್ಥಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಲಾದ ವ್ಯಕ್ತಿಯೊಬ್ಬರು ವಾಹನದ ಇಂಧನ ಟ್ಯಾಂಕ್ ಗೆ ಉರಿಯುತ್ತಿರುವ ಬೆಂಕಿಕಡ್ಡಿಯನ್ನು ಎಸೆಯಲು ಮುಂದಾಗುತ್ತಾರೆ. ಇದೇ ವೇಳೆ ಪೊಲೀಸ್ ಸಿಬ್ಬಂದಿಯೊಬ್ಬರು ಅವರನ್ನು ತಡೆಯಲು ಯತ್ನಿಸುತ್ತಿರುವ ದೃಶ್ಯವೂ ವೀಡಿಯೊದಲ್ಲಿದೆ.
►ಗಯಾ ಘಟನೆಯ ವೀಡಿಯೊ
Google Lens ಮೂಲಕ ನಡೆಸಿದ ಪರಿಶೀಲನೆಯಲ್ಲಿ ಇದೇ ವೀಡಿಯೊ ಜುಲೈ 18ರಂದು CNN News18 ಹಾಗೂ Moneycontrol ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ಪ್ರಕಟವಾಗಿರುವುದು ಪತ್ತೆಯಾಗಿದೆ. ಆ ಪೋಸ್ಟ್‌ಗಳ ಶೀರ್ಷಿಕೆಯಲ್ಲಿ ಇದು ಬಿಹಾರದಲ್ಲಿ ರಸ್ತೆ ಅಪಘಾತದ ಬಳಿಕ ನಡೆದ ಘಟನೆ ಎಂದು ಉಲ್ಲೇಖಿಸಲಾಗಿತ್ತು.
ನಂತರ ನಡೆಸಿದ ಕೀವರ್ಡ್ ಹುಡುಕಾಟದಲ್ಲಿ ದೈನಿಕ್ ಭಾಸ್ಕರ್ ವರದಿ ಲಭ್ಯವಾಗಿದೆ. ಅದರ ಪ್ರಕಾರ, ಗಯಾದಲ್ಲಿ ಮಹೀಂದ್ರಾ ಥಾರ್ ವಾಹನವು ಮೋಟಾರ್ ಸೈಕಲ್ ಮತ್ತು ಆಟೋರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದರು.
ಪ್ರತ್ಯಕ್ಷದರ್ಶಿಗಳ ಪ್ರಕಾರ, ವಾಹನದ ಮುಂಭಾಗದಲ್ಲಿ ಬಿಜೆಪಿ ಸ್ಟಿಕ್ಕರ್ ಇತ್ತು. ಕಾರನ್ನು ಮಹಿಳೆಯೊಬ್ಬರು ಚಾಲನೆ ಮಾಡುತ್ತಿದ್ದರು ಹಾಗೂ ಪೊಲೀಸರ ಸಮ್ಮುಖದಲ್ಲೇ ಅವರನ್ನು ಸ್ಥಳದಿಂದ ತೆರಳಲು ಅವಕಾಶ ನೀಡಲಾಯಿತು ಎಂದು ಆರೋಪಿಸಲಾಗಿದೆ. ಆದರೆ, ವಾಹನದ ರಾಜಕೀಯ ಸಂಬಂಧ ಅಥವಾ ಡ್ರೈವರ್ ಕುರಿತು ಈ ಆರೋಪಗಳನ್ನು ಪೊಲೀಸರು ಅಧಿಕೃತವಾಗಿ ದೃಢಪಡಿಸಿಲ್ಲ.
ನಗರ ಎಸ್‌ಡಿಪಿಒ ಸರೋಜ್ ಕುಮಾರ್ ಅವರು ರಸ್ತೆ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾತ್ರ ದೃಢಪಡಿಸಿದ್ದಾರೆ.
► ಕಾರಿಗೆ ಬೆಂಕಿ ಹಚ್ಚಲು ಯತ್ನ
India Today ಯ ಗಯಾ ಜಿಲ್ಲಾ ಸ್ಟ್ರಿಂಗರ್ ಬಿಮ್ಲೆಂಡು ಅವರ ಮಾಹಿತಿ ಪ್ರಕಾರ, ಈ ಘಟನೆ ಜುಲೈ 16ರಂದು ಗಯಾ ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಪಘಾತದ ಬಳಿಕ ಸ್ಥಳದಲ್ಲಿ ಜನಸಮೂಹ ಜಮಾಯಿಸಿತ್ತು. ಕೆಲವರು ಕಲ್ಲು ತೂರಾಟ ಆರಂಭಿಸಿದ್ದು, ನಂತರ ಕೋಪಗೊಂಡ ಗುಂಪಿನ ಕೆಲವರು ಕಾರಿಗೆ ಬೆಂಕಿ ಹಚ್ಚಲು ಯತ್ನಿಸಿದ್ದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದರು.
ವಾಹನದ ಮಾಲೀಕರು ಮತ್ತು ಚಾಲಕರ ವಿರುದ್ಧವೂ, ವಾಹನಕ್ಕೆ ಬೆಂಕಿ ಹಚ್ಚಲು ಯತ್ನಿಸಿದವರ ವಿರುದ್ಧವೂ ಪೊಲೀಸರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ.
► ಬಿಹಾರ ವೀಡಿಯೋ ತೋರಿಸಿದ ಬಿಜೆಪಿ ನಾಯಕ ಸಿ.ಟಿ. ರವಿ
ಬಿಜೆಪಿ MLC ಸಿ.ಟಿ. ರವಿ ಅವರ ಹೇಳಿಕೆಯ ಬಳಿಕ ಅವರು ತೋರಿಸಿದ ಬಿಹಾರದ ವೈರಲ್ ವೀಡಿಯೊ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ಚಿಕ್ಕಮಗಳೂರಿನಲ್ಲಿ NEET ವಿವಾದಕ್ಕೆ ಸಂಬಂಧಿಸಿದ ಬಿಜೆಪಿ ಪ್ರತಿಭಟನೆಯ ವೇಳೆ ಸಿ.ಟಿ. ರವಿ ಅವರು "ಮುಲ್ಲಾಗಳ" ಕುರಿತು ನೀಡಿದ ಹೇಳಿಕೆಗೆ ಟೀಕೆ ವ್ಯಕ್ತವಾಗಿತ್ತು. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರವಿ, ಮುಸ್ಲಿಂ ವ್ಯಕ್ತಿಯೊಬ್ಬರು ವಾಹನಕ್ಕೆ ಬೆಂಕಿ ಹಚ್ಚಲು ಯತ್ನಿಸುತ್ತಿರುವ ವೈರಲ್ ವೀಡಿಯೊವನ್ನೇ ಉಲ್ಲೇಖಿಸಿ, ಅಂತಹ ವ್ಯಕ್ತಿ NEET ಪ್ರತಿಭಟನೆಯೊಂದಿಗೆ ಯಾವ ಸಂಬಂಧ ಹೊಂದಿದ್ದಾರೆ ಎಂದು ಪ್ರಶ್ನಿಸಿದ್ದರು. ಹಾಗಾಗಿ ನಾನು ʼಮುಲ್ಲಾʼ ಹೇಳಿಕೆ ನೀಡಿದ್ದೆ ಎಂದು ಸಮರ್ಥಿಸಿಕೊಂಡಿದ್ದರು.
ಇದಕ್ಕೂ ಮೊದಲು ಸಿ ಟಿ ರವಿ, "ಮುಲ್ಲಾಗೂ NEET ಪರೀಕ್ಷೆಗೂ ಏನು ಸಂಬಂಧ? ನೀವು ಅವನ ಎದೆಯನ್ನು ಸೀಳಿದರೂ, ಅಲ್ಲಿ ಮೂರು ಅಕ್ಷರ ಇಲ್ಲ" ಎಂದು ಹೇಳಿಕೆ ನೀಡಿದ್ದರು.
ಈ ಹೇಳಿಕೆ ಕೋಮು ದ್ವೇಷವನ್ನು ಪ್ರಚೋದಿಸುತ್ತದೆ ಎಂದು ಆರೋಪಿಸಿ ಚಿಕ್ಕಮಗಳೂರು ನಗರ ಪೊಲೀಸರು ಅವರ ವಿರುದ್ಧ ದ್ವೇಷ ಭಾಷಣ ಸೇರಿದಂತೆ ಸಂಬಂಧಿತ ಕಾನೂನುಗಳಡಿ ಎಫ್‌ಐಆರ್ ದಾಖಲಿಸಿದ್ದಾರೆ.
► ʼಇಷ್ಟರ ಮೇಲು ನಿಮ್ಮ ಇಷ್ಟ..?ʼ ಎಂದು ಪೋಸ್ಟ್ ಮಾಡಿದ ರಿಪಬ್ಲಿಕ್ ಟಿವಿ ಆ್ಯಂಕರ್ ರಂಜಿತ್ ಶಿರಿಯಾರ!
ರಿಪಬ್ಲಿಕ್ ಕನ್ನಡದ ಆಂಕರ್ ರಂಜಿತ್ ಶಿರಿಯಾರ ಅವರು ಕೂಡ ಬಿಹಾರದ ಘಟನೆಯ ವೀಡಿಯೊವನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಲವು ಬಾರಿ ಹಂಚಿಕೊಂಡಿದ್ದರು. ಆ ಪೋಸ್ಟ್ ಗಳಲ್ಲಿ ಬಿಹಾರದ ಘಟನೆಯನ್ನು CJP ನೇತೃತ್ವದ NEET ಪ್ರತಿಭಟನೆಗೆ ಸಂಬಂಧಿಸಿದಂತೆ ಬಿಂಬಿಸಲಾಗಿತ್ತು.
ʼಇಷ್ಟರ ಮೇಲು ನಿಮ್ಮ ಇಷ್ಟ..?ʼ ಎಂಬ ಶೀರ್ಷಿಕೆಯಲ್ಲಿ ಅವರ ಖಾತೆಯಲ್ಲಿನ ಫೇಸ್ ಬುಕ್ ಪೋಸ್ಟ್ ನಲ್ಲಿ ʼವಿದ್ಯಾರ್ಥಿಗಳ ಸೋಗಿನ ಭಯೋತ್ಪಾಕರುʼ ಎಂದು ವೀಡಿಯೋ ಗೆ ಉಪಶೀರ್ಷಿಕೆ ನೀಡಿದ್ದರು. ಜು.21 ರಂದು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದರು.
ಆದರೆ, India Today ಜು.22 ರಂದು ನಡೆಸಿದ ಫ್ಯಾಕ್ಟ್ ಚೆಕ್ ಪರಿಶೀಲನೆಯಲ್ಲಿ ಈ ವೀಡಿಯೊ ದಿಲ್ಲಿಯ ಪ್ರತಿಭಟನೆಗೆ ಸಂಬಂಧಪಟ್ಟದ್ದಲ್ಲ ಎಂಬುದು ದೃಢಪಟ್ಟಿದೆ. ಬದಲಿಗೆ, ಇದು ಬಿಹಾರದ ಗಯಾದಲ್ಲಿ ರಸ್ತೆ ಅಪಘಾತದ ಬಳಿಕ ನಡೆದ ಜನಸಮೂಹದ ಹಿಂಸಾಚಾರದ ದೃಶ್ಯವಾಗಿದೆ ಎಂದು ಬಹಿರಂಗವಾಗಿದೆ.
ಹೀಗಾಗಿ, CJP ಪ್ರತಿಭಟನಾಕಾರರು ಕಾರಿಗೆ ಬೆಂಕಿ ಹಚ್ಚಲು ಯತ್ನಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವೀಡಿಯೊ ಸುಳ್ಳು ಎಂದು ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದೆ.
ಆದರೂ, ಈ ಮುಂಚೆ ಜು.21ರಂದು ಈ ವೀಡಿಯೋವನ್ನು ಹಂಚಿಕೊಂಡ ಆಂಕರ್ ರಂಜಿತ್ ಶಿರಿಯಾರ ತಮ್ಮ ಖಾತೆಯಿಂದ ವೀಡಿಯೋವನ್ನು ತೆಗೆದು ಹಾಕಿಲ್ಲ. ಜು.26 ರಂದು ರವಿವಾರ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ನಾಯಕ ಸಿ.ಟಿ. ರವಿ ಅವರು ಅದೇ ವೀಡಿಯೋವನ್ನು ತಮ್ಮ ಹಿಂದಿನ ʼಮುಲ್ಲಾʼ ಕುರಿತು ಆಕ್ಷೇಪಾರ್ಹ ಹೇಳಿಕೆಗೆ ಅದೇ ವೀಡಿಯೋ ತೋರಿಸಿ ಸಮರ್ಥಿಸಿಕೊಂಡಿದ್ದಾರೆ.






