'ಡಿಜಿಟಲ್ ಅರೆಸ್ಟ್' ಮಾಡಿ ಮಹಿಳೆಗೆ 11 ಲಕ್ಷ ವಂಚಿಸಿದ ನಕಲಿ ಪೊಲೀಸರು!
ಸೈಬರ್ ವಂಚನೆಯ ಹೊಸ ವಿಧಾನದ ಬಗ್ಗೆ ಎಚ್ಚರ !

ನೊಯ್ಡಾ: ನೊಯ್ಡಾ ನಿವಾಸಿಯೊಬ್ಬರು ಹೊಸ ಬಗೆಯ ಸೈಬರ್ ವಂಚನೆ ಪ್ರವೃತ್ತಿಯ ಬಲಿಪಶುವಾಗಿದ್ದು, ಅದರಿಂದ ರೂ. 11 ಲಕ್ಷಕ್ಕೂ ಹೆಚ್ಚು ಮೊತ್ತ ಕಳೆದುಕೊಂಡು, ಒಂದು ದಿನದ ಮಟ್ಟಿಗೆ ʼಡಿಜಿಟಲ್ ಬಂಧನʼಕ್ಕೊಳಗಾಗಿದ್ದ ಘಟನೆ ವರದಿಯಾಗಿದೆ.
ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಸೈಬರ್ ವಂಚಕರು ಕಾರ್ಪೊರೇಟ್ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿರುವ ನೊಯ್ಡಾದ ಮಹಿಳೆಯೊಬ್ಬರಿಗೆ ಆನ್‌ಲೈನ್ ಮೂಲಕವೇ ಬಂಧನ ವಾರಂಟ್‌ನ ಬೆದರಿಕೆ ಹಾಕಿ 11 ಲಕ್ಷ ರೂ.ಗೂ ಅಧಿಕ ಹಣವನ್ನು ವಂಚಿಸಿದ್ದಾರೆ.
ನೊಯ್ಡಾ ಮೂಲದ ಸಂತ್ರಸ್ತ ಮಹಿಳೆಯು ನೀಡಿರುವ ದೂರಿನ ಪ್ರಕಾರ, ನವೆಂಬರ್ 13ರಂದು ಐವಿಆರ್ ಕರೆಯ ಮೂಲಕ ತಮ್ಮನ್ನು ಸಂಪರ್ಕಿಸಿದ ವಂಚಕರು, ಮುಂಬೈನಲ್ಲಿ ನಿಮ್ಮ ಆಧಾರ್ ಕಾರ್ಡ್ ಬಳಸಿ ಸಿಮ್ ಕಾರ್ಡ್ ಒಂದನ್ನು ಖರೀದಿಸಲಾಗಿದ್ದು, ಆ ಸಿಮ್ ಕಾರ್ಡ್ ಅನ್ನು ಜಾಹೀರಾತುಗಳ ಪ್ರಸಾರಕ್ಕೆ ಹಾಗೂ ಮಹಿಳೆಯರಿಗೆ ಕಿರುಕುಳವನ್ನು ನೀಡಲು ಬಳಸಲಾಗಿತ್ತೆಂದು ಎಂದು ಆಕೆಯನ್ನು ಬೆದರಿಸಿದ್ದಾರೆ.
ಆನಂತರ ವಂಚಕರು ಆಕೆಯ ಕರೆಯನ್ನು, ಮುಂಬೈ ಪೊಲೀಸ್ ಅಧಿಕಾರಿಯೆಂದು ತನ್ನನ್ನು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬನಿಗೆ ವರ್ಗಾಯಿಸಿದರು. ಆರಂಭದಲ್ಲಿ ಐವಿಆರ್ ಕರೆಯ ಮೂಲಕ ಹಾಗೂ ಆನಂತರ ಸ್ಕೈಪ್ ವಿಡಿಯೋ ಕರೆಯಲ್ಲಿಯೂ ಆತ ವಿಚಾರಣೆಯ ನಾಟಕವಾಡಿದ್ದ. ಕಪ್ಪುಹಣ ಬಿಳುಪುಗೊಳಿಸಿದ ಆರೋಪದಲ್ಲಿಯೂ ನಿಮ್ಮ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಸುಪ್ರೀಂಕೋರ್ಟ್‌ನಿಂದ ಬಂಧನ ವಾರಂಟ್ ಕೂಡಾ ಜಾರಿಗೊಂಡಿದೆ ಎಂದು ಆತ ಬೆದರಿಸಿದ್ದ.
“ವಿಚಾರಣೆಯ ನಂತರ, ನಾನು ದೋಷಿಯಲ್ಲ ಎಂದು ಹೇಳಿದ ಆತ, ಹೀಗಾಗಿ ನಾನು ಈ ವಿಚಾರಣೆಯನ್ನು ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆಗಾಗಿ ಮುಂಬೈನ ಸಿಬಿಐ ಕಚೇರಿಯಲ್ಲಿ ನಿಯೋಜನೆಗೊಂಡಿರುವ ಐಪಿಎಸ್ ಅಧಿಕಾರಿಯೊಬ್ಬರಿಗೆ ವರ್ಗಾಯಿಸುತ್ತಿದ್ದೇನೆ ಎಂದು ತಿಳಿಸಿದ. ಇದಾದ ನಂತರ, ನನಗೆ ಸ್ಕೈಪ್ ಐಡಿಯನ್ನು ನೀಡಿದ ಆತ, ಬಂಧನದ ವಾರಂಟ್ ನಿಂದ ನನ್ನ ಹೆಸರು ಕೈಬಿಡಲು ಆದ್ಯತೆಯ ತನಿಖೆ ಕೈಗೊಳ್ಳುವಂತೆ ಸಿಬಿಐ ಅಧಿಕಾರಿಗೆ ವಿಸಿ ಮೂಲಕ ಮನವಿ ಮಾಡುವಂತೆ ಸೂಚಿಸಿದ” ಎಂದು ಆ ಮಹಿಳೆಯು ತಮ್ಮ ದೂರಿನಲ್ಲಿ ಹೇಳಿದ್ದಾರೆ.
ವಿಮಾನ ಯಾನ ಸಂಸ್ಥೆಯ ಸಂಸ್ಥಾಪಕನನ್ನು ತನಿಖೆಗೊಳಪಡಿಸಿದಾಗ, ಆತನ ನಿವಾಸದಲ್ಲಿ ಪೊಲೀಸರಿಗೆ 246 ಡೆಬಿಟ್ ಕಾರ್ಡ್ ಗಳು ದೊರೆತಿದ್ದು, ಈ ಪೈಕಿ ನಿಮ್ಮ ಆಧಾರ್ ಕಾರ್ಡ್ ಬಳಸಿಕೊಂಡು ಬ್ಯಾಂಕ್ ಖಾತೆಯನ್ನು ತೆರೆಯಲು ಬಳಸಲಾಗಿರುವ ಡೆಬಿಟ್ ಕಾರ್ಡ್ ಮೇಲೆ ನಿಮ್ಮ ಹೆಸರಿದೆ ಎಂದು ಸಿಬಿಐ ಅಧಿಕಾರಿಯಂತೆ ಸೋಗು ಹಾಕಿರುವ ವ್ಯಕ್ತಿಯು ಆ ಮಹಿಳೆಗೆ ಹೇಳಿದ್ದಾನೆ.
“ನಂತರ, ನನ್ನ ಖಾತೆಯನ್ನು ರೂ. 2 ಕೋಟಿ ಮೊತ್ತವನ್ನು ವರ್ಗಾಯಿಸಲು ಬಳಸಿಕೊಳ್ಳಲಾಗಿದ್ದು, ಅದಕ್ಕಾಗಿ ನನಗೆ ರೂ. 20 ಲಕ್ಷ ಪಾವತಿಸಲಾಗಿದೆ ಎಂದು ಆತ ಹೇಳಿದ. ಆದರೆ, ನಾನು ಈ ಪ್ರಕರಣದಲ್ಲಿ ಭಾಗಿಯಾಗಿರುವಂತೆ ತನಗೆ ತೋರುತ್ತಿಲ್ಲದಿರುವುದರಿಂದ, ತನಿಖೆಯನ್ನು ಪೂರ್ಣಗೊಳಿಸಲು ನಾನು ನನ್ನ ಎಲ್ಲ ಖಾತೆಗಳಲ್ಲಿನ ನಿಧಿಯನ್ನು ನನ್ನ ಐಸಿಐಸಿಐ ಖಾತೆಗೆ ವರ್ಗಾಯಿಸಬೇಕು. ಅದರ ಬೆನ್ನಿಗೇ ಸುಪ್ರೀಂ ಕೋರ್ಟ್ ನಿರ್ದೇಶನದನ್ವಯ ಐಸಿಐಸಿಐ ಖಾತೆಯಿಂದ ಪಿಎಫ್‍ಸಿ ಖಾತೆಗೆ ಆ ಹಣವನ್ನು ವರ್ಗಾಯಿಸಬೇಕು ಎಂದು ಸೂಚಿಸಿದ” ಎಂದು ಮಹಿಳೆಯು ತಿಳಿಸಿದ್ದಾರೆ.
“ಈ ವಿಷಯವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ್ದು, ನಾನು ಮುಂದಿನ ಕ್ರಮಕ್ಕೆ ಬಾಧ್ಯಸ್ಥಳಾಗುವುದರಿಂದ” ಈ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ತನಗೆ ತಿಳಿಸಲಾಯಿತು ಎಂದು ಆ ಮಹಿಳೆಯು ಹೇಳಿದ್ದಾಳೆ.
“ಇದಲ್ಲದೆ, ನಾನು ಈ ಅಪರಾಧದಲ್ಲಿ ದೋಷಿಯಲ್ಲ ಎಂದು ಸಾಬೀತುಪಡಿಸಲು ನನ್ನ ಖಾತೆಯಲ್ಲಿ ಸಾಕಷ್ಟು ಬಾಕಿ ಮೊತ್ತವನ್ನು ಇರಿಸಬೇಕು ಎಂದು ಸೂಚಿಸಿದ ಆತ, ಅದಕ್ಕಾಗಿ ನಾನು ಐಸಿಐಸಿಐ ಬ್ಯಾಂಕಿನಿಂದ ರೂ. 20 ಲಕ್ಷ ವೈಯಕ್ತಿಕ ಸಾಲ ಪಡೆಯಬೇಕು ಎಂದು ಹೇಳಿ, ಅದಕ್ಕಾಗಿ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ವಿವರಗಳನ್ನೂ ತಾನೇ ನೀಡಿದ. ಆದರೆ, ನಾನು ಅದಕ್ಕೆ ನಿರಾಕರಿಸಿದ ನಂತರ, ರೂ. 3 ಲಕ್ಷವನ್ನಾದರೂ ವೈಯಕ್ತಿಕ ಸಾಲದ ಮೂಲಕ ವ್ಯವಸ್ಥೆ ಮಾಡುವಂತೆ ಆತ ಒತ್ತಡ ಹೇರಿದ. ಆತನ ತೀವ್ರ ಒತ್ತಡದ ನಂತರ, ನಾನು ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸಿದೆ ಹಾಗೂ ಆ ಮೊತ್ತವೂ ಪಿಎಫ್‍ಸಿ ಖಾತೆಗೆ ವರ್ಗಾವಣೆಗೊಂಡಿತು” ಎಂದು ಆಕೆ ಆರೋಪಿಸಿದ್ದಾರೆ.
“ತನಿಖೆಗಾಗಿ ನನ್ನ ಆಧಾರ್ ಕಾರ್ಡ್ ಅನ್ನು ಮೌಲ್ಯಮಾಪನ ಮಾಡುವ ನೆಪದಲ್ಲಿ ಸ್ಕೈಪ್ ಮೂಲಕ ನನ್ನ ಸಹಿಯ ಚಿತ್ರವನ್ನೂ ಅವರು ಪಡೆದರು” ಎಂದು ಆಕೆ ದೂರಿದ್ದಾರೆ.
ತನ್ನನ್ನು ಬೆಳಗ್ಗೆಯಿಂದ ರಾತ್ರಿವರೆಗೆ ʼಡಿಜಿಟಲ್ ಬಂಧನʼದಲ್ಲಿರಿಸಿದ್ದಲ್ಲದೆ, ನನಗೆ ರೂ. 11.11 ಲಕ್ಷ ಮೊತ್ತವನ್ನು ವಂಚಿಸಲಾಗಿದೆ ಎಂದು ಆರೋಪಿಸಿರುವ ಆ ಮಹಿಳೆಯು, ಈ ಕುರಿತು ಉತ್ತರ ಪ್ರದೇಶ ಸೈಬರ್ ಅಪರಾಧ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ನೊಯ್ಡಾ ಸೆಕ್ಟರ್ 36ರಲ್ಲಿನ ಸೈಬರ್ ಅಪರಾಧ ಠಾಣೆಯ ಉಸ್ತುವಾರಿಯಾದ ಇನ್ಸ್ ಪೆಕ್ಟರ್ ರೀಟಾ ಯಾದವ್, “ಈ ಸಂಬಂಧ ಸೂಕ್ತ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಗಳಡಿ ಎಪ್ ಐ ಆರ್ ದಾಖಲಿಸಿಕೊಳ್ಳಲಾಗಿದೆ” ಎಂದು ಹೇಳಿದ್ದಾರೆ.
ಈ ಪ್ರಕರಣದ ಕುರಿತು ತನಿಖೆ ಪ್ರಗತಿಯಲ್ಲಿದೆ ಎಂದು ಅವರು PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಬೆಳೆಯುತ್ತಿರುವ ಸೈಬರ್ ಅಪರಾಧಗಳ ಬಗ್ಗೆ ಜನರು ಜಾಗರೂಕರಾಗಿರಬೇಕು ಎಂದು ಆಗ್ರಹಿಸಿರುವ ಪೊಲೀಸರು, ಇಂತಹ ಅಪರಾಧಗಳ ಕುರಿತು ಆದಷ್ಟೂ ಶೀಘ್ರವಾಗಿ ಕೇಂದ್ರ ಸಹಾಯವಾಣಿ ಸಂಖ್ಯೆ 1930 ಅಥವಾ ತುರ್ತು ಕರೆ ಸಂಖ್ಯೆ 112 ಮೂಲಕ ಪೊಲೀಸರನ್ನು ಸಂಪರ್ಕಿಸಬೇಕು ಅಥವಾ ಇಂತಹ ಕೃತ್ಯಗಳ ಕುರಿತು ಸ್ಥಳೀಯ ಠಾಣೆಗಳಲ್ಲಿನ ಸೈಬರ್ ಡೆಸ್ಕ್ ಗಳಿಗೆ ವರದಿ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
“ಪೊಲೀಸರು ಯಾವುದೇ ವ್ಯಕ್ತಿಯನ್ನು ಡಿಜಿಟಲ್ ವಿಚಾರಣೆಗೆ ಒಳಪಡಿಸುವುದಿಲ್ಲ ಎಂಬುದು ಜನರಿಗೆ ತಿಳಿದಿರಬೇಕು. ಒಂದು ವೇಲೆ ಯಾರಾದರೂ ಈ ರೀತಿ ಬೆದರಿಕೆ ಒಡ್ಡಿದರೆ, ಅಂಥವರಿಗೆ ಸೂಕ್ತ ನೋಟಿಸ್ ಕಳಿಸುವಂತೆ ಹೇಳಬೇಕು ಹಾಗೂ ಅವರಿಂದ ವಿವರಗಳನ್ನು ಪಡೆಯಬೇಕು. ನಾನು ನಿಮ್ಮನ್ನು ಪೊಲೀಸ್ ಠಾಣೆಯಲ್ಲಿ ಭೇಟಿಯಾಗಲು ಬರುತ್ತಿದ್ದೇನೆ ಎಂದು ಅವರಿಗೆ ತಿಳಿಸಬೇಕು” ಎಂದು ಇನ್ಸ್ ಪೆಕ್ಟರ್ ರೀಟಾ ಯಾದವ್ ಕಿವಿಮಾತು ಹೇಳಿದ್ದಾರೆ.
ಇತ್ತೀಚೆಗೆ ಇಂತಹುದೇ ಪ್ರಕರಣವೊಂದು ಹರ್ಯಾಣದ ಫರೀದಾಬಾದ್ ನಿಂದ ವರದಿಯಾಗಿತ್ತು. ಆ ಪ್ರಕರಣದಲ್ಲಿ ಮಹಿಳೆಯೊಬ್ಬರಿಗೆ ನಿಮ್ಮ ವೈಯಕ್ತಿಕ ಗುರುತಿನ ಚೀಟಿಗಳನ್ನು ಕಾನೂನುಬಾಹಿರ ಕೃತ್ಯಗಳಿಗೆ ಬಳಸಿಕೊಳ್ಳಲಾಗಿದೆ ಎಂದು ಪೊಲೀಸ್ ಸಿಬ್ಬಂದಿಗಳ ಸೋಗು ಹಾಕಿಕೊಂಡು ನಂಬಿಸಿದ್ದ ಸೈಬರ್ ವಂಚಕರು, ಆಕೆಯನ್ನು ಒಂದು ವಾರ ಕಾಲ ಡಿಜಿಟಲ್ ಬಂಧನಕ್ಕೆ ಒಳಪಡಿಸಿದ್ದರು. ಸ್ಕೈಪ್ ಮೂಲಕ ಆನ್ ಲೈನ್ ನಲ್ಲೇ ಉಳಿಯುವಂತೆ ಸೂಚಿಸಿದ್ದ ಆ ವಂಚಕರು, ಆ ಅವಧಿಯುದ್ದಕ್ಕೂ ಆಕೆಯ ಮೇಲೆ ನಿಗಾ ಇಟ್ಟಿದ್ದರೂ, ಈ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಆಕೆಗೆ ತಾಕೀತು ಮಾಡಿದ್ದರು.
ಸೈಬರ್ ವಂಚನೆಗಳು ಬಹುರೂಪ ತಳೆಯತೊಡಗಿದ್ದು, ಸಾಮಾನ್ಯ ಜನರು ಅಗತ್ಯಕ್ಕೆ ತಕ್ಕಷ್ಟಾದರೂ ಕಾನೂನು ಪರಿಜ್ಞಾನ ಬೆಳೆಸಿಕೊಂಡರೆ ಮಾತ್ರ ಇಂತಹ ಸೈಬರ್ ವಂಚನೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯ.







