ಒಲಿಂಪಿಕ್ ಮೂಲಸೌಕರ್ಯಕ್ಕೆ ಭೂಮಿ: ಗುಜರಾತ್ ಹೈಕೋರ್ಟ್ ಮೊರೆ ಹೋದ ರೈತರು

ಗುಜರಾತ್ ಹೈಕೋರ್ಟ್ PC: x.com/INDIACSR
ಅಹ್ಮದಾಬಾದ್: ತಮ್ಮ ಜಮೀನನ್ನು 2036ರ ಒಲಿಂಪಿಕ್ಸ್ ಆಯೋಜಿಸಲು ಕ್ಲೇಮ್ ಸಲ್ಲಿಸುವ ಸಲುವಾಗಿ ಮೂಲಸೌರ್ಯ ಅಭಿವೃದ್ಧಿ ಸಿದ್ಧತೆ ಉದ್ದೇಶದಿಂದ "ನಿರ್ಬಂಧಿತ, ಸಾಂಸ್ಥಿಕ, ಕ್ರೀಡಾ ಮತ್ತು ವಿರಾಮದ ವಲಯ" (ಕೆಝೆಡ್3)ವಾಗಿ ಮರು ವರ್ಗೀಕರಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಂತ್ರಸ್ತ ರೈತರು ಗುಜರಾತ್ ಹೈಕೋರ್ಟ್ ನ ಮೊರೆ ಹೋಗಿದ್ದಾರೆ.
ಗೋಧವಿ ಗ್ರಾಮದ 57 ರೈತರು ಒಟ್ಟಾಗಿ ವಕೀಲ ನದೀಮ್ ಬಿ ಮನ್ಸೂರಿ ಅವರ ಮೂಲಕ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. 2014ರಲ್ಲಿ ಈ ಜಮೀನನ್ನು ಸಾಮಾನ್ಯ ಕೃಷಿ ವಲಯ ಎಂದು ಘೋಷಿಸಲಾಗಿತ್ತು. ಆದರೆ 2024ರ ಸೆಪ್ಟೆಂಬರ್ ನಲ್ಲಿ ಇದನ್ನು ಕೆಝೆಡ್3 ವಲಯವಾಗಿ ಮರು ವರ್ಗೀಕರಿಸಲಾಗಿದೆ ಎಂದು ರೈತರು ವಿವರಿಸಿದ್ದಾರೆ. ಗೋಧವಿ ಗ್ರಾಮ ಅಹ್ಮದಾಬಾದ್ ನಗರದ ಹೊರವಲಯದಲ್ಲಿದ್ದು, ಅಹ್ಮದಾಬಾದ್ ನಗರ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿದೆ.
ಗೋಧಾವಿ ಗ್ರಾಮವನ್ನು ಒಲಿಂಪಿಕ್ ವಲಯವಾಗಿ ಘೋಷಿಸುವುದಕ್ಕೆ ಈ ಗ್ರಾಮದ ಬಡರೈತರು ಪದೇ ಪದೇ ಆಕ್ಷೇಪಗಳನ್ನು ಸಲ್ಲಿಸಿದ್ದೇವೆ. ಆದರೂ ಅಧಿಕಾರಿಗಳು ಬಡ ರೈತರಿಗೆ ನ್ಯಾಯ ಒದಗಿಸಿಲ್ಲ. ಈ ಹಿನ್ನೆಲೆಯಲ್ಲಿ ಮರು ವರ್ಗೀಕರಣದ ಅಧಿಸೂಚನೆ ರದ್ದುಪಡಿಸಬೇಕು ಎಂದು ಕೋರಿದ್ದಾರೆ. ಅರ್ಜಿದಾರರಿಗೆ ಕೃಷಿ ಹೊರತುಪಡಿಸಿದರೆ ಯಾವುದೇ ಇತರ ಕೌಶಲಗಳಿಲ್ಲ. ಸರ್ಕಾರದ ನಿರ್ಧಾರ ಇವರ ಜೀವನೋಪಾಯಕ್ಕೆ ಅಪಾಯ ತಂದಿದೆ ಎಂದು ವಾದಿಸಿದ್ದಾರೆ.
2011ರಿಂದೀಚೆಗೆ ಗ್ರಾಮದಲ್ಲಿ ಭೂಮಿಯ ಬೆಲೆ ಏರಿಕೆಯಾಗಿದ್ದು, ಮಾರುಕಟ್ಟೆ ಬೆಲೆಯು ಸರ್ಕಾರ ತಮ್ಮ ಭೂಮಿಗೆ ನೀಡುವುದಾಗಿ ಭರವಸೆ ಕೊಟ್ಟಿರುವ ಬೆಲೆಗಿಂತ ಅಧಿಕವಾಗಿದೆ. ಆದ್ದರಿಂದ ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ ಗೋಧವಿಯನ್ನು ಕೆಝೆಡ್3 ವಲಯವಾಗಿ ಘೋಷಿಸಿರುವುದನ್ನು ಪ್ರಶ್ನಿಸಿದ್ದಾರೆ. ಸರ್ಕಾರ ಸ್ಥಳೀಯ ರೈತರ ನೋವನ್ನು ಕಡೆಗಣಿಸುತ್ತಿದ್ದು, ಸುಸ್ಥಿರ ಅಭಿವೃದ್ಧಿಯ ಇಡೀ ಪರಿಕಲ್ಪನೆಯನ್ನೇ ಧಕ್ಕೆ ತಂದಿದೆ" ಎಂದು ವಾದಿಸಲಾಗಿದೆ.
ಈ ಅರ್ಜಿಯನ್ನು ಜುಲೈ 24ರಂದು ಕೋರ್ಟ್ ವಿಚಾರಣೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಬದಲಾದ ಯೋಜನೆಯಡಿ ಸರ್ಕಾರ ಈ ಗ್ರಾಮದ 500 ಎಕರೆ ಭೂಮಿಯನ್ನು ಶೈಕ್ಷಣಿಕ, ಸಾಂಸ್ಥಿಕ, ಕ್ರೀಡಾ ಮತ್ತು ವಿರಾಮದ ಚಟುವಟಿಕೆಗಳ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಬಳಸಿಕೊಳ್ಳಲಿದೆ.







