ಉತ್ತರ ಪ್ರದೇಶ: ಪೊಲೀಸ್ ಹುದ್ದೆಗೆ ಜತೆಯಾಗಿಯೇ ನೇಮಕಾತಿ ಪತ್ರ ಸ್ವೀಕರಿಸಿದ ತಂದೆ-ಮಗ!

ಯಶ್ಪಾಲ್ ಸಿಂಗ್ | ಶೇಖರ್
PC: x.com/madanjournalist
ಮೀರಠ್: ಉತ್ತರ ಪ್ರದೇಶ ಸರ್ಕಾರ ಕೈಗೊಂಡ 60 ಸಾವಿರ ಪೊಲೀಸ್ ನೇಮಕಾತಿ ಅಭಿಯಾನದಲ್ಲಿ 41 ವರ್ಷದ ತಂದೆ ಮತ್ತು 21 ವರ್ಷದ ಮಗ ಇಬ್ಬರೂ ಏಕಕಾಲಕ್ಕೆ ಪೊಲೀಸ್ ಹುದ್ದೆಗೆ ನೇಮಕಾತಿ ಪತ್ರ ಪಡೆದ ಅಪರೂಪದ ಘಟನೆ ವರದಿಯಾಗಿದೆ.
ಲಕ್ನೋದಲ್ಲಿ ನಡೆದ ಸಮಾರಂಭದಲ್ಲಿ ನಿವೃತ್ತ ಯೋಧ ಯಶ್ಪಾಲ್ ಸಿಂಗ್ (41) ಮತ್ತು ಮಗ ಶೇಖರ್ (21) ಜತೆಜತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ನೇಮಕಾತಿ ಪತ್ರ ಪಡೆದರು. ಹಾಪುರದ ಉದಯರಾಂಪುರ ನಗ್ಲಾ ಗ್ರಾಮದ ತಂದೆ-ಮಗ ಇದಕ್ಕಾಗಿ ಎರಡು ವರ್ಷಗಳಿಂದ ಜಂಟಿಯಾಗಿ ಪರಿಶ್ರಮ ಹಾಕಿದ್ದರು.
ಸೇನೆಯಲ್ಲಿ ಹದಿನಾರು ವರ್ಷ ಸೇವೆ ಸಲ್ಲಿಸಿ 2019ರಲ್ಲಿ ಸ್ವಯಂ ನಿವೃತ್ತಿ ಪಡೆದ ಯಶ್ಪಾಲ್ ಸಿಂಗ್ ಇದೀಗ ಮಹತ್ವಾಕಾಂಕ್ಷೆಯೊಂದಿಗೆ ಖಾಕಿ ಸಮವಸ್ತ್ರ ಧರಿಸಿದ್ದಾರೆ. ಸೇನೆಯಿಂದ ನಿವೃತ್ತಿ ಪಡೆದ ಬಳಿಕ ಅಲ್ಪಕಾಲ ದೆಹಲಿಯ ಆರ್ಮಿ ಆರ್ಡಿನೆನ್ಸ್ ಕಾಪ್ಸ್ ನಲ್ಲಿ ಸಿಂಗ್ ಕರ್ತವ್ಯದಲ್ಲಿದ್ದರು. ಇದೇ ವೇಳೆ ಮಗ ಶೇಖರ್ ನಗರ್ (18) ಶಾಲಾ ಶಿಕ್ಷಣ ಮುಗಿಸಿ ವೃತ್ತಿ ಕಂಡುಕೊಳ್ಳುವ ಹುಡುಕಾಟದಲ್ಲಿದ್ದ. ಸೈನಿಕನಾಗಿ ಅಲ್ಲ; ಪೊಲೀಸ್ ಆಗಬೇಕು ಎಂಬ ಕನಸು ಕಾಣುತ್ತಿದ್ದ. ತಂದೆ-ಮಗನ ಸಂಭಾಷಣೆ ಇದಕ್ಕೆ ಸ್ಪಷ್ಟ ರೂಪು ನೀಡಿತು. ಯಶ್ಪಾಲ್ ಮಗನ ಕನಸಿಗೆ ನೀರೆರೆಯುವ ಜತೆಜತೆಗೆ ಪ್ರಯತ್ನದಲ್ಲಿ ತಾವೂ ಕೈಜೋಡಿಸಿದರು.
ದೆಹಲಿ-ಎನ್ಸಿಆರ್ನ ಒಂದೇ ಕೋಚಿಂಗ್ ಸೆಂಟರ್ ಗೆ ಸೇರಿ ಎರಡು ವರ್ಷಗಳ ಕಾಲ ಜತೆಜತೆಗೆ ಒಂದೇ ಪಠ್ಯಕ್ರಮ ಅಧ್ಯಯನ ಮಾಡಿದರು, ಅಭ್ಯಾಸ ಪರೀಕ್ಷೆಗಳನ್ನು ಬರೆದರು, ಪರೀಕ್ಷೆ ರದ್ದತಿ ಮತ್ತು ವಿಳಂಬದಂಥ ಸಂಕಷ್ಟಗಳನ್ನು ಜತೆಯಾಗಿಯೇ ಎದುರಿಸಿದರು.
ಮೊದಲು ತಂದೆಯ ಜತೆಗೆ ಆನ್ಲೈನ್ ಕ್ಲಾಸ್ ನಲ್ಲಿ ಕೂರಲು, ಪ್ರಶ್ನೆ ಕೇಳುವುದು ಮಗನಿಗೆ ಮುಜುಗರ ಎನಿಸುತ್ತಿತ್ತು. ಆದರೆ ಕ್ರಮೇಣ ಪರಿಸ್ಥಿತಿಗೆ ಹೊಂದಿಕೊಂಡರು. ತಂದೆ-ಮಗನ ಪ್ರಬಲ ಅಂಶಗಳು ಪರಸ್ಪರರಿಗೆ ನೆರವಾದವು. ಸಾಮಾನ್ಯಜ್ಞಾನ ಮತ್ತು ಶಿಸ್ತಿನಲ್ಲಿ ಯಶ್ಪಾಲ್ ಎತ್ತಿದಕೈ. ಮಗ ಶೇಖರ್ ಲಾಜಿಕ್ ಮತ್ತು ನ್ಯುಮರಿಕಲ್ ರೀಸನಿಂಗ್ ನಲ್ಲಿ ತಂದೆಗೆ ನೆರವಾಗುತ್ತಿದ್ದ.
ಇದೀಗ ತಂದೆ ಶಹಾಜಹಾನ್ಪುರದಲ್ಲಿ ತರಬೇತಿಗೆ ಸೇರಿದ್ದರೆ, ಮಗ ಬರೇಲಿಯಲ್ಲಿ ವರದಿ ಮಾಡಿಕೊಂಡಿದ್ದಾರೆ. ತಂದೆ ಮಗನ ಯಶಸ್ಸನ್ನು ಇಡೀ ಗ್ರಾಮ ಸಂಭ್ರಮಿಸುತ್ತಿದೆ.







