Reelಗಾಗಿ ಮಗುವಿನ ಪ್ರಾಣ ಅಪಾಯಕ್ಕೊಡ್ಡಿದ ತಂದೆ, ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ

Screengrab : X
ಹೊಸದಿಲ್ಲಿ, ಎ.11: ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ವೀಕ್ಷಕರನ್ನು ಗಳಿಸುವ ಹುಚ್ಚಾಟದಲ್ಲಿ ಹೆತ್ತ ತಂದೆಯೇ ಸಣ್ಣ ಮಗುವನ್ನು ಮೊದಲ ಅಂತಸ್ತಿನ ಬಾಲ್ಕನಿಯಿಂದ ಕೆಳಕ್ಕೆ ಹಾರುವಂತೆ ಪ್ರೇರೇಪಿಸಿದ ವೀಡಿಯೊ ವೈರಲ್ ಆಗಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Just North Indian things. Endangering a child’s life for a mere 30-second reel.🤬 pic.twitter.com/YZqQNnN1ow
— Manish RJ (@mrjethwani1) April 10, 2026
ಎರಡು ರಿಂದ ಮೂರು ವರ್ಷ ಪ್ರಾಯದ ಮಗು ಬಾಲ್ಕನಿಯ ರೇಲಿಂಗ್ ಮೇಲೆ ಬ್ಯಾಲೆನ್ಸ್ ಮಾಡುತ್ತ ಚಪ್ಪಾಳೆ ಹೊಡೆಯುತ್ತಿದ್ದನ್ನು ಮತ್ತು ಕೆಳಗೆ ನಿಂತಿದ್ದ ವ್ಯಕ್ತಿ ತನ್ನ ತೋಳುಗಳನ್ನು ಮುಂದಕ್ಕೆ ಚಾಚಿ ಕೆಳಕ್ಕೆ ಜಿಗಿಯುವಂತೆ ಉತ್ತೇಜಿಸಿದ್ದನ್ನು, ಕೆಲ ಕ್ಷಣಗಳ ಬಳಿಕ ಮಗು ಕೆಳಕ್ಕೆ ಹಾರಿದ್ದನ್ನು ವೈರಲ್ ವೀಡಿಯೊ ತೋರಿಸಿದೆ.
ಮಗು ತಂದೆಯ ತೋಳುಗಳಲ್ಲಿ ಸೆರೆಯಾಗಿದ್ದರೂ ಜಾರಿ ನೆಲದ ಮೇಲಿರಿಸಿದ್ದ ಹಾಸಿಗೆಯ ಮೇಲೆ ಬಿದ್ದಿತ್ತು. ಆತ ಮಗುವನ್ನು ಎತ್ತಿ ಲಘುವಾಗಿ ಮೇಲಕ್ಕೆ ಎಸೆದಿದ್ದನ್ನೂ ಎಕ್ಸ್ ನಲ್ಲಿ ವೈರಲ್ ಆಗಿರುವ ವೀಡಿಯೊ ತೋರಿಸಿದೆ.
ವೀಡಿಯೊ ಕ್ಲಿಪ್ಗೆ ಆನ್ಲೈನ್ ನಲ್ಲಿ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
‘Reelಗಾಗಿ ಯಾವುದೇ ಮಟ್ಟಕ್ಕೂ ಹೋಗುವುದು ಮೂರ್ಖತನ’ ಎಂದು ಓರ್ವ ಬಳಕೆದಾರ ಬರೆದಿದ್ದಾರೆ.
ಹಲವಾರು ಟ್ವೀಟ್ ಗಳು ಮಗುವಿಗೆ ಉಂಟಾಗಬಹುದಾದ ಅಪಾಯವನ್ನು ಬೆಟ್ಟು ಮಾಡಿವೆ. ಕೇವಲ Reelಗಾಗಿ ಆತ ಸ್ವಂತ ಮಗುವಿನ ಜೀವವನ್ನು ಅಪಾಯಕ್ಕೊಡ್ಡಿದ್ದಾನೆ ಎಂದು ಹಲವರು ಕಿಡಿ ಕಾರಿದ್ದಾರೆ.
ಆನ್ ಲೈನ್ ಕಂಟೆಂಟ್ ಗಾಗಿ ಮಕ್ಕಳನ್ನು ಬಳಸುವ ಹೆಚ್ಚುತ್ತಿರುವ ಪ್ರವೃತ್ತಿಯನ್ನು ಬೆಟ್ಟು ಮಾಡಿರುವ ಸಾಮಾಜಿಕ ಜಾಲತಾಣದಲ್ಲಿ ಜನರು, ಪೋಷಕರು ತಮ್ಮ ಮಕ್ಕಳನ್ನು ಕಂಟೆಂಟ್ ಸಾಮಗ್ರಿಗಳನ್ನಾಗಿ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇದು ಮಗುವಿಗೆ ಅಪ್ಪನಲ್ಲಿರುವ ನಂಬಿಕೆಯನ್ನು ತೋರಿಸುತ್ತದೆ, ಆದರೆ ಯಾರೂ ಈ ರೀತಿಯಲ್ಲಿ ಮಗುವಿನ ಜೀವವನ್ನು ಅಪಾಯಕ್ಕೊಡ್ಡಬಾರದು ಎಂದು ಕೆಲವರು ಹೇಳಿದ್ದಾರೆ. ಇದು ತಪ್ಪು ಮಾತ್ರವಲ್ಲ, ಕಾನೂನಿನಡಿ ಅಪರಾಧವೂ ಆಗಿದೆ. ತಂದೆಯ ವಿರುದ್ಧ FIR ದಾಖಲಿಸಬೇಕು ಎಂದು ಇನ್ನು ಕೆಲವರು ಆಗ್ರಹಿಸಿದ್ದಾರೆ.






