ನಾಲ್ಕನೆಯ ಮಗುವನ್ನು ಬಂಡೆಗಳ ಮಧ್ಯೆ ಎಸೆದು ಬಂದ ದಂಪತಿ!

Credit : indiatoday.in
ಭೋಪಾಲ್: ಸರಕಾರಿ ಕೆಲಸವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಭೀತಿಯಿಂದ ದಂಪತಿಗಳು ತಮ್ಮ ಮೂರು ದಿನದ ನವಜಾತ ಶಿಶುವನ್ನು ಬಂಡೆಗಳ ಕೆಳಗೆ ಎಸೆದು ಬಂದಿರುವ ಘಟನೆ ಮಧ್ಯಪ್ರದೇಶದ ಚಿಂಚ್ವಾಡದಲ್ಲಿ ನಡೆದಿದೆ. ಅವರಿಗೆ ಇತ್ತೀಚೆಗಷ್ಟೆ ನಾಲ್ಕನೆಯ ಮಗು ಜನಿಸಿತ್ತು ಎಂದು ಹೇಳಲಾಗಿದೆ.
ರವಿವಾರ ರಾತ್ರಿ ಘಾಟ್ ರಸ್ತೆಗೆ ಸಮೀಪವಿರುವ ಅರಣ್ಯದಲ್ಲಿನ ಬಂಡೆಗಳ ಬಳಿ ನವಜಾತ ಶಿಶು ಬಿದ್ದಿರುವುದನ್ನು ದಾರಿಹೋಕರೊಬ್ಬರು ಗಮನಿಸಿದ ನಂತರ, ಈ ಘಟನೆ ಬೆಳಕಿಗೆ ಬಂದಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು, ಮಗುವನ್ನು ರಕ್ಷಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆಗಾಗಿ ಮಗುವನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಆ ಮಗುವನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ.
ಮಗುವನ್ನು ಬಂಡೆಗಳಡಿ ಎಸೆದ ದಂಪತಿಗಳನ್ನು ಬಬ್ಲು ದಾಂಡೋಲಿಯಾ ಹಾಗೂ ರಾಜಕುಮಾರಿ ದಾಂಡೋಲಿಯಾ ಎಂದು ಗುರುತಿಸಲಾಗಿದೆ. ಈ ಇಬ್ಬರೂ 2009ರಿಂದ ಸರಕಾರಿ ಶಾಲೆಯೊಂದರಲ್ಲಿ 3ನೇ ತರಗತಿಯ ಶಿಕ್ಷಕರಾಗಿದ್ದಾರೆ. ತಮಗೆ ನಾಲ್ಕನೆಯ ಮಗು ಜನಿಸಿರುವುದರಿಂದ, ತಮ್ಮನ್ನು ಉದ್ಯೋಗದಿಂದ ಅಮಾನತುಗೊಳಿಸಬಹುದು ಅಥವಾ ವಜಾಗೊಳಿಸಬಹುದು ಎಂಬ ಭೀತಿಯಿಂದ ನಾವು ಈ ಕೃತ್ಯವೆಸಗಿರುವುದಾಗಿ ವಿಚಾರಣೆಯ ವೇಳೆ ದಂಪತಿಗಳು ತಪ್ಪೊಪ್ಪಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಬಟ್ಖಾಪ ಠಾಣೆಯ ಉಸ್ತುವಾರಿ ಅನಿಲ್ ರಾಥೋರ್, “ತನ್ನ ಉದ್ಯೋಗ ಕಳೆದುಕೊಳ್ಳಬೇಕಾಗಬಹುದು ಎಂಬ ಭೀತಿಯಿಂದ ಮಗುವನ್ನು ಬಂಡೆಗಳಡಿ ಬಚ್ಚಿಟ್ಟೆ ಎಂದು ಮಗುವಿನ ತಂದೆ ತಪ್ಪೊಪ್ಪಿಕೊಂಡಿದ್ದಾನೆ. ಆತನಿಗೆ 8, 6 ಹಾಗೂ 4ನೇ ವಯಸ್ಸಿನ ಇತರ ಮೂವರು ಮಕ್ಕಳಿದ್ದು, ಇಬ್ಬರೂ ಪೋಷಕರನ್ನು ಬಂಧಿಸಲಾಗಿದೆ” ಎಂದು ತಿಳಿಸಿದ್ದಾರೆ.
“ಮಗುವಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಪ್ರಕರಣವೊಂದನ್ನು ದಾಖಲಿಸಿಕೊಂಡಿದ್ದು, ಕಾನೂನು ಕ್ರಮವನ್ನು ಕೈಗೊಳ್ಳಲಾಗುತ್ತಿದೆ”ಎಂದು ಅಮರ್ವಾರ್ ಎಸ್ಡಿ ಪಿಒ ಕಲ್ಯಾಣಿ ಬರ್ಕಡೆ ಹೇಳಿದ್ದಾರೆ.







