ಪ್ರಚೋದನಕಾರಿ ಹೇಳಿಕೆ ಆರೋಪ; ಅಭಿಷೇಕ್ ಬ್ಯಾನರ್ಜಿ ವಿರುದ್ಧ ಎಫ್ಐಆರ್ ದಾಖಲು

Photo Credit: PTI
ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಚುನಾವಣಾ ಫಲಿತಾಂಶ ಪ್ರಕಟವಾದ ಒಂದು ದಿನದ ಬಳಿಕ ಮೇ 5ರಂದು ಸಾಮಾಜಿಕ ಕಾರ್ಯಕರ್ತ ರಾಜೀಬ್ ಸರ್ಕಾರ್ ಅವರು ಉತ್ತರ 24 ಪರಗಣ ಜಿಲ್ಲೆಯ ಬಾಗುಯಾಟಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ಆಧಾರದ ಮೇಲೆ ಬಿಧಾನ್ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಮೇ 15ರಂದು ಎಫ್ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಅಭಿಷೇಕ್ ಬ್ಯಾನರ್ಜಿ ಅವರು ಚುನಾವಣೋತ್ತರ ಹಿಂಸಾಚಾರ ಹಾಗೂ ಮತ ಎಣಿಕೆ ಪ್ರಕ್ರಿಯೆಗೆ ಸಂಬಂಧಿಸಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಮತ್ತು ಜನತಾ ಪ್ರತಿನಿಧಿತ್ವ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಪ್ರಿಲ್ 27ರಿಂದ ಮೇ 3ರವರೆಗೆ ನಡೆದ ವಿವಿಧ ಚುನಾವಣಾ ಸಭೆಗಳು ಮತ್ತು ಪ್ರಚಾರ ಕಾರ್ಯಕ್ರಮಗಳಲ್ಲಿ ಅಭಿಷೇಕ್ ಬ್ಯಾನರ್ಜಿ ಮಾಡಿದ ಭಾಷಣಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅವರ ಕೆಲವು ಹೇಳಿಕೆಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಉದ್ದೇಶಿಸಿಯೂ ಇದ್ದವು ಎಂದು ದೂರುದಾರರು ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದ ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನು ಅಭಿಷೇಕ್ ಬ್ಯಾನರ್ಜಿ ಈ ಹಿಂದೆ ಪ್ರಶ್ನಿಸಿದ್ದರು. ಚುನಾವಣಾ ಆಯೋಗ ‘ಪಕ್ಷಪಾತಿ’ಯಾಗಿ ವರ್ತಿಸಿದೆ ಎಂದು ಅವರು ಆರೋಪಿಸಿದ್ದರು.
“ಸಾರ್ವಜನಿಕ ಸಭೆಗಳಲ್ಲಿ ಮಾಡಿದ ಕೆಲವು ಹೇಳಿಕೆಗಳು ಸಾರ್ವಜನಿಕ ಸುವ್ಯವಸ್ಥೆ ಮತ್ತು ಕೋಮು ಸಾಮರಸ್ಯಕ್ಕೆ ಧಕ್ಕೆಯುಂಟು ಮಾಡುವ ಸ್ವರೂಪದ್ದಾಗಿವೆ ಎಂದು ದೂರುದಾರರು ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಅಂಶಗಳನ್ನು ತನಿಖೆಯ ಭಾಗವಾಗಿ ಪರಿಶೀಲಿಸಲಾಗುತ್ತಿದೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.






