ಗಾಂಧಿ ಕುಟುಂಬದ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಪ್ರಚೋದನಾಕಾರಿ ಪೋಸ್ಟ್: ಬಿಜೆಪಿ ಸಂಸದೆ ಕಂಗನಾ ರಣಾವತ್ ವಿರುದ್ಧ ಎಫ್ಐಆರ್

ನಟಿ ಕಂಗನಾ ರಣಾವತ್ (Photo: PTI)
ಶಿಮ್ಲಾ: ಗಾಂಧಿ ಕುಟುಂಬವನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಪ್ರಕಟಿಸಿದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಸಂಸದೆ, ನಟಿ ಕಂಗನಾ ರಣಾವತ್ ವಿರುದ್ಧ ಹಿಮಾಚಲ ಪ್ರದೇಶ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಕಂಗನಾ ಅವರ ಹೇಳಿಕೆಗಳು ಪ್ರಚೋದನಕಾರಿಯಾಗಿದ್ದು, ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ಉಂಟುಮಾಡುವ ಸಾಧ್ಯತೆಯಿದೆ ಎಂದು ಆರೋಪಿಸಿ ಶಿಮ್ಲಾದ ನಿವೃತ್ತ ಕ್ಯಾಪ್ಟನ್ ಅತುಲ್ ಶರ್ಮಾ ಎಂಬವರು ದೂರು ನೀಡಿದ್ದರು.
ನವೆಂಬರ್ 10ರಂದು ಕಂಗನಾ ತಮ್ಮ ದೃಢೀಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪ್ರಕಟಿಸಿದ್ದ ಪೋಸ್ಟ್ಗೆ ಸಂಬಂಧಿಸಿದಂತೆ ನವೆಂಬರ್ 13ರ ಶುಕ್ರವಾರ ಪ್ರಕರಣ ದಾಖಲಿಸಲಾಗಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಅವರ ಪುತ್ರರಾದ ಸಂಜಯ್ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಸಾವಿನ ಕುರಿತು ಪೋಸ್ಟ್ನಲ್ಲಿ ಪ್ರಚೋದನಕಾರಿ ಆರೋಪಗಳನ್ನು ಮಾಡಲಾಗಿದೆ ಎಂದು ದೂರುದಾರರು ಆಕ್ಷೇಪಿಸಿದ್ದಾರೆ.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ‘ನಿಗೂಢ ವಿದೇಶಿ ಪ್ರಜೆ’ (Mysterious Foreign National) ಎಂದು ಪೋಸ್ಟ್ನಲ್ಲಿ ಉಲ್ಲೇಖಿಸಿರುವುದಕ್ಕೂ ದೂರುದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಿದೇಶದಲ್ಲಿರುವ ಕೆಫೆಯೊಂದಕ್ಕೆ ಸೋನಿಯಾ ಗಾಂಧಿ ತೆರಳಿದ ಬಳಿಕ ಗಾಂಧಿ ಕುಟುಂಬದ ಸದಸ್ಯರು ಒಬ್ಬೊಬ್ಬರಾಗಿ ಮೃತಪಟ್ಟಿದ್ದರು. ಅಂತಿಮವಾಗಿ ಸೋನಿಯಾ ಗಾಂಧಿ ಸರಕಾರದ ಮುಖ್ಯಸ್ಥ ಸ್ಥಾನಕ್ಕೆ ಬಂದರು ಎಂಬ ರೀತಿಯಲ್ಲಿ ಪೋಸ್ಟ್ನಲ್ಲಿ ಪರೋಕ್ಷವಾಗಿ ಆರೋಪಿಸಲಾಗಿದೆ. ಇದರೊಂದಿಗೆ ‘ಎಷ್ಟು ಅನುಕೂಲಕರವಾಗಿದೆ!’ ಎಂಬ ವ್ಯಂಗ್ಯವನ್ನೂ ಬಳಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಂಜಯ್ ಗಾಂಧಿ ಅವರ ಸಾವಿನ ಬಳಿಕ ಮೇನಕಾ ಗಾಂಧಿ ಕುಟುಂಬದ ನಿವಾಸವನ್ನು ತೊರೆದ ವಿಚಾರವನ್ನೂ ಕಂಗನಾ ತಮ್ಮ ಪೋಸ್ಟ್ನಲ್ಲಿ ಪ್ರಸ್ತಾಪಿಸಿದ್ದರು.
ಈ ಪೋಸ್ಟ್ ಕೇವಲ ರಾಜಕೀಯ ಟೀಕೆಗೆ ಸೀಮಿತವಾಗಿಲ್ಲ. ಬದಲಾಗಿ ಜನರಲ್ಲಿ ದ್ವೇಷ ಮತ್ತು ಅಸಹಿಷ್ಣುತೆಯನ್ನು ಪ್ರಚೋದಿಸುವ, ಕೋಮು ಸೌಹಾರ್ದತೆಗೆ ಧಕ್ಕೆ ತರುವ ಹಾಗೂ ಸಾರ್ವಜನಿಕ ನೆಮ್ಮದಿಯನ್ನು ಹಾಳುಮಾಡುವ ಸಾಧ್ಯತೆಯಿದೆ ಎಂದು ಅತುಲ್ ಶರ್ಮಾ ಆರೋಪಿಸಿದ್ದಾರೆ.
ಇದಲ್ಲದೆ ತಪ್ಪು ಮಾಹಿತಿಯನ್ನು ಹರಡುವ ಮೂಲಕ ಜನರಲ್ಲಿ ಭಯ ಮತ್ತು ಆತಂಕ ಸೃಷ್ಟಿಸುವ ಹಾಗೂ ವಿವಿಧ ಸಮುದಾಯಗಳ ನಡುವೆ ದ್ವೇಷ ಬಿತ್ತುವ ಪ್ರಯತ್ನ ಇದಾಗಿದೆ ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಗುರುವಾರ ಸಂಜೆ 7.51ಕ್ಕೆ ಇ-ಮೇಲ್ ಮೂಲಕ ಪೊಲೀಸ್ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿರುವ ಅವರು, ತಕ್ಷಣ ಎಫ್ಐಆರ್ ದಾಖಲಿಸಿ ಕಂಗನಾ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ಕುರಿತು ಕಾಲಮಿತಿಯೊಳಗೆ ಸೈಬರ್ ಫೋರೆನ್ಸಿಕ್ ತನಿಖೆ ನಡೆಸುವಂತೆ ಮನವಿ ಮಾಡಿದ್ದರು.
ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 196(1)(b), 353(2) ಮತ್ತು 356(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಶಿಮ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಸಿಂಗ್ ಖಚಿತಪಡಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.






