ಸಂಸತ್ತಿನ ಬಳಿಯ ಸಂಸದರ ವಸತಿ ನಿಲಯದಲ್ಲಿ ಅಗ್ನಿ ಅವಘಡ

Photo | indiatoday
ಹೊಸದಿಲ್ಲಿ,ಅ.18: ರಾಜಧಾನಿಯ ಹೃದಯಭಾಗದಲ್ಲಿರುವ BD ಮಾರ್ಗದ ಬಹುಮಹಡಿ ಬ್ರಹ್ಮಪುತ್ರ ಅಪಾರ್ಟ್ಮೆಂಟ್ನಲ್ಲಿ ಶನಿವಾರ ಮಧ್ಯಾಹ್ನ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಈ ಅಪಾರ್ಟ್ಮೆಂಟ್ ಸಂಸತ್ ಸದಸ್ಯರಿಗೆ ನೀಡಿದ ಅಧಿಕೃತ ವಸತಿ ನಿಲಯಗಳಲ್ಲಿ ಒಂದಾಗಿದ್ದು, ಘಟನೆಯಿಂದ ನಿವಾಸಿಗಳಲ್ಲಿ ಭೀತಿ ಉಂಟಾಗಿತ್ತು.
2020ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟಿಸಲ್ಪಟ್ಟ ಈ ಕಟ್ಟಡದಲ್ಲಿ ಹಲವಾರು ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು ವಾಸಿಸುತ್ತಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಮೇಲಿನ ಮಹಡಿಗಳಲ್ಲೊಂದರಲ್ಲಿ ಅಚಾನಕ್ ಬೆಂಕಿ ಕಾಣಿಸಿಕೊಂಡಿದ್ದು, ಶೀಘ್ರದಲ್ಲೇ ಅದು ಇತರೆ ಭಾಗಗಳಿಗೆ ಆವರಿಸಿದೆ.
ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಘಟನೆಯ ಕುರಿತು ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಈವರೆಗೆ ಯಾವುದೇ ಪ್ರಾಣಹಾನಿ ಅಥವಾ ಗಂಭೀರ ಗಾಯಗಳ ಬಗ್ಗೆ ವರದಿಗಳು ಬಂದಿಲ್ಲ.
ಈ ನಡುವೆ, ತೃಣಮೂಲ ಕಾಂಗ್ರೆಸ್ ಸಂಸದ ಸಾಕೇತ್ ಗೋಖಲೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ದಿಲ್ಲಿಯ BD ಮಾರ್ಗದಲ್ಲಿರುವ ಬ್ರಹ್ಮಪುತ್ರ ಅಪಾರ್ಟ್ಮೆಂಟ್ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಎಲ್ಲಾ ರಾಜ್ಯಸಭಾ ಸದಸ್ಯರು ವಾಸಿಸುವ ಕಟ್ಟಡ ಇದು. ಸಂಸತ್ ಭವನದಿಂದ ಇಲ್ಲಿಗೆ ಕೇವಲ ಇನ್ನೂರು ಮೀಟರ್ ದೂರ ಇದೆ. 30 ನಿಮಿಷಗಳಾದರೂ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿಲ್ಲ. ಪದೇ ಪದೇ ಕರೆ ಮಾಡಿದರೂ ಪ್ರತಿಕ್ರಿಯೆಯಿಲ್ಲ. ದಿಲ್ಲಿ ಸರ್ಕಾರಕ್ಕೆ ನಾಚಿಕೆಯಾಗಬೇಕು,” ಎಂದು ಅವರು ಪೋಸ್ಟ್ ಮಾಡಿದ್ದಾರೆ.







