ಬಿಸಿ ಗಾಳಿ ಬೆಲೂನ್ನಲ್ಲಿ ಬೆಂಕಿ : ಮಧ್ಯಪ್ರದೇಶದ ಸಿಎಂ ಅಪಾಯದಿಂದ ಪಾರು

PC : X/@Khabarfast
ಭೋಪಾಲ, ಸೆ. 13: ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಮಂದಸೌರನ ಗಾಂಧಿ ಸಾಗರ್ ಅರಣ್ಯ ಪ್ರದೇಶದಲ್ಲಿ ಬಿಸಿ ಗಾಳಿ ಬೆಲೂನ್ನಲ್ಲಿ ಹಾರಾಟ ನಡೆಸಲು ಸಿದ್ಧತೆ ನಡೆಸುತ್ತಿದ್ದ ಸಂದರ್ಭ ಅದರ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆದರೆ, ಅವರು ಅಪಾಯದಿಂದ ಪಾರಾಗಿದ್ದಾರೆ.
ಶನಿವಾರ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ಘಟನೆಯ ವೀಡಿಯೊಗಳಲ್ಲಿ ಮೋಹನ್ ಯಾದವ್ ಅವರು ಜಾಲಿ ರೈಡ್ಗೆ ಬಿಸಿ ಗಾಳಿಯ ಬೆಲೂನ್ ಅನ್ನು ಏರಿದ ಸಂದರ್ಭ ಅದರ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಹಾಗೂ ಭದ್ರತಾ ಸಿಬ್ಬಂದಿ ಅವರನ್ನು ರಕ್ಷಿಸುತ್ತಿರುವುದು ಕಂಡು ಬಂದಿದೆ.
ಈ ಘಟನೆ ಶನಿವಾರ ಬೆಳಗ್ಗೆ ಸಂಭವಿಸಿದೆ. ಗಾಳಿಯ ರಭಸಕ್ಕೆ ಬೆಲೂನ್ ಹಾರುವ ಬದಲು ಕೆಳಗೆ ಒಂದು ಕಡೆಗೆ ಬಾಗಿದೆ ಹಾಗೂ ಅದರ ಎಂಜಿನ್ಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಧಾವಿಸಿದ ಭದ್ರತಾ ಸಿಬ್ಬಂದಿ ಮೋಹನ್ ಯಾದವ್ ಅವರನ್ನು ರಕ್ಷಿಸಿದರು. ಸ್ಥಳದಲ್ಲಿ ಇದ್ದ ತಜ್ಞರು ಬೆಂಕಿಯನ್ನು ನಂದಿಸಿದರು.
ಮೋಹನ್ ಯಾದವ್ ಅವರು ಗಾಂಧಿ ಸಾಗರ್ ಫಾರೆಸ್ಟ್ ರಿಟ್ರೀಟ್ನಲ್ಲಿ ಗಾಂಧಿ ಸಾಗರ್ ಉತ್ಸವದ ನಾಲ್ಕನೇ ಆವೃತ್ತಿಯನ್ನು ಶುಕ್ರವಾರ ಉದ್ಘಾಟಿಸಿದ್ದರು. ಅನಂತರ ಅಲ್ಲೇ ಇದ್ದರು.





