ಮೊಟ್ಟಮೊದಲ ಫೋರ್ಬ್ಸ್ ಹಾಲ್ ಆಫ್ ಶೇಮ್ ಪಟ್ಟಿ ಪ್ರಕಟ: ಯಾರ್ಯಾರಿದ್ದಾರೆ ಗೊತ್ತೇ?
ಸ್ಯಾಮ್ ಬ್ಯಾಂಕ್ ಮನ್ ಫ್ರೈಡ್ (Photo: twitter.com/msnindia)
ಹೊಸದಿಲ್ಲಿ: ವಿಶ್ವದ ಬದಲಾವಣೆಗೆ ಕಾರಣವಾಗುವ ಸಾಮರ್ಥ್ಯವನ್ನು ಪ್ರದರ್ಶಿಸುವ ಯುವ ಉದ್ಯಮಶೀಲರ '30 ಅಂಡರ್ 30' ಪಟ್ಟಿಯನ್ನು ಕಳೆದ ಹದಿಮೂರು ವರ್ಷಗಳಿಂದ ಪ್ರತಿಷ್ಠಿತ ' ಫೋರ್ಬ್ಸ್' ನಿಯತಕಾಲಿಕ ಪ್ರಕಟಿಸುತ್ತಾ ಬಂದಿದೆ. ಈ ಪಟ್ಟಿಯಲ್ಲಿ ಕಾಣಿಸಿಕೊಂಡ ಬಹುತೇಕ ಮಂದಿ ಸಾಂಸ್ಕೃತಿಕ ಪ್ರಭಾವಶಾಲಿಗಳು, ತಂತ್ರಜ್ಞಾನ ಕ್ಷೇತ್ರದ ದಿಗ್ಗಜರು ಮತ್ತು ಕೋಟ್ಯಧಿಪತಿಗಳೂ ಆಗಿದ್ದಾರೆ.
ಮೊಟ್ಟಮೊದಲ ಬಾರಿಗೆ "ಹಾಲ್ ಆಫ್ ಶೇಮ್" ಪಟ್ಟಿಯನ್ನು ಈ ನಿಯತಕಾಲಿಕ ಬಿಡುಗಡೆ ಮಾಡಿದೆ. 30 ಅಂಡರ್ 30 ಪಟ್ಟಿಯಲ್ಲಿ ಈ ಹಿಂದೆ ಕಾಣಿಸಿಕೊಂಡು, ತಮ್ಮ ಅಸ್ಪಷ್ಟ ಹಾದಿ ತುಳಿದವರ ಹೆಸರುಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಪಟ್ಟಿಯಲ್ಲಿ ಕ್ರಿಪ್ಟೊ ಕರೆನ್ಸಿ ಕ್ಷೇತ್ರದ ಭವಿಷ್ಯದ ತಾರೆ ಎನಿಸಿಕೊಂಡಿದ್ದ ಸ್ಯಾಮ್ ಬ್ಯಾಂಕ್ ಮನ್ ಫ್ರೈಡ್ ಹೆಸರು ಮೊಟ್ಟಮೊದಲನೆಯದು. ವಂಚನೆ ಮತ್ತು ಪಿತೂರಿ ಸಂಬಂಧ ಇತ್ತೀಚೆಗೆ 10 ವರ್ಷದ ಜೈಲು ಶಿಕ್ಷೆಗೆ ಇವರು ಗುರಿಯಾಗಿದ್ದರು.
ಇದೇ ಹಾದಿಯಲ್ಲಿದ್ದ ಕ್ಯಾರೊಲಿನ್ ಎಲ್ಲಿಸನ್, 2017ರಲ್ಲಿ ನೂರು ಕೋಟಿ ಡಾಲರ್ನ ರಿಯಲ್ ಎಸ್ಟೇಟ್ ಸಾಮ್ರಾಜ್ಯವನ್ನು ನಿರ್ಮಿಸಿದ್ದ ವರ್ಲ್ಡ್ ಕ್ಲಾಸ್ ಕ್ಯಾಪಿಟಲ್ ಗ್ರೂಪ್ ನ ನೇಟ್ ಪಾಲ್, ಫ್ರಾಂಕ್ ನ ಸಂಸ್ಥಾಪಕ ಹಾಗೂ ಮಾಜಿ ಸಿಇಓ ಚಾರ್ಲಿ ಜವೀಸ್ ಕೂಡಾ ಈ ಪಟ್ಟಿಯಲ್ಲಿದ್ದಾರೆ. ಪಾಲ್ ವಿರುದ್ಧವೂ ಇತ್ತೀಚೆಗೆ ವಂಚನೆ ಹಾಗೂ ಪಿತೂರಿ ಆರೋಪ ಸಾಬೀತಾಗಿದ್ದು, ಜವೀಸ್ ತಮ್ಮ ಕಂಪನಿಯ ಪ್ರಮಾಣವನ್ನು ತಪ್ಪಾಗಿ ಪ್ರಸ್ತುತಪಡಿಸಿದ ಆರೋಪ ಎದುರಿಸುತ್ತಿದ್ದಾರೆ.
ಡಫೆನ್ಸ್ ಡಿಸ್ಟ್ರಿಬ್ಯೂಟೆಡ್ ಎಂಬ ಲಾಭ ರಹಿತ ಸಂಸ್ಥೆಯ ಸಂಸ್ಥಾಪಕ ಕಾಡಿ ವಿಲ್ಸನ್ ಆನ್ ಲೈನ್ ನಲ್ಲಿ ಪರಿಚಯವಾದ 16 ವರ್ಷದ ಯುವತಿಗೆ ಲೈಂಗಿಕತೆಗಾಗಿ 500 ಡಾಲರ್ ನೀಡಿದ ಆರೋಪ ಎದುರಿಸುತ್ತಿದ್ದು, ಇದೀಗ ಲೈಂಗಿಕ ಅಪರಾಧಿ ಎಂದು ಘೋಷಿತರಾಗಿದ್ದಾರೆ. ಫಾರ್ಮಾ ಬ್ರೊ ಎಂದು ಕರೆಸಿಕೊಂಡಿರುವ ಮಾರ್ಟಿನ್ ಶ್ಕೆರೇಲಿ, ಡರಪ್ರಿಮ್ ಎಂಬ ಮಾತ್ರೆಯ ದರವನ್ನು ಶೇಕಡ 5455 ರಷ್ಟು ಹೆಚ್ಚಿಸಿದ ಆರೋಪದಲ್ಲಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರೆ, ಲ್ಯಾಂಗ್ವೇಜ್ ಬ್ರಾಂಡ್ ಅವೇ ಸಹಸಂಸ್ಥಾಪಕಿ ಸ್ಟೆಪ್ ಕೊರೆ, 30 ದಶಲಕ್ಷ ಡಾಲರ್ ನೆರವು ಪಡೆದು ಇನ್ನೂ ಯವುದೇ ಸೇವೆ ಅರಂಭಿಸದ ಕ್ಲಿಂಕ್ಲೆ ಸಂಸ್ಥಾಪಕ ಲ್ಯೂಕಸ್ ಡ್ಯೂಪ್ಲನ್, ವುಮನ್ ಆಫ್ ದ ಸಿಟಿ ಮ್ಯಾಗಝಿನ್ ನ ಪ್ರಧಾನ ಸಂಪಾದಕ ಪರ್ದಿಯಾ ಪ್ರೆಡರ್ ಗಸ್ಟ್, ಜೇಮ್ಸ್ ಓ ಕೀಫಿ ಪಟ್ಟಿಯಲ್ಲಿರುವ ಇತರರು.