ಕರ್ನಾಟಕದಲ್ಲಿ ಜಿಎಸ್ಟಿ ವಂಚನೆ ಐದು ಪಟ್ಟು ಹೆಚ್ಚಳ: ನಿರ್ಮಲಾ ಸೀತಾರಾಮನ್

ನಿರ್ಮಲಾ ಸೀತಾರಾಮನ್ | PC : PTI
ಹೊಸದಿಲ್ಲಿ,ಆ.11: ವಿತ್ತವರ್ಷ 2024-25ರಲ್ಲಿ ಕರ್ನಾಟಕದಲ್ಲಿ 39,577 ಕೋಟಿ ರೂಪಾಯಿಗಳ ತೆರಿಗೆ ವಂಚನೆಯನ್ನು ಕೇಂದ್ರ ಜಿಎಸ್ಟಿ ಅಧಿಕಾರಿಗಳು ಪತ್ತೆ ಹಚ್ಚಿದ್ದು, ಇದು ಕಳೆದ ವಿತ್ತವರ್ಷಕ್ಕೆ ಹೋಲಿಸಿದರೆ ಐದು ಪಟ್ಟು ಹೆಚ್ಚಳವಾಗಿದೆ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಲೋಕಸಭೆಯಲ್ಲಿ ತಿಳಿಸಿದರು.
ಕೇಂದ್ರ ಜಿಎಸ್ಟಿ ಅಧಿಕಾರಿಗಳು ಯುಪಿಐ ವಹಿವಾಟನ್ನು ಆಧರಿಸಿ ಯಾವುದೇ ನೋಟಿಸ್ ಗಳನ್ನು ಹೊರಡಿಸಿಲ್ಲ ಎಂದು ಅವರು ಲಿಖಿತ ಉತ್ತರವೊಂದರಲ್ಲಿ ತಿಳಿಸಿದರು.
ಸರಕಾರವು ಕರ್ನಾಟಕ ಸೇರಿದಂತೆ ದೇಶದಲ್ಲಿ ಸಣ್ಣ ವರ್ತಕರು ಮತ್ತು ಬೀದಿ ಬದಿ ವ್ಯಾಪಾರಿಗಳ ವ್ಯವಹಾರ ಚಟುವಟಿಕೆಗಳ ಮೌಲ್ಯಮಾಪನ ಮಾಡದೇ ಅವರಿಗೆ ಜಿಎಸ್ಟಿ ನೋಟಿಸ್ ಗಳನ್ನು ಹೊರಡಿಸಿದೆಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.
ಕಳೆದ ತಿಂಗಳು ಬೆಂಗಳೂರಿನಲ್ಲಿಯ ಹಲವಾರು ಸಣ್ಣ ವ್ಯಾಪಾರಿಗಳಿಗೆ ಅವರ ಯುಪಿಐ ವಹಿವಾಟುಗಳನ್ನು ಆಧರಿಸಿ ಭಾರೀ ಪ್ರಮಾಣದಲ್ಲಿ ಜಿಎಸ್ಟಿ ಪಾವತಿಸುವಂತೆ ರಾಜ್ಯ ಜಿಎಸ್ಟಿ ಕ್ಷೇತ್ರಾಧಿಕಾರಿಗಳು ನೋಟಿಸ್ ಗಳನ್ನು ಕಳುಹಿಸಿದ್ದರು.
ಕರ್ನಾಟಕದಲ್ಲಿ ಪತ್ತೆಯಾದ ಜಿಎಸ್ಟಿ ವಂಚನೆಯ ವಿವರಗಳನ್ನು ಕೋರಿದ ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಸೀತಾರಾಮನ್,2024-25ರಲ್ಲಿ 39,577 ಕೋಟಿ ರೂಪಾಯಿಗಳಷ್ಟು ಜಿಎಸ್ಟಿ ವಂಚನೆಯ 1,254 ಪ್ರಕರಣಗಳನ್ನು ಕೇಂದ್ರ ಜಿಎಸ್ಟಿ ಅಧಿಕಾರಿಗಳು ಪತ್ತೆ ಹಚ್ಚಿದ್ದು, ಒಂಭತ್ತು ಜನರನ್ನು ಬಂಧಿಸಲಾಗಿದೆ. 1,623 ಕೋಟಿ ರೂಪಾಯಿಗಳನ್ನು ಸ್ವಯಂಪ್ರೇರಿತ ಪಾವತಿಯ ಮೂಲಕ ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು.
2023-24ರಲ್ಲಿ 7,202 ಕೋಟಿ ರೂಪಾಯಿ ತೆರಿಗೆ ವಂಚನೆಯ 925 ಪ್ರಕರಣಗಳನ್ನು ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸಲಾಗಿದೆ. 1,197 ಕೋಟಿ ರೂಪಾಯಿಗಳನ್ನು ವಸೂಲು ಮಾಡಲಾಗಿದೆ. 2022-23ರಲ್ಲಿ 25,839 ಕೋಟಿ ರೂಪಾಯಿ ತೆರಿಗೆ ವಂಚನೆಯ 959 ಪ್ರಕರಣಗಳನ್ನು ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸಲಾಗಿದೆ. 1,705 ಕೋಟಿ ರೂಪಾಯಿ ತೆರಿಗೆಯನ್ನು ಸ್ವಯಂಪ್ರೇರಿತ ಪಾವತಿಯ ಮೂಲಕ ವಸೂಲು ಮಾಡಲಾಗಿದೆ ಎಂದೂ ಸೀತಾರಾಮನ್ ತಿಳಿಸಿದರು.







