ಸಿಜೆಪಿಯ ಶಾಲಾ ತಪಾಸಣೆ ಕರೆ ಬೆನ್ನಲ್ಲೆ ಶಾಲಾ ಆವರಣಗಳಿಗೆ ಹೊರಗಿನವರ ಪ್ರವೇಶ ನಿರ್ಬಂಧಿಸಿದ ರಾಜಸ್ಥಾನ ಸರಕಾರ

Photo | thehindu
ಜೈಪುರ: ಶಿಥಿಲಾವಸ್ಥೆಯಲ್ಲಿರುವ ಸರಕಾರಿ ಶಾಲೆಗಳ ತಪಾಸಣೆ ನಡೆಸಲು ಕಾಕ್ರೋಚ್ ಜನತಾ ಪಾರ್ಟಿ ರಾಜ್ಯವ್ಯಾಪಿ ಅಭಿಯಾನ ಘೋಷಿಸಿದ ಬೆನ್ನಲ್ಲೇ, ರಾಜಸ್ಥಾನ ಶಿಕ್ಷಣ ಇಲಾಖೆಯು ಪ್ರಾಂಶುಪಾಲರು ಅಥವಾ ಶಾಲಾ ಮುಖ್ಯಸ್ಥರ ಪೂರ್ವಾನುಮತಿ ಇಲ್ಲದೆ ಹೊರಗಿನವರು ಶಾಲಾ ಆವರಣ ಪ್ರವೇಶಿಸುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ.
ಅಧಿಕೃತ ಕರ್ತವ್ಯ ನಿರ್ವಹಿಸುವ ಸರಕಾರಿ ಅಧಿಕಾರಿಗಳಿಗೆ ಮಾತ್ರ ಈ ಅನುಮತಿಯಿಂದ ವಿನಾಯಿತಿ ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ವಿದ್ಯಾರ್ಥಿಗಳು, ಶಿಕ್ಷಕರು ಅಥವಾ ಶಾಲಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಛಾಯಾಗ್ರಹಣ, ವಿಡಿಯೋಗ್ರಫಿ, ಸಂದರ್ಶನ, ಆಡಿಯೋ ರೆಕಾರ್ಡಿಂಗ್ ಅಥವಾ ಲೈವ್ ಸ್ಟ್ರೀಮಿಂಗ್ ಮಾಡಲು ಪ್ರಾಂಶುಪಾಲರ ಪೂರ್ವಾನುಮತಿ ಕಡ್ಡಾಯವಾಗಿದೆ. ಶಾಲಾ ಆವರಣ ಪ್ರವೇಶಿಸುವ ಮುನ್ನ ಪ್ರತಿಯೊಬ್ಬ ಸಂದರ್ಶಕರೂ ಸಂದರ್ಶಕರ ರಿಜಿಸ್ಟರ್ನಲ್ಲಿ ಸಹಿ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ರಾಜ್ಯದ ಸರಕಾರಿ ಶಾಲೆಗಳ ದುರಸ್ತಿ ಮತ್ತು ಹೊಣೆಗಾರಿಕೆಯನ್ನು ಒತ್ತಾಯಿಸಿ ಸಿಜೆಪಿ ʼಸ್ಕೂಲ್ ಠೀಕ್ ಕರೋ (ಶಾಲೆ ಸರಿಪಡಿಸಿ)ʼ ಅಭಿಯಾನ ಆರಂಭಿಸುವುದಾಗಿ ಘೋಷಿಸಿತ್ತು.
ಅಸುರಕ್ಷಿತ ಅಥವಾ ಕಳಪೆ ನಿರ್ವಹಣೆಯ ಶಾಲೆಗಳನ್ನು ಪರಿಶೀಲಿಸುವಂತೆ ಜೈಪುರ, ಅಜ್ಮೀರ್, ಜೋಧ್ಪುರ, ಉದಯಪುರ, ಧೋಲ್ಪುರ, ಭರತ್ಪುರ, ಕೋಟಾ, ಬಾರ್ಮರ್ ಮತ್ತು ಹನುಮಾನ್ಗಢ ಸೇರಿದಂತೆ ಒಂಬತ್ತು ಜಿಲ್ಲೆಗಳಿಂದ ಸಿಜೆಪಿಗೆ ಮನವಿಗಳು ಬಂದಿದ್ದು, ಮುಂದಿನ ಎರಡು ವಾರಗಳಲ್ಲಿ ಸ್ವಯಂಸೇವಕರು ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡಲಿದ್ದಾರೆ ಎಂದು ರಾಷ್ಟ್ರೀಯ ವಕ್ತಾರ ಅಶುತೋಷ್ ರಾಂಕಾ ಹೇಳಿದ್ದರು.
"ಶಾಲೆಗಳನ್ನು ದುರಸ್ತಿ ಮಾಡುವ ಬೇಡಿಕೆಗೆ ಆಡಳಿತ ಕಿವಿಗೊಡದ ಕಾರಣ, ಈ ಸ್ಥಳಗಳಲ್ಲಿನ ಕೆಲವು ಶಾಲೆಗಳನ್ನು ಪರಿಶೀಲಿಸಿ ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲು ನಮಗೆ ವಿನಂತಿಗಳು ಬಂದಿವೆ. ಉತ್ತಮ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದು ಯಾವುದೇ ರಾಜ್ಯ ಸರಕಾರದ ಮೂಲಭೂತ ಕರ್ತವ್ಯ. ಸರ್ಕಾರಕ್ಕೆ ಇದನ್ನು ಒದಗಿಸಲು ಸಾಧ್ಯವಾಗದಿದ್ದರೆ, ಅಧಿಕಾರದಲ್ಲಿ ಮುಂದುವರಿಯುವುದು ಏಕೆ?" ಎಂದು ರಾಂಕಾ ಪ್ರಶ್ನಿಸಿದ್ದರು.






